ಗ್ರಾಮ ಲೆಕ್ಕಾಧಿಕಾರಿಯ ಕ್ಯಾಮರಾ ಪ್ರೇಮ!

7
ಆ. 19ರಂದು ವಿಶ್ವಛಾಯಗ್ರಾಹಕರ ದಿನಾಚರಣೆ

ಗ್ರಾಮ ಲೆಕ್ಕಾಧಿಕಾರಿಯ ಕ್ಯಾಮರಾ ಪ್ರೇಮ!

Published:
Updated:
Deccan Herald

ಸಿರುಗುಪ್ಪ: ತಾಲ್ಲೂಕಿನ ಮಣ್ಣೂರು ಸೂಗೂರು ಗ್ರಾಮ ಲೆಕ್ಕಾಧಿಕಾರಿ ಅಂದಾನಗೌಡ ದಾನಪ್ಪಗೌಡರ್ ತಮ್ಮ ಕೆನಾನ್ 550ಡಿ ಕ್ಯಾಮರಾವನ್ನು ಹೆಗಲಿಗೇರಿಸಿಕೊಂಡು ಬೈಕ್‌ನಲ್ಲಿ ಹೊರಟರೆಂದರೆ ಸುಂದರ ಪಕ್ಷಿಗಳ ಹುಡುಕಾಟದಲ್ಲಿದ್ದಾರೆಂದೇ ಅರ್ಥ.

ನಿತ್ಯದ ಕೆಲಸದ ನಡುವೆ ಬಿಡುವಿನ ವೇಳೆಯಲ್ಲಿ ಅವರು ಪಕ್ಷಿಗಳ ಅಧ್ಯಯನ ಮಾಡುತ್ತಾರೆ. ಓದು ಮತ್ತು ಸುತ್ತಾಟದಿಂದ ತಾಲೂಕಿನ ಪಕ್ಷಿಗಳ ಸಮಗ್ರ ಮಾಹಿತಿ ಅವರ ಬಳಿ ಇದೆ.

ಪಕ್ಷಿಗಳಷ್ಟೇ ಅಲ್ಲದೆ, ಐತಿಹಾಸಿಕ ಸ್ಮಾರಕಗಳು, ಚಂದ್ರಗ್ರಹಣ ದೃಶ್ಯಗಳು ಹಾಗೂ ನಗರದಲ್ಲಿ ಕಾಣಸಿಗುವ ಮಾನವೀಯ ದೃಶ್ಯಗಳನ್ನೂ ಅವರು ಸೆರೆಹಿಡಿದಿದ್ದಾರೆ.

ನದಿ ದಂಡೆಯ ಹಕ್ಕಿ ಗೌಡರ್‌ ಕ್ಯಾಮರಾ ಕಣ್ಣಿನಲ್ಲಿ

ಅವರ ಮೂರು ಛಾಯಚಿತ್ರಗಳು ಫಿಶ್ ಐ ಫೋಟೋಗ್ರಫಿ ಕ್ಲಬ್ ವತಿಯಿಂದ ನಡೆದ 2ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಆಯ್ಕೆ ಆಗಿದ್ದವು. ಮಣ್ಣಿನ ಬಸವಣ್ಣ ಮೂರ್ತಿಗಳನ್ನು ಮಾರುವ ಹುಡುಗನ ಚಿತ್ರಕ್ಕೆ ಪತ್ರಿಕೋದ್ಯಮ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆಯನ್ನು ಪಡೆದಿತ್ತು.

ಛಾಯಾಗ್ರಾಹಕ ಸ್ನೇಹಿತ ಅಮರ್‌ದೀಪ್ ಅವರಿಂದ ಪ್ರಭಾವಿತರಾಗಿ ಹಾಗೂ ಲೇಖಕ ಶಿವು ಅವರ ‘ಫೋಟೋ ಕ್ಲಿಕ್ಕಿಸುವುದು ಹೇಗೆ?’ ಕೃತಿಯಿಂದ ಪ್ರೇರಣೆ ಪಡೆದ ಗೌಡರ್‌, ಪೂರ್ಣಚಂದ್ರ ತೇಜಸ್ವಿಯವರ ‘ಹಕ್ಕಿಪಿಕ್ಕಿ’ ಕೃತಿಯಿಂದ ಅಧ್ಯಯನ ಆಸಕ್ತಿಯನ್ನು ರೂಢಿಸಿಕೊಂಡರು.

ಅವರು ಕೆನಾನ್ 550ಡಿ ಮಾದರಿಯ ಕ್ಯಾಮರಕ್ಕೆ 150ರಿಂದ 600 ಫೋಕಲ್ ಲೆಂತ್ ಇರುವ ಜೂಮ್‌ಲೆನ್ಸ್ ಅಳವಡಿಸಿಕೊಂಡಿದ್ದು, ಪಕ್ಷಿಗಳ ಛಾಯಚಿತ್ರಗಳನ್ನು ದೂರದಿಂದಲೇ ಅವುಗಳಿಗೆ ಯಾವುದೇ ತೊಂದರೆ ಆಗದಂತೆ ಚಿತ್ರಿಸಿಕೊಳ್ಳಲು ಅನುಕೂಲವಾಗಿದೆ.

ಬಿಳಿ ಕೊಕ್ಕಿನ ಹಕ್ಕಿ

‘ಸಂಡೂರು, ಬಳ್ಳಾರಿ ಕೋಟೆ, ಹಂಪಿಯ ಐತಿಹಾಸಿಕ ಸ್ಮಾರಕಗಳ ಹಾಗೂ ದರೋಜಿ, ಸಂಡೂರು, ಸಿರುಗುಪ್ಪದ ಕೆಂಚನಗುಡ್ಡ ಪ್ರದೇಶಗಳಲ್ಲಿನ ಪಕ್ಷಿಗಳ ಅಧ್ಯಯನ ಹಾಗೂ ಚಿತ್ರೀಕರಣ ಖುಷಿ ನೀಡಿದೆ, ನಿತ್ಯದ ಕಚೇರಿ ಕೆಲಸದಿಂದ ದಣಿವಾದಾಗ ಪಕ್ಷಿಗಳ ಛಾಯಚಿತ್ರಕ್ಕೆ ಹೊರಟು ಬಿಡುತ್ತೇನೆ. ಪಕ್ಷಿಗಳನ್ನು ನೋಡುತ್ತಲೇ ಬೇಸರಿಕೆ ದೂರವಾಗಿ ಹೊಸ ಉಲ್ಲಾಸ ಮೂಡುತ್ತದೆ’ ಎನ್ನುತ್ತಾರೆ ಅವರು.

ಶಾಲೆಗಳಲ್ಲಿ ಛಾಯಾಚಿತ್ರಗಳ ಪ್ರದರ್ಶನ ಮತ್ತು ಸಂವಾದದ ಮೂಲಕ ಅವರು ಮಕ್ಕಳಲ್ಲಿ ಪಕ್ಷಿಪ್ರೇಮವನ್ನು ಮೂಡಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !