ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ಅನುಷ್ಠಾನ ನಿರ್ಲಕ್ಷ್ಯಿಸಿದರೆ ಶಿಕ್ಷೆ

ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ನ್ಯಾಯಾಧೀಶ ಬಿರಾದಾರ ಎಚ್ಚರಿಕೆ
Last Updated 7 ಜುಲೈ 2018, 11:23 IST
ಅಕ್ಷರ ಗಾತ್ರ

ಬಳ್ಳಾರಿ: ‘ಸೌಲಭ್ಯ ವಂಚಿತರು ಮತ್ತು ಶೋಷಿತರ ಒಳಿತಿಗಾಗಿ ರೂಪಿಸಿರುವ ಕಾಯ್ದೆಗಳನ್ನು ಅನುಷ್ಠಾನ ಮಾಡಲು ನಿರ್ಲಕ್ಷ್ಯ ವಹಿಸುವುದು ಮಹಾಪರಾಧ. ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಶಿಕ್ಷಿಸುವ ಅವಕಾಶವೂ ಇದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಧೀಶ ಬಿ.ಸಿ.ಬಿರಾದಾರ ಎಚ್ಚರಿಕೆ ನೀಡಿದರು.

ವಿವಿಧ ಕಾಯ್ದೆಗಳ ಅನುಷ್ಠಾನದ ಕುರಿತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಡಳಿತ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾಯ್ದೆಗಳ ಅನುಷ್ಠಾನ ಮತ್ತು ಸೌಲಭ್ಯಗಳ ವಿತರಣೆ ಕುರಿತು ಎಲ್ಲ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗ ಸೂಚಿಸಿದೆ. ಪರಿಶೀಲನೆ ವೇಳೆ, ಅಧಿಕಾರಿ ನಿರ್ಲಕ್ಷ್ಯ ಕಂಡುಬಂದರೆ ಶಿಕ್ಷಿಸುವಂತೆ ಶಿಫಾರಸು ಮಾಡಬಹುದು’ ಎಂದರು.

‘ಆಡಳಿತದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುತ್ತಿದೆಯೇ ಎಂಬ ಅನುಮಾನ ಮೂಡುವುದು ಸಹಜ. ಆದರೆ ಸಾಮಾಜಿಕ ನ್ಯಾಯ ಪಾಲನೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯವಶ್ಯ’ ಎಂದು ಪ್ರತಿಪಾದಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಮಾತನಾಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಬದ್ರಿನಾಥ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗೇಶ ಬಿಲ್ವಾ ವೇದಿಕೆಯಲ್ಲಿದ್ದರು.

ಉಪನ್ಯಾಸ: ನಂತರ, ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ, ಬಾಲನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಯುನಿಸೆಫ್‌ನ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್‌ ಉಪನ್ಯಾಸ ನೀಡಿದರು.

ಪ್ರಸಪೂರ್ವ ಲಿಂಗಪತ್ತೆ ನಿಷೇಧ ಕಾಯ್ದೆ ಕುರಿತು ಡಾ.ವಿಜಯಲಕ್ಷ್ಮಿ, ಮಾನವ ಸಾಗಾಣಿಕೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ ಕುರಿತು ಗೃಹ ಇಲಾಖೆಯ ತರಬೇತುದಾರ ಸೋಮಶೇಖರ, ವಿಶೇಷ ಪ್ರಕರಣಗಳಲ್ಲಿ ತನಿಖೆ ಕುರಿತು ಮಹೇಶ ವೈದ್ಯ, ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆ ಕಾಯ್ದೆ ಕುರಿತು ನಾಗೇಶ ಬಿಲ್ವಾ ಹಾಗೂ ಸೇವಾ ಪ್ರಾಧಿಕಾರದ ಕುರಿತು ನ್ಯಾಯಾಧೀಶ ಎಸ್‌.ಬಿ.ಹಂದ್ರಾಳ ಉಪನ್ಯಾಸ ನೀಡಿದರು.

ನಿಷ್ಕ್ರಿಯ ಸಮಿತಿಗಳು: ಅಸಮಾಧಾನ
‘ಮಹಿಳೆಯರು, ಮಕ್ಕಳ ಮತ್ತು ಶೋಷಿತರಿಗೆ ಅನುಕೂಲಕ ಕಲ್ಪಿಸುವ ಸಂಬಂಧ ಪಂಚಾಯಿತಿ ಮಟ್ಟದಿಂದ ರಾಜ್ಯಮಟ್ಟದವರೆಗೆ ರಚನೆಯಾಗಿರುವ ಸಮಿತಿಗಳು ನಿಷ್ಕ್ರಿಯವಾಗಿವೆ’ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಬಿ.ಹಂದ್ರಾಳ ಅಸಮಾಧಾನ ವ್ಯಕ್ತಪಡಿಸಿದರು.

‘ಬಾಲ್ಯ ವಿವಾಹ ಪತ್ತೆ ಕಾರ್ಯಾಚರಣೆ ಸಂದರ್ಭಗಳಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಷ್ಟೇ ಸ್ಥಳದಲ್ಲಿರುತ್ತಾರೆ. ಇನ್ನಿತರ ಇಲಾಖೆಗಳ ಅಧಿಕಾರಿಗಳು ಇರುವುದಿಲ್ಲ. ಬಾಲ್ಯ ವಿವಾಹ ಏರ್ಪಡಿಸುವವರನ್ನು ಈಗ ಬಂಧಿಸಲು ಅವಕಾಶವಿದೆ. ಆದರೆ ಎಷ್ಟು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ? ಕೌಟುಂಬಿಕ ಹಿಂಸೆ ದೂರು ದಾಖಲಿಸುವ ಮುನ್ನ ಕುಟುಂಬ ಕಲ್ಯಾಣ ಸಮಿತಿಗೆ ರವಾನಿಸಬೇಕು. ಆದರೆ ಹಾಗೆ ಮಾಡದೆ ಎಫ್‌ಐಆರ್‌ ದಾಖಲಿಸಲಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಪರೀಕ್ಷೆ: ಸಿಇಓ ರಾಜೇಂದ್ರ
‘ಕಾರ್ಯಾಗಾರವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅಧಿಕಾರಿಗಳಿಗೆ ಪರೀಕ್ಷೆ ಏರ್ಪಡಿಸಿ ಅವರ ತಿಳಿವಳಿಕೆಯ ಮಟ್ಟವನ್ನು ಪರೀಕ್ಷಿಸಲಾಗುವುದು. ಕಳಪೆಯಾಗಿದ್ದರೆ ಅವರ ಸೇವಾ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದರು.

*ಕಾನೂನು ಅನುಷ್ಠಾನ ಮಾಡಬೇಕಾದ ಅಧಿಕಾರಿಗಳು ಇನ್ನು ಮುಂದೆ ನಿರ್ಲಕ್ಷ್ಯಕ್ಕೆ ತಕ್ಕ ಶಿಕ್ಷೆಯನ್ನು ಎದುರಿಸಲೇಬೇಕು

–ಬಿ.ಸಿ.ಬಿರಾದಾರ, ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT