ಹೊಸಪೇಟೆ: ಒಂದೂವರೆ ವರ್ಷದಲ್ಲೇ ಹಾಳಾದ ಸೇತುವೆ

7
ಬುಕ್ಕಸಾಗರ–ಕಡೇಬಾಗಿಲು ಸೇತುವೆಯಲ್ಲಿ ಈ ಹಿಂದೆ ಬಿರುಕು; ಈಗ ಕಿತ್ತುಹೋದ ರಸ್ತೆ

ಹೊಸಪೇಟೆ: ಒಂದೂವರೆ ವರ್ಷದಲ್ಲೇ ಹಾಳಾದ ಸೇತುವೆ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಬುಕ್ಕಸಾಗರ– ಕಡೇಬಾಗಿಲು ನಡುವೆ ಸಂಪರ್ಕ ಬೆಸೆಯುವ, ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯಲ್ಲಿ ವಾಹನ ಸಂಚಾರ ಆರಂಭಗೊಂಡ ಒಂದೂವರೆ ವರ್ಷದಲ್ಲೇ ಹಾಳಾಗಿದೆ.

ತುಂಗಭದ್ರಾ ಅಣೆಕಟ್ಟೆಯಿಂದ ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿದಾಗ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈಗ ಸೇತುವೆಯ ಒಂದು ಭಾಗದ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಕೆಲಸ ಮುಂದುವರಿದಿದೆ. ಒಂದು ಬದಿಯಲ್ಲಿ ಬ್ಯಾರಿಕೇಡ್‌ ಹಾಕಿ, ಮರಳು–ಜಲ್ಲಿ ಸುರಿದು ದುರಸ್ತಿ ಮಾಡಲಾಗುತ್ತಿದೆ. ಇದರಿಂದ ಸೇತುವೆ ಮೇಲೆ ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದೆ.

2016ರಲ್ಲಿ ಸೇತುವೆ ನಿರ್ಮಾಣ ಕೆಲಸ ಪೂರ್ಣಗೊಂಡಿತ್ತು. ಉದ್ಘಾಟನೆಯ ಔಪಚಾರಿಕತೆ ಮೀರಿ 2017ರ ಜೂನ್‌ನಲ್ಲಿ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಲಾಗಿತ್ತು. ಇದರಿಂದ ಎರಡೂ ಭಾಗದ ಪ್ರಯಾಣಿಕರು ಕಂಪ್ಲಿ ಸುತ್ತುವರಿದು ಬರುವುದು ತಪ್ಪಿತ್ತು. ತೆಪ್ಪದ ಬದುಕು ಕೊನೆಗೊಂಡಿತ್ತು.

ಹೊಸಪೇಟೆ– ಗಂಗಾವತಿ ನಡುವಿನ ಒಟ್ಟು 41 ಕಿ.ಮೀ ಅಂತರವನ್ನು ಕ್ರಮಿಸಲು ಸುಮಾರು 45ರಿಂದ 55 ನಿಮಿಷ ಬೇಕಾಗುತ್ತಿತ್ತು. ಸೇತುವೆ ನಿರ್ಮಾಣದಿಂದ ಎರಡೂ ಪಟ್ಟಣಗಳ ನಡುವಿನ ಅಂತರ 30 ಕಿ.ಮೀ.ಗೆ ತಗ್ಗಿದೆ. ಪ್ರಯಾಣದ ಅವಧಿ 20ರಿಂದ 25 ನಿಮಿಷಗಳಷ್ಟು ಕಡಿಮೆಯಾಗಿದೆ. ಹಂಪಿ–ಆನೆಗುಂದಿಯಲ್ಲಿರುವ ಪ್ರವಾಸಿ ತಾಣಗಳಿಗೆ ಜನ ಹೋಗಿ ಬರಲು ಸಾಕಷ್ಟು ಅನುಕೂಲವಾಗಿದೆ. ಆದರೆ, ಆರಂಭದಿಂದಲೂ ಒಂದಿಲ್ಲೊಂದು ಕಾರಣದಿಂದ ಸೇತುವೆ ಸುದ್ದಿಯಲ್ಲಿ ಇರುತ್ತಿದೆ.

‘ಉದ್ಘಾಟನೆಗೊಂಡ ಹೊಸದರಲ್ಲೇ ಸೇತುವೆ ಹಾಳಾಗಿದೆ ಎಂದರೆ ಕಳಪೆ ಕಾಮಗಾರಿ ನಡೆದಿದೆ ಎಂದರ್ಥ. ಮೂರ್ನಾಲ್ಕು ತಿಂಗಳ ಹಿಂದೆ ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಾಗ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈಗ ನೋಡಿದರೆ ಸೇತುವೆ ಒಂದು ಬದಿಯ ರಸ್ತೆ ಸಂಪೂರ್ಣ ಹಾಳಾಗಿದೆ. ದುಡ್ಡು ಹೊಡೆಯಲು ಎಂಜಿನಿಯರ್‌ಗಳು ಕಳಪೆ ಕೆಲಸ ಮಾಡಿರುವುದು ಇದರಿಂದ ಗೊತ್ತಾಗುತ್ತದೆ’ ಎಂದು ಸಾಮಾಜಿಕ ಹೋರಾಟಗಾರ ಕೆ.ಎಂ. ಸಂತೋಷ್‌ ಕುಮಾರ್‌ ತಿಳಿಸಿದರು.

‘ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳನ್ನು ಹೊಣೆಗಾರರಾಗಿ ಮಾಡಿ, ಅವರಿಂದಲೇ ದುರಸ್ತಿ ವೆಚ್ಚ ಭರಿಸಬೇಕು. ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಅದರ ಮೇಲ್ವಿಚಾರಣೆಗೆ ನೇಮಕಗೊಂಡಿದ್ದ ಲೋಕೋಪಯೋಗಿ ಇಲಾಖೆಯ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಈ ಕುರಿತು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.


ಪದೇ ಪದೇ ಸೇತುವೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ಕಳಪೆ ಕಾಮಗಾರಿ ನಡೆದಿರುವುದಕ್ಕೆ ಸಾಕ್ಷಿ. ಅದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
–ಕೆ.ಎಂ. ಸಂತೋಷ್‌ ಕುಮಾರ್‌, ಸಾಮಾಜಿಕ ಹೋರಾಟಗಾರ


ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬುಕ್ಕಸಾಗರ–ಕಡೇಬಾಗಿಲು ಸೇತುವೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !