ಮೌಲ್ಯಮಾಪಕರಿಗೆ ಹೆಚ್ಚುವರಿ ಕೆಲಸದ ಹೊರೆ

7
120 ಶಿಕ್ಷಕರಿಗೆ ಐದೇ ಕಂಪ್ಯೂಟರ್‌; ಅಂಕ ಅಪಲೋಡ್‌ ಮಾಡಲು ಪರದಾಟ

ಮೌಲ್ಯಮಾಪಕರಿಗೆ ಹೆಚ್ಚುವರಿ ಕೆಲಸದ ಹೊರೆ

Published:
Updated:

ಹೊಸಪೇಟೆ: ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸದಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ ಶಿಕ್ಷಣ ಇಲಾಖೆಯು ಹೆಚ್ಚುವರಿ ಕೆಲಸದ ಹೊರೆ ಹಾಕಿದೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಳಿಕ ಶಿಕ್ಷಕರು ಓ.ಎಂ.ಆರ್‌. ಶೀಟ್‌ನಲ್ಲಿ ಅಂಕಗಳನ್ನಷ್ಟೇ ತುಂಬುವ ಕೆಲಸ ಮಾಡುತ್ತಿದ್ದರು. ಆದರೆ, ಪ್ರಸಕ್ತ ಸಾಲಿನಿಂದ ಆಯಾ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಓ.ಎಂ.ಆರ್‌. ಶೀಟ್‌ನಲ್ಲಿ ಭರ್ತಿ ಮಾಡಿ, ಬಳಿಕ ಅದನ್ನು ಶಿಕ್ಷಣ ಇಲಾಖೆಯ ವೆಬ್‌ಸೈಟಿನಲ್ಲಿ ಅಪ್‌ಲೋಡ್‌ ಮಾಡುವ ಕೆಲಸ ವಹಿಸಲಾಗಿದೆ. ಪ್ರತಿಯೊಬ್ಬ ಮೌಲ್ಯಮಾಪಕರು ಪ್ರತ್ಯೇಕ ಯೂಸರ್‌ ಐ.ಡಿ. ತಯಾರಿಸಿಕೊಂಡು ಅಂಕಗಳನ್ನು ಅಪ್‌ಲೋಡ್‌ ಮಾಡಬೇಕು. ಆದರೆ, ಮೌಲ್ಯಮಾಪನ ನಡೆಯುತ್ತಿರುವ ಕೇಂದ್ರಗಳಲ್ಲಿ ಮೌಲ್ಯಮಾಪಕರ ಅಗತ್ಯಕ್ಕೆ ಅನುಗುಣವಾಗಿ ಕಂಪ್ಯೂಟರ್‌ಗಳಿಲ್ಲ. ಇದರಿಂದಾಗಿ ಶಿಕ್ಷಕರು ಕೆಲಸ ಮುಗಿದರೂ ತಡಹೊತ್ತು ಕಾದು ಕೂರಬೇಕಾಗಿದೆ.

110ರಿಂದ 120 ಮೌಲ್ಯಮಾಪಕರು ಇರುವ ಮೌಲ್ಯಮಾಪನ ಕೇಂದ್ರಗಳಲ್ಲಿ ಮೂರರಿಂದ ಐದು ಕಂಪ್ಯೂಟರ್‌ಗಳಿಗಷ್ಟೇ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ನಗರದ ಆರು ಶಾಲೆಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ನರ್ಬದಾ ಶಾಲೆಯಲ್ಲಿ ಇಂಗ್ಲಿಷ್‌ ವಿಷಯದ ಉತ್ತರ ಪತ್ರಿಕೆಗಳು, ಮಹಿಳಾ ಸಮಾಜ ಶಾಲೆಯಲ್ಲಿ ಗಣಿತ, ಗೋಪಿನಾಥರಾವ ಶಾಲೆಯಲ್ಲಿ ಕನ್ನಡ, ಮಾರ್ಕಂಡೇಯ ಶಾಲೆಯಲ್ಲಿ ಹಿಂದಿ, ದೀಪಾಯನದಲ್ಲಿ ವಿಜ್ಞಾನ ಹಾಗೂ ಜೇಸಿಸ್‌ ಶಾಲೆಯಲ್ಲಿ ಸಮಾಜಶಾಸ್ತ್ರ ವಿಷಯದ ಮೌಲ್ಯಮಾಪನ ಮಾಡಲಾಗುತ್ತಿದೆ.

ನರ್ಬದಾ ಶಾಲೆಯಲ್ಲಿ 120 ಶಿಕ್ಷಕರು ಮೌಲ್ಯಮಾಪನ ಮಾಡುತ್ತಿದ್ದಾರೆ. ಭಾನುವಾರ ಮೂರೇ ಕಂಪ್ಯೂಟರ್‌ಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಶಿಕ್ಷಕರು ಪರದಾಟ ನಡೆಸಬೇಕಾಯಿತು. ಮೌಲ್ಯಮಾಪನ ಮುಗಿದರೂ ಅಂಕಗಳನ್ನು ಅಪ್‌ಲೋಡ್‌ ಮಾಡಲು ರಾತ್ರಿ ಒಂಬತ್ತು ಗಂಟೆಯ ವರೆಗೆ ಕೆಲಸ ನಿರ್ವಹಿಸಿದ್ದಾರೆ. ಈ ಪರಿಸ್ಥಿತಿ ಕಂಡು ಸೋಮವಾರ ಇನ್ನೇರಡು ಹೆಚ್ಚುವರಿ ಕಂಪ್ಯೂಟರ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದರೂ ಯಾವುದೇ ಬದಲಾವಣೆ ಆಗಿಲ್ಲ. ಇತರೆ ವಿಷಯಗಳ ಮೌಲ್ಯಮಾಪನ ನಡೆಯುತ್ತಿರುವ ಇನ್ನುಳಿದ ಐದು ಕೇಂದ್ರಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಹೆಚ್ಚುವರಿ ಕೆಲಸದ ಜತೆಗೆ, ಕಿರಿಕಿರಿ ಆಗುವ ರೀತಿಯಲ್ಲಿ ವ್ಯವಸ್ಥೆ ಮಾಡಿರುವುದಕ್ಕೆ ಶಿಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ.

‘ಕ್ಲರ್ಕ್‌ಗಳು ಮಾಡುತ್ತಿದ್ದ ಕೆಲಸವನ್ನು ನಮಗೆ ವಹಿಸಿದ್ದಾರೆ. ಹೆಚ್ಚುವರಿ ಕೆಲಸ ಮಾಡಲು ನಾವೇನು ಹಿಂದೇಟು ಹಾಕಿಲ್ಲ. ಆದರೆ, ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಅದ್ಯಾವುದನ್ನೂ ಮಾಡಿಲ್ಲ. 120 ಜನ ನಾಲ್ಕೈದು ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯವಾಗುತ್ತದೆ. ಸರ್ವರ್‌ ಕೂಡ ನಿಧಾನವಾಗಿದೆ. ಇದರಿಂದಾಗಿ ಬಹಳ ಸಮಸ್ಯೆಯಾಗುತ್ತಿದೆ. ಅಂಕಗಳನ್ನು ಅಪ್‌ಲೋಡ್‌ ಮಾಡಲು ರಾತ್ರಿ ವರೆಗೆ ಕೂರುವಂತಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕಿಯೊಬ್ಬರು ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡರು.

‘ಅಂಕಗಳನ್ನು ಅಪ್‌ಲೋಡ್‌ ಮಾಡುವ ವ್ಯವಸ್ಥೆ ಪೂರಕ ಪರೀಕ್ಷೆಗಳಿಂದ ಪ್ರಾಯೋಗಿಕವಾಗಿ ಇಲಾಖೆ ಜಾರಿಗೆ ತಂದಿದೆ. ಈ ವಿಷಯವನ್ನು ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ. ಮುಂದೆ ಎಲ್ಲ ಸರಿಹೋಗಬಹುದು’ ಎಂದು ಪರೀಕ್ಷಾ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥ ಸೋಮಶೇಖರ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !