ಮಂಗಳವಾರ, ಸೆಪ್ಟೆಂಬರ್ 28, 2021
23 °C
ನೆರೆಯ ಜಿಲ್ಲೆಯಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಮಸಾಲೆ ಮಜ್ಜಿಗೆ

ಬದುಕಿನ ಹಾದಿ ತೋರಿದ ‘ಮಜ್ಜಿಗೆ ಘಟಕ’

ಕೆ. ಸೋಮಶೇಖರ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ಬೇಸಿಗೆ ಧಗೆಯ ವಾತಾವರಣದಲ್ಲಿ ಬಾಯಾರಿಕೆ ತಣಿಸಿಕೊಳ್ಳಲು ಜನರು ತಂಪು ಪೇಯಗಳ ಮೊರೆ ಹೋಗುವುದು ಸಾಮಾನ್ಯ. ದೇಹ ತಂಪಾಗಿಸುವ ಪೇಯಗಳಲ್ಲಿ ಕೈಗೆಟಕುವ ಬೆಲೆಯಲ್ಲಿ ಸಿಗುವ ಮಜ್ಜಿಗೆಯನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಹೆಚ್ಚು ಬೇಡಿಕೆ ಇರುವ ಮಜ್ಜಿಗೆ ತಯಾರಿಕೆಗೆ ‘ಕಿರು ಉದ್ಯಮ’ ಸ್ವರೂಪ ನೀಡಿ, ಅದರಲ್ಲೇ ಬದುಕಿನ ಹಾದಿ ಕಂಡುಕೊಂಡಿದ್ದಾರೆ ಪಟ್ಟಣದ ಯುವಕ ಸೊಪ್ಪಿನ ರವಿಕುಮಾರ್.

ಪಟ್ಟಣದಲ್ಲಿ ನಂದಿನಿ ಹಾಲು ಮಾರಾಟ ಕೇಂದ್ರ ತೆರೆದಿರುವ ರವಿಕುಮಾರ್, ಕಳೆದ ಎರಡು ವರ್ಷದಿಂದ ಸ್ವತಃ ಮಸಾಲೆ ಮಜ್ಜಿಗೆ ತಯಾರಿಸಿ ಮಾರುಕಟ್ಟೆಯನ್ನು ಹಿಗ್ಗಿಸಿಕೊಂಡಿದ್ದಾರೆ.

ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಕಾಯ್ದೆಗೆ ಒಳಪಟ್ಟು ‘ಬೃಂದಾ ಮಸಾಲ ಮಜ್ಜಿಗೆ’ ಬ್ರಾಂಡ್‌ಗೆ ಅನುಮತಿ ಪಡೆದಿದ್ದಾರೆ. ಪಟ್ಟಣದ ಹೊಳಗುಂದಿ ರಸ್ತೆಯ ಸೊಪ್ಪಿನವರ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿಯೇ ಮಜ್ಜಿಗೆ ತಯಾರಿಕೆ ಘಟಕ ತೆರೆದಿದ್ದಾರೆ. ಬ್ಯಾಂಕ್‌ ಸಾಲ ಪಡೆದು ₹5 ಲಕ್ಷ ವೆಚ್ಚದಲ್ಲಿ ಅವರು ಈ ಕಿರು ಉದ್ಯಮ ಕಟ್ಟಿಕೊಂಡಿದ್ದಾರೆ. ಮಜ್ಜಿಗೆಯ ಮಿಶ್ರಣ, ಪ್ಯಾಕೆಟ್‌ ಸಿದ್ಧಪಡಿಸಲು ₹2.50 ಲಕ್ಷ ವೆಚ್ಚದ ಆಧುನಿಕ ಯಂತ್ರವನ್ನೂ ಅಳವಡಿಸಿಕೊಂಡಿದ್ದಾರೆ.

ಬೇಸಿಗೆಯ ದಿನಗಳಲ್ಲಿ ಇವರು ಪ್ರತಿದಿನ 300 ಲೀಟರ್ ಮೊಸರು ಕಡೆದು ಮಜ್ಜಿಗೆ ತಯಾರಿಸುತ್ತಾರೆ. ಪ್ರತಿ 20 ಲೀಟರ್‌ ಮೊಸರಿಗೆ 1 ಲೀಟರ್ ಹಾಲು ಬೆರೆಸುವುದರಿಂದ ಮಜ್ಜಿಗೆ ಸಿಹಿಯಾಗಿರುತ್ತದೆ. ರುಚಿಗೆ ತಕ್ಕಂತೆ ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಪುದಿನಾ, ಹಸಿಶುಂಠಿ, ಬೆಳ್ಳುಳ್ಳಿ, ಉಪ್ಪು ಸೇರಿಸಿದ ಮಸಾಲೆಯನ್ನು ಮಜ್ಜಿಗೆಯ ಬ್ಯಾರೆಲ್‌ಗೆ ಮಿಶ್ರಣ ಮಾಡುತ್ತಾರೆ.

ದಿನಂಪ್ರತಿ 200 ಎಂ.ಎಲ್‌.ನ 10 ಸಾವಿರ ಮಜ್ಜಿಗೆ ಪ್ಯಾಕೆಟ್‌ಗಳನ್ನು ಯಂತ್ರದಿಂದ ಸಿದ್ಧಪಡಿಸುತ್ತಾರೆ. 200 ಎಂ.ಎಲ್‌. ಪ್ರತಿ ಪ್ಯಾಕೆಟ್‌ಗೆ ₹8 ಬೆಲೆ ನಿಗದಿಪಡಿಸಿದ್ದರೆ, ₹10ಕ್ಕೆ ಮೂರು ಪ್ಯಾಕೆಟ್‌ಗಳಂತೆ ಸಗಟು ಬೆಲೆಯಲ್ಲಿ ಮಾರುಕಟ್ಟೆಗೆ ಕಳಿಸಿಕೊಡುತ್ತಾರೆ. ಮಜ್ಜಿಗೆ ತಯಾರಿಕೆ, ಮಾರುಕಟ್ಟೆ ಸಾಗಣೆ ಕೆಲಸಕ್ಕಾಗಿ ನಾಲ್ಕು ಜನ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಹೂವಿನಹಡಗಲಿ, ಇಟ್ಟಿಗಿ, ಹೊಳಲು, ಹಗರಿಬೊಮ್ಮನಹಳ್ಳಿ ಹಾಗೂ ನೆರೆಯ ಮುಂಡರಗಿ, ಗದಗ, ರೋಣ, ಕೊಪ್ಪಳ ಮಾರುಕಟ್ಟೆಗಳಿಗೆ ಬೃಂದಾ ಮಸಾಲೆ ಮಜ್ಜಿಗೆ ಲಗ್ಗೆ ಇಟ್ಟಿದೆ.

ಪ್ರತಿವರ್ಷ ಜನವರಿಯಿಂದ ಮೇ ಅಂತ್ಯದ ವರೆಗೆ ಮಾತ್ರ ಮಜ್ಜಿಗೆ ಘಟಕ ಚಾಲೂ ಇರುತ್ತದೆ. ಉಳಿದ ದಿನಗಳಲ್ಲಿ ಎಂದಿನಂತೆ ಬರೀ ನಂದಿನಿ ಮಿಲ್ಕ್‌ ಪಾರ್ಲರ್ ವ್ಯವಹಾರ ನಡೆಸಿಕೊಂಡು ಹೋಗುತ್ತಾರೆ.

‘ನಂದಿನಿ ಪಾರ್ಲರ್‌ನಲ್ಲಿ ಹಾಲು, ಮೊಸರು ಉಳಿತಿದ್ದರಿಂದ ಸಣ್ಣ ಪ್ರಮಾಣದಲ್ಲಿ ಮಜ್ಜಿಗೆ ತಯಾರಿಸಲು ಪ್ರಾರಂಭಿಸಿದೆ. ನಮ್ಮ ಮಸಾಲೆ ಮಜ್ಜಿಗೆಗೆ ಬೇಡಿಕೆ ಹೆಚ್ಚಾಗಿದ್ದರಿಂದ ಇದನ್ನೇ ಕಿರು ಉದ್ಯಮ ಮಾಡಿಕೊಂಡಿರುವೆ. ಎರಡು ವರ್ಷದಿಂದ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ’ ಎಂದು ಸೊಪ್ಪಿನ ರವಿಕುಮಾರ್ ಹೇಳಿದರು.

ಮಜ್ಜಿಗೆ ಘಟಕ ಕೈ ಹಿಡಿದಿದ್ದರಿಂದಲೇ ₹12 ಲಕ್ಷ ವೆಚ್ಚದ ಹೊಸ ಮನೆಯನ್ನು ನಿರ್ಮಿಸಿಕೊಂಡಿರುವೆ. ನೆರೆಯ ಜಿಲ್ಲೆಗಳಲ್ಲಿ ಮಜ್ಜಿಗೆಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಪ್ರತಿದಿನ 10 ಸಾವಿರ ಪ್ಯಾಕೆಟ್ ತಯಾರಿಸುತ್ತಿದ್ದು, 15 ಸಾವಿರ ಪ್ಯಾಕೆಟ್ ಗಳಿಗೆ ಬೇಡಿಕೆ ಇದೆ. ಗುಣಮಟ್ಟ ಕಾಪಾಡಿಕೊಳ್ಳುವ ಉದ್ದೇಶದಿಂದ ಹೆಚ್ಚುವರಿ ಬೇಡಿಕೆ ಪೂರೈಸಲು ಆಗುತ್ತಿಲ್ಲ. ಶೀಘ್ರದಲ್ಲೇ ಮತ್ತೊಂದು ಅತ್ಯಾಧುನಿಕ ಯಂತ್ರ ಖರೀದಿಸಿ ಘಟಕವನ್ನು ಮೇಲ್ದರ್ಜೆಗೇರಿಸಲು ತಯಾರಿ ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು