ತುಂಗಭದ್ರಾ ಬಲದಂಡೆ ಕಾಲುವೆ ದುರಸ್ತಿ ಕೆಲಸ ಶುರು

ಭಾನುವಾರ, ಮೇ 26, 2019
32 °C
ಸಂಪೂರ್ಣ ಹಾಳಾಗಿದ್ದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ

ತುಂಗಭದ್ರಾ ಬಲದಂಡೆ ಕಾಲುವೆ ದುರಸ್ತಿ ಕೆಲಸ ಶುರು

Published:
Updated:
Prajavani

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆ (ಎಲ್‌.ಎಲ್‌.ಸಿ.) ದುರಸ್ತಿ ಕೆಲಸಕ್ಕೆ ಚಾಲನೆ ಕೊಡಲಾಗಿದೆ.

ಇದೇ ವೇಳೆ ನಗರದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಲುವೆ ಮೇಲಿನ ಕಿರು ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗಿದೆ. ಸದಾ ಜನದಟ್ಟಣೆಯಿಂದ ಕೂಡಿರುವ ಹಳೆಯ ಮೇಲ್ಸೇತುವೆ ಸಂಪೂರ್ಣ ಶಿಥಿಲಗೊಂಡಿತ್ತು. ಅದನ್ನು ಜೆ.ಸಿ.ಬಿ.ಯಿಂದ ತೆರವುಗೊಳಿಸಲಾಗಿದ್ದು, ಹೊಸ ಮೇಲ್ಸೇತುವೆ ನಿರ್ಮಾಣ ಕೆಲಸ ಭರದಿಂದ ನಡೆಯುತ್ತಿದೆ. ತಾತ್ಕಾಲಿಕವಾಗಿ ವಾಹನಗಳ ಓಡಾಟಕ್ಕೆ ಮಣ್ಣಿನ ರಸ್ತೆ ನಿರ್ಮಿಸಲಾಗಿದೆ.

ಹೋದ ವರ್ಷ ತಾಲ್ಲೂಕಿನ ಹೊಸೂರಿನಿಂದ ನಗರದ ರೈಲು ನಿಲ್ದಾಣದ ಬಳಿಯಿರುವ ರಾಯಲ್‌ ಕಿರೀಟಿ ಹೋಟೆಲ್‌ ವರೆಗೆ ಕಾಲುವೆ ದುರಸ್ತಿಗೊಳಿಸಲಾಗಿತ್ತು. ಆಗಸ್ಟ್‌ನಲ್ಲಿ ಕಾಲುವೆಗೆ ನೀರು ಹರಿಸಿದ್ದರಿಂದ ಕಾಮಗಾರಿ ಅಲ್ಲಿಗೆ ಮೊಟಕುಗೊಳಿಸಲಾಗಿತ್ತು. ಅಂದಿನಿಂದ ವಾರದ ಹಿಂದಿನ ವರೆಗೆ ಸತತವಾಗಿ ಕೃಷಿ ಹಾಗೂ ಕುಡಿಯಲು ಕಾಲುವೆಯಿಂದ ನೀರು ಹರಿಸಿದ್ದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆಗಿರಲಿಲ್ಲ. ಈಗ ನೀರು ಹರಿಸುವುದು ಸ್ಥಗಿತಗೊಳಿಸಿರುವುದರಿಂದ ಮತ್ತೆ ಕೆಲಸ ಆರಂಭಿಸಲಾಗಿದೆ.

ನೀರು ಹರಿದು ಹೋಗುವ ರಭಸಕ್ಕೆ ಎಲ್ಲೆಲ್ಲಿ ಕಾಲುವೆ ಹಾಳಾಗಿದೆಯೋ ಅಂತಹ ಸ್ಥಳಗಳನ್ನು ಗುರುತಿಸಿ ದುರಸ್ತಿ ಮಾಡಲಾಗುತ್ತಿದೆ. 250 ಕಿ.ಮೀ ವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಿಡಿ ಬಿಡಿ ಕೆಲಸವನ್ನು ಒಟ್ಟು 20 ಗುತ್ತಿಗೆದಾರರಿಗೆ ವಹಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಮೂರು ತಿಂಗಳು ಅಂದರೆ ಜುಲೈ ಕೊನೆಯ ವರೆಗೆ ಕಾಲಾವಕಾಶ ನೀಡಲಾಗಿದೆ. 

ಒಂದುವೇಳೆ ಸಕಾಲಕ್ಕೆ ಮುಂಗಾರು ಮಳೆ ಬಂದು ಜಲಾಶಯ ಭರ್ತಿಯಾದರೆ, ಅನಿವಾರ್ಯವಾಗಿ ಕಾಲುವೆಗೆ ನೀರು ಹರಿಸಬೇಕಾಗುತ್ತದೆ. ಹೀಗಾಗಿ ಮೂರು ತಿಂಗಳ ಗಡುವು ನೀಡಲಾಗಿದೆ. ನಗರದ ಸ್ಟೇಷನ್‌ ರಸ್ತೆಯಿಂದ ನಾಗೇನಹಳ್ಳಿ ವರೆಗೆ ಭರದಿಂದ ಕೆಲಸ ನಡೆಯುತ್ತಿದೆ. ಐದರಿಂದ ಆರು ಜೆ.ಸಿ.ಬಿ.ಗಳು ಕಾಲುವೆಯೊಳಗೆ ಹೋಗಿ ತ್ಯಾಜ್ಯ, ಹೂಳು ತೆಗೆಯುತ್ತಿವೆ. ಅದನ್ನು ಲಾರಿಗಳಲ್ಲಿ ತುಂಬಿ ಬೇರೆಡೆ ಸಾಗಿಸಲಾಗುತ್ತಿದೆ.

ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿದ ಬಳಿಕ ಕಾಲುವೆಯ ಎರಡೂ ಬದಿ ಹಾಗೂ ಮಧ್ಯ ಭಾಗದಲ್ಲಿ ಸಿಮೆಂಟ್‌ ಬೆಡ್‌ ಹಾಕಲಾಗುತ್ತದೆ. ಹೀಗೆ ಮಾಡುವುದರಿಂದ ಕಾಲುವೆಯಲ್ಲಿ ಬಿರುಕು ಮೂಡುವುದು, ಬೊಂಗಾ ಬೀಳುವುದು ತಪ್ಪುತ್ತದೆ.

‘ಪ್ರತಿ ವರ್ಷ ಕಾಲುವೆಗಳ ನವೀಕರಣ, ದುರಸ್ತಿ ಕೆಲಸ ನಡೆಯುತ್ತ ಇರುತ್ತದೆ. ಎಲ್ಲೆಲ್ಲಿ ಕಾಲುವೆ ಹಾಳಾಗಿರುತ್ತದೆಯೋ ಅದರ ದುರಸ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಜಲಾಶಯದಿಂದ ಕಾಲುವೆಗೆ ನೀರು ಹರಿಸಿದಾಗ ಬಹಳ ರಭಸದಿಂದ ನೀರು ಬರುತ್ತದೆ. ಕೆಲವೊಮ್ಮೆ ಒತ್ತಡ ಹೆಚ್ಚಾಗಿ ಕಾಲುವೆ ಒಡೆಯುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ ನಂತರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಎಲ್‌.ಎಲ್‌.ಸಿ. ಕಾರ್ಯನಿರ್ವಾಹಕ ಎಂಜಿನಿಯರ್‌ ಸುರೇಶ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲುವೆ ಕೊನೆಯ ಭಾಗದ ರೈತರಿಗೂ ನೀರು ಸಿಗಬೇಕು. ಇದು ಸಾಧ್ಯವಾಗಬೇಕಾದರೆ ಕಾಲುವೆ ಸುಸ್ಥಿತಿಯಲ್ಲಿ ಇರುವುದು ಬಹಳ ಮುಖ್ಯ. ಹೀಗಾಗಿ ನಿರಂತರವಾಗಿ ಕಾಲುವೆಯ ಸ್ಥಿತಿಗತಿ ಪರಿಶೀಲನೆ ನಡೆಸಿ, ಎಲ್ಲಾದರೂ ದೋಷ ಕಂಡು ಬಂದರೆ ಅದನ್ನು ಸರಿಪಡಿಸಲಾಗುತ್ತದೆ’ ಎಂದು ಹೇಳಿದರು.

‘ತುಂಗಭದ್ರಾ ಜಲಾಶಯದ ಮುಖ್ಯ ಕಾಲುವೆಗಳ ನಿರ್ವಹಣೆ ವಿಷಯದಲ್ಲಿ ಮಂಡಳಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಅದೇ ರೀತಿ ವಿಜಯನಗರ ಕಾಲದ ಕಾಲುವೆಗಳ ನವೀಕರಣಕ್ಕೂ ಮುಂದಾಗಬೇಕು. ಬಹಳ ಹಳೆಯ ಕಾಲುವೆಗಳು. ಅವುಗಳು ನಿರ್ಮಾಣಗೊಂಡ ನಂತರ ನವೀಕರಣ ಕೆಲಸವೇ ಆಗಿಲ್ಲ’ ಎಂದು ರೈತ ಬಸವರಾಜ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !