ಲೋಕಸಭೆ ಗೆಲುವಿನ ಹುಮ್ಮಸ್ಸಿನಲ್ಲಿ ಬಿಜೆಪಿ

ಮಂಗಳವಾರ, ಜೂನ್ 18, 2019
24 °C
ಸಚಿವ ಪಿ.ಟಿ. ಪರಮೇಶ್ವರ ನಾಯ್ಕಗೆ ಮತ್ತೊಂದು ಅಗ್ನಿ ಪರೀಕ್ಷೆ; ಬಿಜೆಪಿಯಲ್ಲಿ ಒಗ್ಗಟ್ಟಿನ ಶಕ್ತಿ

ಲೋಕಸಭೆ ಗೆಲುವಿನ ಹುಮ್ಮಸ್ಸಿನಲ್ಲಿ ಬಿಜೆಪಿ

Published:
Updated:

ಹೂವಿನಹಡಗಲಿ: ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದು ಕೆಲವೇ ದಿನಗಳು ಉರುಳಿವೆ. ಅಷ್ಟರಲ್ಲಾಗಲೇ ಮತ್ತೊಂದು ಚುನಾವಣೆ ಎದುರಿಸಲು ಮಲ್ಲಿಗೆ ನಾಡು ಹೂವಿನಹಡಗಲಿ ಸಜ್ಜಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಭಾರಿ ಜಯ ದಾಖಲಿಸಿರುವ ಬಿಜೆಪಿ ಹುಮ್ಮಸ್ಸಿನಲ್ಲಿದೆ. ಗೆಲುವಿನ ಹುಮ್ಮಸ್ಸು, ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಮತ್ತೊಂದು ಜಯ ದಾಖಲಿಸಲು ಬಿಜೆಪಿ ತುದಿಗಾಲ ಮೇಲೆ ನಿಂತಿದೆ. ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಬಿಜೆಪಿ 14 ಸಾವಿರಕ್ಕೂ ಹೆಚ್ಚಿನ ಮತಗಳ ಲೀಡ್‌ ಪಡೆದುಕೊಂಡಿದೆ. ಇದು ಸಹಜವಾಗಿಯೇ ಬಿಜೆಪಿಯ ಉತ್ಸಾಹ ಇಮ್ಮಡಿಗೊಳಿಸಿದೆ.

ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಗೆ ಉತ್ತಮ ಲೀಡ್‌ ಸಿಕ್ಕಿದೆ. ಆದರೆ, ಪಟ್ಟಣದಲ್ಲಿ ಕಾಂಗ್ರೆಸ್‌ಗೆ ಲೀಡ್‌ ಸಿಕ್ಕಿದೆ. 300 ಮತಗಳ ಲೀಡ್‌ ಸಿಕ್ಕಿದರೂ ಕಾಂಗ್ರೆಸ್‌ ಬೀಗುವಂತಿಲ್ಲ. ಬಿಜೆಪಿ ಉತ್ತಮ ಸಾಧನೆ ಮಾಡುವತ್ತ ಗಮನ ಹರಿಸಿದೆ.

ದಿ. ಎಂ.ಪಿ. ಪ್ರಕಾಶ ಅವರು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಸುಮಾರು ಎರಡು ದಶಕಕ್ಕೂ ಅಧಿಕ ಸಮಯ ಪುರಸಭೆ ಜೆ.ಡಿ.ಎಸ್‌. ತೆಕ್ಕೆಯಲ್ಲಿತ್ತು. ಆ ಪಕ್ಷದ ಭದ್ರಕೋಟೆಯಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪ್ರಕಾಶ ಅವರು ಕಾಂಗ್ರೆಸ್‌ ಸೇರಿದರು. ಸುದೀರ್ಘ ಅಜ್ಞಾತವಾಸದ ಬಳಿಕ ಕಾಂಗ್ರೆಸ್‌ ಬಲಿಷ್ಠಗೊಂಡಿತು. ಪ್ರಕಾಶ ಅವರು ಕಾಲವಾದ ಬಳಿಕ ಅವರ ಮಗ ಎಂ.ಪಿ. ರವೀಂದ್ರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದರು. ಪುರಸಭೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ಈಗ ಅವರೂ ಕಾಲವಾಗಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಗಾರಿಕೆ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ಹೆಗಲಿಗೆ ಬಿದ್ದಿದೆ.

ಸಚಿವರಾಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದಕ್ಕೆ ಪರಮೇಶ್ವರ ನಾಯ್ಕ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಸ್ವಪಕ್ಷೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಬಹುದೊಡ್ಡ ಸವಾಲು ಅವರ ಮೇಲಿದೆ. ಆ ಸವಾಲನ್ನು ಸ್ವೀಕರಿಸಿರುವ ಅವರು, ಬಿಡುವಿಲ್ಲದೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಗೆಲ್ಲುವುದಕ್ಕೆ ರಣತಂತ್ರ ರೂಪಿಸಿದ್ದಾರೆ.

ಇನ್ನು ಗುಂಪುಗಾರಿಕೆಯಿಂದ ಒಳ ಏಟುಗಳನ್ನು ತಿನ್ನುತ್ತಲೇ ಬಂದಿರುವ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಚೇತರಿಸಿಕೊಂಡಿದೆ. ಆ ಪಕ್ಷದ ಮುಖಂಡರಾದ ಓದೋ ಗಂಗಪ್ಪ, ಚಂದ್ರ ನಾಯ್ಕ ಹಾಗೂ ವಿಜಯಕುಮಾರ ಅವರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅದರ ಫಲ ಅವರ ಪಕ್ಷಕ್ಕೆ ಸಿಕ್ಕಿದೆ. ಈ ಚುನಾವಣೆಯಲ್ಲೂ ಅವರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಇನ್ನು ಜೆ.ಡಿ.ಎಸ್‌. ನಲ್ಲಿ ಹೇಳಿಕೊಳ್ಳುವಂತಹ ಮುಖಂಡರುಗಳಿಲ್ಲ. ಆ ಪಕ್ಷ ಕೇವಲ ಆರು ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಈಗಾಗಲೇ ಒಂದು ವಾರ್ಡ್‌ನಲ್ಲಿ ಅವಿರೋಧ ಆಯ್ಕೆ ನಡೆದಿದೆ. ಕಾಂಗ್ರೆಸ್‌ 22 ವಾರ್ಡ್‌ಗಳಿಗೆ ಸ್ಪರ್ಧಿಸುತ್ತಿದ್ದರೆ, ಬಿಜೆಪಿ 21 ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಐದು ಕಡೆಗಳಲ್ಲಿ ಪಕ್ಷೇತರರು ಸ್ಪರ್ಧಿಸುತ್ತಿದ್ದಾರೆ. 15 ವಾರ್ಡ್‌ಗಳಲ್ಲಿ ಕಾಂಗ್ರೆಸ್‌–ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಅಂತಿಮವಾಗಿ ಮತದಾರ ಪ್ರಭು ಯಾರಿಗೆ ಅಧಿಕಾರದ ಗದ್ದುಗೆ ಮೇಲೆ ಕೂರಿಸುವರು ಎಂಬುದು ಮೇ 31ಕ್ಕೆ ಗೊತ್ತಾಗಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !