ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಜು ಕೇಂದ್ರ ತೆರೆಯಲು ಅನುಮತಿಗೆ ಡೆಮೊಕ್ರಟಿಕ್‌ ಯುತ್‌ ಆರ್ಗನೈಸೇಷನ್‌ ವಿರೋಧ

Last Updated 23 ಫೆಬ್ರುವರಿ 2020, 7:52 IST
ಅಕ್ಷರ ಗಾತ್ರ

ಹೊಸಪೇಟೆ: ‘ರಾಜ್ಯ ಪ್ರವಾಸೋದ್ಯಮ ಇಲಾಖೆಯು ಜೂಜು ಕೇಂದ್ರಗಳನ್ನು ತೆರೆಯಲು ಮುಂದಾಗಿರುವುದು ಯುವಜನ ವಿರೋಧಿ ಕ್ರಮವಾಗಿದೆ. ಇದು ಸಾಮಾಜಿಕ ಸ್ವಾಸ್ಥ್ಯ ಕದಡುವ ಕೆಲಸ’ಎಂದು ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಸೇಷನ್‌ ಜಿಲ್ಲಾ ಅಧ್ಯಕ್ಷ ಪ್ರಶಾಂತ್‌ ಬಡಿಗೇರ್‌ ಟೀಕಿಸಿದ್ದಾರೆ.

‘ಅಧಿಕಾರದಲ್ಲಿರುವ ಪಕ್ಷವೊಂದು ಆದಾಯ ತರುವುದಕ್ಕಾಗಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಕ್ರಮವೇ ಸರಿಯಲ್ಲ. ಎಲ್ಲೆಲ್ಲಿ ‘ಕ್ಯಾಸಿನೊ’ ಆರಂಭವಾಗಿವೆಯೋ ಅಂತಹ ಕಡೆಗಳಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೂಜಿನಿಂದ ದಿವಾಳಿತನ, ಆತ್ಮಹತ್ಯೆ, ಹಣದ ಕಳ್ಳ ಸಾಗಾಣಿಕೆ ಸೇರಿದಂತೆ ಇತರೆ ಅಪರಾಧ ಕೃತ್ಯಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದ ಇಡೀ ಸಮಾಜ ಹಾಳಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ನೆರೆ–ಬರದಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನ ಚೇತರಿಸಿಕೊಂಡಿಲ್ಲ. ರೈತರ ಆತ್ಮಹತ್ಯೆಗಳು ನಿರಂತರವಾಗಿ ಮುಂದುವರೆದಿವೆ. ನಿರುದ್ಯೋಗ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳ ಕಡೆಗೆ ಗಮನಹರಿಸಬೇಕಾದ ಸರ್ಕಾರ ಜೂಜು ಕೇಂದ್ರ ಆರಂಭಿಸಿ ಜನರನ್ನು ಮತ್ತಷ್ಟು ಅಧೋಗತಿಗೆ ಕೊಂಡೊಯ್ಯಲು ಮುಂದಾಗಿರುವುದು ಸರಿಯಲ್ಲ. ಪ್ರವಾಸೋದ್ಯಮ ಸಚಿವರು ವಿವೇಚನೆ ಬಿಟ್ಟು ನಡೆದುಕೊಳ್ಳುತ್ತಿರುವುದು ಸರಿಯಲ್ಲ’ ಎಂದಿದ್ದಾರೆ.

‘ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಆನ್‌ಲೈನ್‌ ಲಾಟರಿ ಆರಂಭಿಸಿದ್ದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೊಲೆ, ಸುಲಿಗೆಯಂತಹ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ಧರ್ಮಸಿಂಗ್‌ ನೇತೃತ್ವದ ಸರ್ಕಾರ ಅದರ ಮೇಲೆ ನಿರ್ಬಂಧ ಹೇರಿತ್ತು. ಇತಿಹಾಸದಿಂದ ಪಾಠ ಕಲಿಯುವುದು ಬಿಟ್ಟು, ಜೂಜು ಪ್ರೋತ್ಸಾಹಿಸುವ ಕೆಲಸಕ್ಕೆ ಸರ್ಕಾರವೇ ಮುಂದಾಗಿರುವುದು ದುರದೃಷ್ಟಕರ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಅನಿವಾರ್ಯವಾಗಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT