ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಕ್ಕಾಗಿ ಬಿಜೆಪಿಯಿಂದ ಅಂಬೇಡ್ಕರ್‌ಗೆ ಅಪಮಾನ: ಯು.ಟಿ.ಖಾದರ್

Last Updated 29 ನವೆಂಬರ್ 2019, 11:58 IST
ಅಕ್ಷರ ಗಾತ್ರ

ಹೊಸಪೇಟೆ: ‘ಇತ್ತೀಚಿಗೆ ಪ್ರಕಟಿಸಿದ ಪುಸ್ತಕದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಬಿಜೆಪಿ ಉದ್ದೇಶಪೂರ್ವಕವಾಗಿಯೇ ಅಪಮಾನಿಸಿದೆ. ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂದು ನೋಡುವುದಕ್ಕಾಗಿ ಅದನ್ನು ಪ್ರಯೋಗ ಮಾಡಿ ನೋಡಿದೆ’ ಎಂದು ಶಾಸಕ ಯು.ಟಿ. ಖಾದರ್‌ ಆರೋಪಿಸಿದರು.

ಶುಕ್ರವಾರ ನಗರದ ದೊಡ್ಡ ಮಸೀದಿ ಪ್ರದೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ ಪರ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.‘ಸಂವಿಧಾನ ದಿನಾಚರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ವಿತರಿಸಿರುವ ಪುಸ್ತಕದಲ್ಲಿ ಆಗಿರುವ ಪ್ರಮಾದ ಅಧಿಕಾರಿಗಳಿಂದಲ್ಲ. ಅದನ್ನು ಬಿಜೆಪಿ ಎಲ್ಲ ಗೊತ್ತಿದ್ದು ಮಾಡಿಸಿದೆ. ಜನರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದಂತೆ ಅಧಿಕಾರಿಗಳ ಮೇಲೆ ಜವಾಬ್ದಾರಿ ಹಾಕಿ ಅವರು ನುಣುಚಿಕೊಂಡಿದ್ದಾರೆ’ ಎಂದರು.

‘ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಬಿಜೆಪಿ ನಿರಂತರವಾಗಿ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ರಾಷ್ಟ್ರಪತಿ ಆಡಳಿತ ಹಿಂದಕ್ಕೆ ಪಡೆದು, ಅವರು ಸರ್ಕಾರ ರಚಿಸಿದ್ದರು. ಆದರೆ, ಸುಪ್ರೀಂಕೋರ್ಟ್‌ ಮಧ್ಯ ಪ್ರವೇಶ ಮಾಡಿದ್ದರಿಂದ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ರಾಜೀನಾಮೆ ನೀಡಿದರು. ಎಲ್ಲಾ ರಾಜ್ಯಗಳಲ್ಲಿ ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪ ಮಾಡಿದರು.

‘ಬಿಜೆಪಿಯವರು ಬಾಯಲ್ಲಿ ಸ್ವದೇಶಿ ಮಂತ್ರ ಜಪಿಸುತ್ತಾರೆ. ಆದರೆ, ಅವರ ಪಕ್ಷದ ಮುಖಂಡರು ವಿದೇಶಿಯರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಅನೇಕ ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಆದರೆ, ಅವುಗಳಿಂದ ದೇಶದ ಜನಕ್ಕಿಂತ ವಿದೇಶಿಯರಿಗೆ ಹೆಚ್ಚು ಪ್ರಯೋಜನವಾಗಿದೆ’ ಎಂದು ದೂರಿದರು.

‘ಕಾಂಗ್ರೆಸ್‌ ಅವಧಿಯಲ್ಲಿ ಅನೇಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಸ್ಥಾಪಿಸಲಾಗಿತ್ತು. ಈಗ ಅವುಗಳನ್ನು ಹಾಳು ಮಾಡುತ್ತಿದ್ದಾರೆ. ಖಾಸಗಿಯವರಿಗೆ ಲಾಭ ಮಾಡಿಕೊಡಬೇಕು ಎನ್ನುವ ಒಂದೇ ಕಾರಣಕ್ಕಾಗಿ ಬಿ.ಎಸ್‌.ಎನ್‌.ಎಲ್‌. ಸೇರಿದಂತೆ ಅನೇಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಚ್ಚಲು ಹೊರಟಿದ್ದಾರೆ’ ಎಂದರು.ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌, ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ. ಮುಖಂಡರಾದ ಅಬ್ದುಲ್‌ ವಹಾಬ್‌, ಬಡಾವಲಿ, ಗೌಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT