ಕೇಂದ್ರದ ವಿರುದ್ಧ ಕೇಬಲ್ ಆಪರೇಟರ್ಸ್‌ ಗರಂ

7
ಖಾಸಗಿ ಕಂಪನಿಗಳ ಹಿತ ಕಾಪಾಡಲು ಹೆಚ್ಚಿನ ಶುಲ್ಕ ನಿಗದಿ ವಿರುದ್ಧ ಪ್ರತಿಭಟನೆ

ಕೇಂದ್ರದ ವಿರುದ್ಧ ಕೇಬಲ್ ಆಪರೇಟರ್ಸ್‌ ಗರಂ

Published:
Updated:
Deccan Herald

ಹೊಸಪೇಟೆ: ಕೇಂದ್ರ ಸರ್ಕಾರ ಮತ್ತು ‘ಟ್ರಾಯ್‌’, ಕೇಬಲ್‌ ಚಾನೆಲ್‌ಗಳ ಮಾಸಿಕ ಶುಲ್ಕ ನಿಗದಿಪಡಿಸಿರುವುದನ್ನು ವಿರೋಧಿಸಿ ಸ್ಥಳೀಯ ಕೇಬಲ್‌ ಆಪರೇಟರ್‌ಗಳು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಸರ್ಕಾರ ನಿಗದಿಪಡಿಸಿದ ಶುಲ್ಕ ಜಾರಿಗೆ ಬಂದರೆ ಗ್ರಾಹಕರು ಪ್ರತಿ ತಿಂಗಳು ₨800ರಿಂದ ₨1,500 ಪಾವತಿಸಬೇಕಾಗುತ್ತದೆ. ಹೆಚ್ಚಿನ ದರ ನಿಗದಿಪಡಿಸಿರುವುದರಿಂದ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಈಗ ₨300ರಿಂದ ₨350 ರಲ್ಲಿ ಎಲ್ಲ ಚಾನೆಲ್‌ಗಳನ್ನು ಗ್ರಾಹಕರು ನೋಡುತ್ತಿದ್ದಾರೆ. ದರ ವ್ಯತ್ಯಾಸವಾದರೆ ಕೇಬಲ್‌ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘30–35 ವರ್ಷಗಳಿಂದ ಕೇಬಲ್‌ ಆಪರೇಟರ್‌ಗಳು ಜನರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಈಗ ಕೆಲ ಖಾಸಗಿ ಕಂಪನಿಗಳ ಹಿತ ಕಾಪಾಡಲು ಕೇಬಲ್‌ ಉದ್ಯಮವನ್ನು ಬಲಿಕೊಡಲು ಹೊರಟಿರುವುದು ಸರಿಯಲ್ಲ. ತಾಲ್ಲೂಕಿನಲ್ಲಿ 350ರಿಂದ 400 ಕುಟುಂಬಗಳು ಕೇಬಲ್‌ ಉದ್ಯಮದಿಂದ ಬದುಕು ನಡೆಸುತ್ತಿವೆ. ಒಂದುವೇಳೆ ಹೊಸ ದರ ನೀತಿ ಜಾರಿಗೆ ಬಂದರೆ ಎಲ್ಲರೂ ಉಪವಾಸ ಮಲಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಉದ್ಯೋಗ ಸೃಷ್ಟಿಸಬೇಕಾದ ಕೇಂದ್ರ ಸರ್ಕಾರವು ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಕೇಬಲ್‌ ಆಪರೇಟರ್‌ ಮತ್ತು ಗ್ರಾಹಕರ ಮಧ್ಯೆ ಒಳ್ಳೆಯ ಸ್ನೇಹ ಸಂಬಂಧವಿದೆ. ಹೊಸ ದರ ಜಾರಿಗೆ ಬಂದರೆ ಅದು ಹಾಳಾಗುತ್ತದೆ. ಎಲ್ಲವೂ ವ್ಯವಹಾರಿಕವಾಗುತ್ತದೆ. ಗ್ರಾಹಕರ ಮನರಂಜನೆಗೆ ಸೀಮಿತ ಅವಕಾಶಗಳಿರುತ್ತವೆ. ಸರ್ಕಾರವು ಎಲ್ಲ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ಹೊಸ ಶುಲ್ಕ ನಿಗದಿಪಡಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ದೇಶದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಬಲ್‌ ಆಪರೇಟರ್‌ಗಳಾದ ಕಿರಣ್‌, ಹನುಮಂತರಾವ, ಮಹೇಶ್‌, ರಾಮಚಂದ್ರರಾವ, ಅನಿಲ್‌ ಕುಮಾರ್‌, ಸುರೇಶ್‌ ಕುಮಾರ್‌, ರಾಮು, ದುರ್ಗೇಶ್‌, ಕನಕಾಚಲ, ಸಂತೋಷ್‌ ಸಿಂಗ್‌, ಹನುಮೇಗೌಡ, ವಿಠೋಬಗೌಡ, ರಫೀಕ್‌, ಮುಸ್ತಫಾ, ಮೌಲಾ ಸಾಬ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !