ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆಯಂತೆ ಈ ಚುನಾವಣೆ ಗೆಲ್ಲಲಿ: ಜಗದೀಶ ಶೆಟ್ಟರ್ ಸವಾಲು

ಬಿಜೆಪಿ ಕಾರ್ಯಕರ್ತರ ಸಭೆ
Last Updated 26 ಮಾರ್ಚ್ 2019, 10:47 IST
ಅಕ್ಷರ ಗಾತ್ರ

ಹೊಸಪೇಟೆ: ‘ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ತೋರಿಸಲಿ’ ಎಂದು ಶಾಸಕ, ಬಿಜೆಪಿ ಚುನಾವಣಾ ಉಸ್ತುವಾರಿ ಜಗದೀಶ ಶೆಟ್ಟರ್‌ ಹೇಳಿದರು.

‘ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಬೇಕೆಂದು ಸಮ್ಮಿಶ್ರ ಸರ್ಕಾರದ ಮುಖಂಡರು ಜಿಲ್ಲೆಯಲ್ಲಿ ಬಿಡಾರ ಹೂಡಿದ್ದರು. ಹಣ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಜಯಿಸಿದ್ದರು. ಈಗ ಇಡೀ ದೇಶದಾದ್ಯಂತ ಚುನಾವಣೆ ನಡೆಯುತ್ತಿರುವುದರಿಂದ ಹಣ, ಅಧಿಕಾರ ನಡೆಯುವುದಿಲ್ಲ. ಸಮರ್ಥ ಪ್ರಧಾನಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜನ ಮತ ಹಾಕುತ್ತಾರೆ. ಆ ಸಮರ್ಥ ವ್ಯಕ್ತಿ ಮೋದಿಯಾಗಿದ್ದಾರೆ. ಇಡೀ ದೇಶದಲ್ಲಿ ಅವರ ಪರವಾದ ಅಲೆಯಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅದು ಸುನಾಮಿಯಾಗಿ ಬದಲಾಗಲಿದೆ’ ಎಂದು ತಿಳಿಸಿದರು.

‘ಆಯಾ ಪಕ್ಷದ ಕಾರ್ಯಕರ್ತರು ಅವರ ಪಕ್ಷಕ್ಕಾಗಿ ದುಡಿಯುವುದು ಸಹಜ. ಆದರೆ, ಇಡೀ ದೇಶದ ಜನ ಈ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಹೊರದೇಶದ ಜನ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಿ ಮೋದಿ ಪರ ಜನಾಭಿಪ್ರಾಯ ರೂಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸ್ವತಃ ಕಾಂಗ್ರೆಸ್‌ ಮುಖಂಡರೇ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವರು ಎಂದು ಹೇಳುತ್ತಿದ್ದಾರೆ. ಅವರ ಮಾತು ನಿಜವಾಗಲಿದೆ’ ಎಂದು ಭವಿಷ್ಯ ನುಡಿದರು.

‘60 ವರ್ಷ ಕಾಂಗ್ರೆಸ್‌ನವರು ಈ ದೇಶವನ್ನು ಲೂಟಿ ಮಾಡಿದ್ದಾರೆ. ದೇಶದ ಹಿತವನ್ನು ಬಲಿಕೊಟ್ಟು ರಾಜಕಾರಣ ಮಾಡುತ್ತ ಬಂದಿದ್ದಾರೆ. ಆದರೆ, ಮೋದಿಯವರ ಗಟ್ಟಿ ನಿರ್ಧಾರಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸು ಹೆಚ್ಚಾಗಿದೆ. ಮನಮೋಹನ್‌ ಸಿಂಗ್‌ ಅವರ ಅಳುಬುರುಕುತನದಿಂದ ಉಗ್ರಗಾಮಿಗಳು ಬಲಿಷ್ಠರಾಗಿದ್ದರು. ಆದರೆ, ಮೋದಿಯವರ ಕಠಿಣ ನಿಲುವುಗಳಿಂದ ಉಗ್ರಗಾಮಿಗಳು ಕಂಗಾಲಾಗಿದ್ದಾರೆ’ ಎಂದರು.

ಶಾಸಕ ಬಿ. ಶ್ರೀರಾಮುಲು ಮಾತನಾಡಿ, ‘ದೇಶದಲ್ಲಿ ಕಾಂಗ್ರೆಸ್‌ ಇರಬಾರದು. ಕಾಂಗ್ರೆಸ್‌ ಇದ್ದರೆ ದೇಶಕ್ಕೆ ಅಪಾಯ. ಭಾರತ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು’ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ರಾಣಿ ಸಂಯುಕ್ತಾ, ತಾಲ್ಲೂಕು ಅಧ್ಯಕ್ಷ ಅನಂತ ಸ್ವಾಮಿ, ಮುಖಂಡರಾದ ಕಟಗಿ ರಾಮಕೃಷ್ಣ, ಸಾಲಿ ಸಿದ್ದಯ್ಯ ಸ್ವಾಮಿ, ಜಂಬಾನಹಳ್ಳಿ ವಸಂತ, ಚಂದ್ರಕಾಂತ ಕಾಮತ್‌, ವೈ. ಯಮುನೇಶ್‌, ಶಂಕರ್‌ ಮೇಟಿ, ಶ್ರೀನಿವಾಸ್‌ ರೆಡ್ಡಿ, ರಾಮನಗೌಡ ಇದ್ದರು.

ಮೋದಿ ನಾಯಕತ್ವದಲ್ಲಿ ದೇಶ ಸುರಕ್ಷಿತ:
(ಹೂವಿನಹಡಗಲಿ ವರದಿ): ‘ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ. ಜನಸಾಮಾನ್ಯರು ಅವರ ಬೆನ್ನಿಗೆ ನಿಂತಿರುವುದರಿಂದ ಈ ಬಾರಿಯೂ ಮೋದಿಯ ಗೆಲುವು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದ ಸೋಮವಾರ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ, ‘ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ, ಶಾಮನೂರು ಶಿವಶಂಕರಪ್ಪನವರು ಮೋದಿ ನಾಯಕತ್ವವನ್ನು ಹೊಗಳಿದ್ದಾರೆ. ಇನ್ನು ಎರಡು ಅವಧಿಗೆ ಮೋದಿ ಗೆಲ್ಲಲಿದ್ದಾರೆ ಎಂಬ ಪೂಜಾರಿ ಭವಿಷ್ಯ ನಿಜವಾಗಲಿದೆ. ಕಾಂಗ್ರೆಸ್ಸಿಗರೇ ಈ ರೀತಿ ಸತ್ಯ ಒಪ್ಪಿಕೊಳ್ಳುವುದನ್ನು ನೋಡಿದರೆ ರಾಜ್ಯದಲ್ಲಿ 26 ರಿಂದ 28 ಸ್ಥಾನ ಗೆಲ್ಲುವ ವಿಶ್ವಾಸ ಮೂಡಿದೆ’ ಎಂದರು.

‘ಪುಲ್ವಾಮ ದಾಳಿಗೆ ಪ್ರತಿಯಾಗಿ ನಮ್ಮ ಸೇನೆ ವಾಯುದಾಳಿ ಮೂಲಕ ಪ್ರತ್ಯುತ್ತರ ನೀಡಿದೆ. ಯು.ಪಿ.ಎ .ಅವಧಿಯಲ್ಲಿ ಮುಂಬೈ ದಾಳಿ, ಸೈನಿಕರ ಮೇಲೆ ಬಾಂಬ್‌ ದಾಳಿ ನಡೆದಿದ್ದವು. ಆಗ ಪಾಕ್‌ ಮೇಲೆ ಪ್ರತಿದಾಳಿ ನಡೆಸಲು ನಮ್ಮ ಸೈನಿಕರು ತಯಾರಿದ್ದರು. ಆಗ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರಿಗೆ ಪ್ರತಿದಾಳಿ ಬೇಕಿರಲಿಲ್ಲ. ಪಾಕ್‌ ಮೇಲೆ ದಾಳಿ ನಡೆಸಿದರೆ ದೇಶದ ಮುಸ್ಲಿಮರು ದೂರವಾಗುತ್ತಾರೆ ಎಂಬ ಕಾರಣದಿಂದ ಕಾಂಗ್ರೆಸ್ ಓಟ್‌ ಬ್ಯಾಂಕ್‌ ರಾಜಕಾರಣ ಮಾಡಿತ್ತು’ ಎಂದು ಟೀಕಿಸಿದರು.

‘ಸಂಡೂರಿನಲ್ಲಿ ಡಿ.ಕೆ.ಶಿವಕುಮಾರ್ ಕರೆದಿದ್ದ ಸಭೆಗೆ ಆ ಪಕ್ಷದ ಶಾಸಕರೇ ಗೈರಾಗಿದ್ದಾರೆ. ಕಾಂಗ್ರೆಸ್ ಮನೆ ದಿನೇ ದಿನೇ ಖಾಲಿ ಆಗುತ್ತಿದೆ. ಬಿಜೆಪಿಯ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಮೊದಲು ನಿಮ್ಮ ಮನೆ ಸರಿಮಾಡಿಕೊಳ್ಳಿ’ ಎಂದು ತಾಕೀತು ಮಾಡಿದರು.

ಶಾಸಕ ಬಿ.ಶ್ರೀರಾಮುಲು ಮಾತನಾಡಿ, ‘ಮೋದಿ ವಿರುದ್ಧ ಸಣ್ಣ ಪಕ್ಷಗಳೆಲ್ಲಾ ಒಟ್ಟಾಗಿ ನಿಂತಿರುವುದರಿಂದ ಈ ಚುನಾವಣೆಗೆ ಹೆಚ್ಚು ಮಹತ್ವ ಬಂದಿದೆ. ಜಿಲ್ಲೆಯ ಜನತೆ ಬಿಜೆಪಿ ಬೆಂಬಲಿಸುವ ಮೂಲಕ ಮೋದಿಯ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಾಜಿ ಶಾಸಕ ಬಿ.ಚಂದ್ರನಾಯ್ಕ, ಮುಖಂಡರಾದ ಓದೋ ಗಂಗಪ್ಪ, ಎಲ್.ಮಧುನಾಯ್ಕ, ಅಭ್ಯರ್ಥಿ ದೇವೇಂದ್ರಪ್ಪ ಮಾತನಾಡಿದರು. ಮುಖಂಡ ಮೃತ್ಯುಂಜಯ ಜಿನಗಾ, ಮಂಡಲ ಅಧ್ಯಕ್ಷ ಎಂ.ಬಿ.ಬಸವರಾಜ, ಜಿ.ಪಂ. ಸದಸ್ಯರಾದ ಎಸ್.ಎಂ.ಲಲಿತಾಬಾಯಿ, ಎಸ್.ಕೊಟ್ರೇಶ, ಮುಖಂಡರಾದ ಮುದ್ದಣ್ಣನವರ ಬಸಣ್ಣ, ಗೋವಿಂದಪ್ಪ, ಟಿಪ್ಪು ಸುಲ್ತಾನ್‌ ಇದ್ದರು.

‘ದೇವೇಂದ್ರಪ್ಪ ನಿಜವಾದ ಮಣ್ಣಿನ ಮಗ’
(ಹಗರಿಬೊಮ್ಮನಹಳ್ಳಿ ವರದಿ): ‘ದೇವೆಗೌಡರು ಮಣ್ಣಿನ ಮಗ ಅಲ್ಲ, ಬಳ್ಳಾರಿ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ದೇವೆಂದ್ರಪ್ಪ ನಿಜವಾದ ಮಣ್ಣಿನ ಮಗ’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ತುಮಕೂರು, ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯವೇ ಜೆ.ಡಿ.ಎಸ್. ಅಭ್ಯರ್ಥಿಗಳನ್ನು ಸೋಲಿಸಲಿದೆ. ಈ ಬಾರಿ ದೇವೇಂದ್ರಪ್ಪ ಅವರನ್ನು ಗೆಲ್ಲಿಸಿದರೆ ಮುಂದಿನ ಬಾರಿ ಇದೇ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಕೆ.ನೇಮಿರಾಜ ನಾಯ್ಕ, ಪುರಸಭೆ ಸದಸ್ಯ ಬದಾಮಿ ಮೃತ್ಯುಂಜಯ, ಎಚ್.ಎಂ.ಚೋಳರಾಜ್, ಕೆ.ಲಕ್ಷ್ಮಣ ತಾಲ್ಲೂಕು ಘಟಕದ ಅಧ್ಯಕ್ಷ ನರೇಗಲ್ ಕೊಟ್ರೇಶ್, ಕಿನ್ನಾಳ್ ಸುಭಾಷ್ ಕಾರ್ಯದರ್ಶಿ ಡಾ.ಅಜ್ಜಯ್ಯ, ಶರಣಪ್ಪ, ಟಿ.ಮಹೇಂದ್ರ ಇದ್ದರು.

‘ಆಲೂಗಡ್ಡೆ ರೈತರು ಬೆಳೆಯುವುದು ಗೊತ್ತಿಲ್ಲ’

(ಕೂಡ್ಲಿಗಿ ವರದಿ): ‘ದೇಶದ ಪ್ರಧಾನಿಯಾಗಲು ಹೊರಟಿರುವ ರಾಹುಲ್‌ ಗಾಂಧಿಯವರಿಗೆ ಆಲೂಗಡ್ಡೆ ರೈತರು ಬೆಳೆಯುತ್ತಾರೆ ಎಂಬುದೇ ಗೊತ್ತಿಲ್ಲ. ಶ್ರೀಮಂತ ಮನೆತನದಲ್ಲಿ ಹುಟ್ಟಿರುವ ಅವರಿಗೆ ಜನಸಾಮಾನ್ಯರ ದುಃಖ ದುಮ್ಮಾನಗಳ ಅರಿವಿಲ್ಲ’ ಎಂದು ಜಗದೀಶ ಶೆಟ್ಟರ್‌ ಟೀಕಿಸಿದರು.

ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಭ್ರಷ್ಟ ನಾಯಕರು ಹಾಗೂ ಭ್ರಷ್ಟ ಪಕ್ಷಗಳೆಲ್ಲ ಒಂದು ಕಡೆ ಸೇರಿವೆ. ಆದರೆ, ಅವರಲ್ಲಿ ಯಾರು ಪ್ರಧಾನಿಯಾಗಬೇಕು ಎಂಬುದು ಗೊತ್ತಿಲ್ಲ’ ಎಂದರು.

ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ‘ಸಾಲ ಮನ್ನಾ ಹೆಸರಿನಲ್ಲಿ ಮಾಡಬಾರದನ್ನೆಲ್ಲಾ ಮಾಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮೊಸಳೆ ಕಣ್ಣೀರು ಹಾಕುತ್ತ ನನ್ನಂತಹ ಮುಖ್ಯಮಂತ್ರಿ, ನನ್ನಂತಹ ಮನುಷ್ಯ ಯಾರು ಇಲ್ಲ ಎಂದು ಬೀಗುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ಸಾವಿರಾರು ಕೋಟಿ ಅನುದಾನ ನೀಡುವ ಅವರು ವಿರೋಧ ಪಕ್ಷಗಳ ಶಾಸಕರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಪಕ್ಷದ ಉಪಾಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ರೇವಣ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವಂಕಟೇಶ್ ನಾಯ್ಕ, ಸದಸ್ಯ ಪಾಪನಾಯಕ, ಕೋಡಿಹಳ್ಳಿ ಭೀಮಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಚ್. ವೀರನಗೌಡ, ಕಾರ್ಯದರ್ಶಿಗಳಾದ ಮಂಜುನಾಥ ನಾಯಕ, ಚನ್ನಪ್ಪ, ಟಿ.ಜಿ. ಮಲ್ಲಿಕಾರ್ಜುನಗೌಡ, ಸೂರ್ಯಪಾಪಣ್ಣ, ಚಂದ್ರಮೌಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT