ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021: ವಿಜಯನಗರಕ್ಕೆ ಸಂಭ್ರಮ, ಬಳ್ಳಾರಿಗೆ ಬೇಸರ

ಅವಳಿ ಜಿಲ್ಲೆಗಳಿಗೆ ಮಳೆ ವರ್ಷ; ಅತಿವೃಷ್ಟಿಯಿಂದ ನಲುಗಿದ ರೈತರು
Last Updated 31 ಡಿಸೆಂಬರ್ 2021, 3:24 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 2021ನೇ ವರ್ಷ ವಿಜಯನಗರದ ಪಾಲಿಗೆ ಅತ್ಯಂತ ಮಹತ್ವದ ವರ್ಷ. ವಿಜಯನಗರ ಜಿಲ್ಲೆಯಾಗಬೇಕೆಂಬ ಬಹುವರ್ಷಗಳ ಕನಸು ನನಸಾದ ವರ್ಷ.

ಇನ್ನೊಂದೆಡೆ ಅಖಂಡ ಜಿಲ್ಲೆ ವಿಭಜಿಸಿದ ನೋವು ಬಳ್ಳಾರಿ ಜನತೆಗೆ ಬೇಸರ ಮೂಡಿಸಿತು. ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪ್ಲಿ ಕೂಡ ಹೊಸ ಜಿಲ್ಲೆಯಿಂದ ದೂರವಾದ ನೋವು. ಒಂದುವರೆ ದಶಕದ ಹೋರಾಟ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ರಾಜಕೀಯ ಇಚ್ಛಾಶಕ್ತಿಯಿಂದ ಫೆಬ್ರುವರಿ 8ರಂದು ವಿಜಯನಗರ, ರಾಜ್ಯದ 31ನೇ ಜಿಲ್ಲೆಯಾಗಿ ಉದಯಗೊಂಡಿತು.

ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಬಾರದು ಎಂದು ಬಳ್ಳಾರಿಯಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಿತ್ತು. ಮತ್ತೊಂದೆಡೆ ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚಿಸಬೇಕೆಂದು ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರಿನಲ್ಲಿ ಒತ್ತಡ ಹೆಚ್ಚಿತ್ತು. ಆನಂದ್‌ ಸಿಂಗ್‌ ಅವರ ಸತತ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಅಂತಿಮವಾಗಿ ಹೊಸ ಜಿಲ್ಲೆ ಘೋಷಿಸಿತ್ತು.

ಜಿಲ್ಲೆ ರಚನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಐಎಎಸ್‌ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಿ ಜಿಲ್ಲೆ ಕಟ್ಟುವ ಪ್ರಕ್ರಿಯೆಗೆ ಚುರುಕು ನೀಡಿತ್ತು. ಇನ್ನೇನು ದೊಡ್ಡ ಮಟ್ಟದಲ್ಲಿ ಜಿಲ್ಲಾ ಉದ್ಘಾಟನಾ ಸಮಾರಂಭ ಆಯೋಜಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿತ್ತು. ಕೊರೊನಾ ಆರ್ಭಟ ತಗ್ಗಿದರೂ ಅನೇಕ ನಿರ್ಬಂಧಗಳನ್ನು ಮುಂದುವರೆಸಲಾಗಿತ್ತು. ಅದರ ಪರಿಣಾಮ ಎಂಟು ತಿಂಗಳ ನಂತರ ಜಿಲ್ಲೆಯ ಉದ್ಘಾಟನೆ ನೆರವೇರಿಸಲಾಯಿತು.

ಅಕ್ಟೋಬರ್‌ 2ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ‘ಮಿನಿ ಹಂಪಿ’ ಸೃಷ್ಟಿಸಿ ಅದ್ದೂರಿ ಕಾರ್ಯಕ್ರಮದಲ್ಲಿ ಜಿಲ್ಲೆ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಿದರು. ಎರಡು ದಿನಗಳ ಧ್ವನಿ, ಬೆಳಕು ಕಾರ್ಯಕ್ರಮದಲ್ಲಿ ಹಲವು ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇಡೀ ನಗರ ದೀಪದ ಬೆಳಕಿನಲ್ಲಿ ಮಿಂದೆದ್ದಿತ್ತು. ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ವೇಳೆ ಕೋಟ್ಯಂತರ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ ಹೊಸ ಜಿಲ್ಲೆ ಪಾಲಾದವು ಎಂಬ ಕೊರಗಿ ಬಳ್ಳಾರಿಯವರನ್ನು ಕಾಡಿತ್ತು.

ಅತಿವೃಷ್ಟಿಗೆ ತತ್ತರ; ಚುನಾವಣೆ ವರ್ಷ:

ಅತಿವೃಷ್ಟಿಗೆ ಅವಳಿ ಜಿಲ್ಲೆಯ ರೈತರು ಈ ವರ್ಷ ಅಪಾರ ನಷ್ಟ ಅನುಭವಿಸಿದರು. ಎರಡೂ ಜಿಲ್ಲೆಗೆ ಈ ವರ್ಷ ಮಳೆಯ ವರ್ಷವಾಗಿತ್ತು. ಮುಂಗಾರಿನಿಂದ ಹಿಂಗಾರಿನ ವರೆಗೆ ಭಾರಿ ಮಳೆಯಾಗಿದ್ದರಿಂದ ಈರುಳ್ಳಿ, ಮೆಣಸಿನಕಾಯಿ, ಭತ್ತ, ಬಾಳೆಕಾಯಿ, ಮೆಕ್ಕೆಜೋಳ, ಶೇಂಗಾ ಸೇರಿದಂತೆ ಇತರೆ ಬೆಳೆಗಳು ಹಾನಿಯಾದವು. ತುಂಗಭದ್ರಾ ಜಲಾಶಯ ತುಂಬಿದ್ದರಿಂದ ಎರಡೂ ಬೆಳೆಗಳಿಗೂ ನೀರು ಹರಿಸಲು ನಿರ್ಧಾರ.

ಮಾರ್ಚ್‌–ಏಪ್ರಿಲ್‌ನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು, ಕಾಂಗ್ರೆಸ್‌ ಜಯಭೇರಿ ಬಾರಿಸಿತು. ವರ್ಷಾಂತ್ಯಕ್ಕೆ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿಯ ಏಚರೆಡ್ಡಿ ಸತೀಶ ಜಯ ಗಳಿಸಿದರು. ನನೆಗುದಿಗೆ ಬಿದ್ದಿದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಜರುಗಿದವು.

ಆನಂದ್‌ ಸಿಂಗ್‌ ಹೊಸ ಇನ್ನಿಂಗ್ಸ್‌

2021ನೇ ವರ್ಷ ಸಚಿವ ಆನಂದ್‌ ಸಿಂಗ್‌ ಅವರ ಪಾಲಿಗೆ ಸಂತಸ ಹಾಗೂ ದುಃಖದ ವರ್ಷವಾಗಿತ್ತು. ಜನವರಿಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ಆಯ್ಕೆಯಾದ ಸಿಂಗ್‌, ಫೆಬ್ರುವರಿ 9ರಂದು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಿದರು. ಜುಲೈ 18ರಂದು ಅವರ ತಂದೆ ಪೃಥ್ವಿರಾಜ್‌ ಸಿಂಗ್‌ ನಿಧನರಾದರು. ತಂದೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರು, ಅವರ ಅಗಲಿಕೆಯಿಂದ ದುಃಖದಲ್ಲಿ ಮುಳುಗಿದರು. ಆಗಸ್ಟ್‌ 4ರಂದು ಪುನಃ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಪ್ರವಾಸೋದ್ಯಮ ಖಾತೆ ಕೊಟ್ಟಿದ್ದಕ್ಕೆ ಮುನಿಸಿಕೊಂಡಿದ್ದ ಅವರು ಒಂದು ಹಂತದಲ್ಲಿ ರಾಜೀನಾಮೆಗೆ ಮುಂದಾಗಿದ್ದರು. ಅವರ ಕಚೇರಿಯ ನಾಮಫಲಕ ತೆರವುಗೊಳಿಸಿದ್ದರು. ಆಗಸ್ಟ್‌ 15ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆನಂದ್‌ ಸಿಂಗ್‌ ಧ್ವಜಾರೋಹಣ ನೆರವೇರಿಸಿದರು. ಸಿ.ಎಂ. ಸಂಧಾನದ ನಂತರ ಆ. 24ರಂದು ಖಾತೆ ಸ್ವೀಕರಿಸಿದರು.

ಇಬ್ಬರು ಸ್ವಾಮೀಜಿಗಳ ನಿಧನ

ಸೆ. 17ರಂದು ಹಂಪಿ ಸದಾಶಿವಯೋಗಿ ಸ್ವಾಮೀಜಿ ನಿಧನರಾದರು. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿಯಾಗಿದ್ದ ಸಂಗನಬಸವ ಸ್ವಾಮೀಜಿ ಅವರು ನ. 22ರಂದು ನಿಧನ ಹೊಂದಿದರು. ಎರಡು ತಿಂಗಳ ಅಂತರದೊಳಗೆ ಜಿಲ್ಲೆಯ ಇಬ್ಬರು ಪ್ರಮುಖ ಸ್ವಾಮೀಜಿಗಳು ನಿಧನರಾದರು.

ರಾಜ್ಯೋತ್ಸವ, ಪದ್ಮಶ್ರೀ ಪ್ರಶಸ್ತಿ

ಜಿಲ್ಲೆಯ ಇಬ್ಬರಿಗೆ, ಅದು ಕೂಡ ಒಂದೇ ಊರಿನ ಇಬ್ಬರಿಗೆ ಪದ್ಮಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಬಂದದ್ದು ಈ ವರ್ಷದ ವಿಶೇಷ.
ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ಮಾತಾ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಹಾಗೂ ಡಾ. ಅಂಬಣ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿ.ಸಿ., ಎಸ್ಪಿ, ಸಿಇಒ ನೇಮಕ

ಅಕ್ಟೋಬರ್‌ 2ರಂದು ವಿಜಯನಗರ ಜಿಲ್ಲೆ ಉದ್ಘಾಟನೆಗೂ ಎರಡು ದಿನಗಳ ಮುನ್ನ (ಸೆ.30) ಹೊಸ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಅನಿರುದ್ಧ್‌ ಪಿ. ಶ್ರವಣ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಡಾ. ಅರುಣ್‌ ಕೆ. ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಅ. 11ರಂದು ಹರ್ಷಲ್ ಭೊಯರ್‌ ನಾರಾಯಣರಾವ್‌, ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದರು. ಅಮರಾವತಿ ಅತಿಥಿ ಗೃಹದಲ್ಲಿ ತಾತ್ಕಾಲಿಕ ಡಿ.ಸಿ, ಸಿಇಒ ಕಚೇರಿ ಆರಂಭಿಸಲಾಗಿದೆ. ಬಾಬು ಜಗಜೀವನ್‌ರಾಂ ಭವನವನ್ನು ಎಸ್ಪಿ ಕಚೇರಿಯಾಗಿ ಪರಿವರ್ತಿಸಲಾಗಿದೆ.

ಜಿಲ್ಲಾಡಳಿತ ಭವನ ನಿರ್ಮಾಣವಾಗುವವರೆಗೆ ಟಿಎಸ್‌ಪಿ ಹಳೆಯ ಕಟ್ಟಡದಲ್ಲಿ ಕಚೇರಿ ಆರಂಭಿಸಲು ನಿರ್ಧರಿಸಲಾಗಿದ್ದು, ಅದರ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. ಇನ್ನಷ್ಟೇ ಹಲವು ಇಲಾಖೆಗಳಿಗೆ ಅಧಿಕಾರಿಗಳ ನೇಮಕವಾಗಬೇಕಿದೆ.

ಪ್ರಮುಖ ಘಟನೆಗಳ ತಿಂಗಳವಾರು ವಿವರ:

ಜನವರಿ
* ಆನಂದ್‌ ಸಿಂಗ್‌ ಡಿಸಿಸಿ ಬ್ಯಾಂಕ್‌ ಪ್ರವೇಶ
* ಹಂಪಿ ಮೋಟಾರ್‌ ರೇಸ್‌ ಸ್ಪರ್ಧೆ

ಫೆಬ್ರುವರಿ
* ವಿಜಯನಗರ ಜಿಲ್ಲೆ ಘೋಷಿಸಿ ಅಂತಿಮ ಅಧಿಸೂಚನೆ
* ಆನಂದ್‌ ಸಿಂಗ್‌ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆ
* ಕೊಲೆ–ಆಸ್ತಿ ವೈಷ್ಯಮ್ಯ ಹಿನ್ನೆಲೆಯಲ್ಲಿ ಕೋರ್ಟ್‌ ಆವರಣದಲ್ಲಿ ವಕೀಲ ತಾರಿಹಳ್ಳಿ ವೆಂಕಟೇಶ ಕೊಲೆ

ಮಾರ್ಚ್‌
* ಮೈಲಾರದಲ್ಲಿ ಮೊಳಗಿದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ.
* ಹಂಪಿಯಲ್ಲಿ ಡೀಸೆಲ್‌ ಚಾಲಿತ ರೈಲು ಸೇವೆ ಆರಂಭ
* ಹಂಪಿ ಕಮಲ ಮಹಲ್‌ ಸ್ಮಾರಕ ಸುತ್ತಲಿನ ಕೋಟೆ ಗೋಡೆ ಕುಸಿತ
* ಹಂಪಿಯಲ್ಲಿ ಸರಳ ಹೋಳಿ

ಏಪ್ರಿಲ್‌
* ಯುವರತ್ನ ಸಿನಿಮಾ ಮೊದಲ ಶೋ ಪ್ರದರ್ಶನ
* ನೌಕರರಿಂದ ಮುಷ್ಕರ
* ಹಂಪಿ ಕನ್ನಡ ವಿ.ವಿ. ನುಡಿಹಬ್ಬದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕ ಜಗದೀಶ ಎಸ್‌. ಗುಡಗುಂಟಿ, ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್‌ ಕೆ. ಅವರಿಗೆ ನಾಡೋಜ ಗೌರವ ಪ್ರದಾನ
* ಹಂಪಿ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ

ಮೇ
* ಕೋವಿಡ್‌ ಲಾಕ್‌ಡೌನ್‌ ಹೋಟೆಲ್‌, ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತ
* ಸುಧಾಮೂರ್ತಿಯಿಂದ ಹಂಪಿ ಗೈಡ್‌ಗಳಿಗೆ ಆರ್ಥಿಕ ನೆರವು

ಜೂನ್‌
* ಬೆಂಗಳೂರಿನಿಂದ ಹೊಸಪೇಟೆ ವರೆಗೆ ರೈಲ್ವೆ ವಿದ್ಯುತ್‌ ಮಾರ್ಗ ಕಾಮಗಾರಿ ಪೂರ್ಣ. ವರ್ಷಾಂತ್ಯಕ್ಕೆ ಹುಬ್ಬಳ್ಳಿ ವರೆಗೆ ಕಾಮಗಾರಿ ಪೂರ್ಣ.
* ಸಕಾಲಕ್ಕೆ ಮುಂಗಾರು ಮಳೆ
* ಜಿಲ್ಲೆಯಲ್ಲಿ 100ರ ಗಡಿ ದಾಟಿದ ಪೆಟ್ರೋಲ್‌
* ಲಾಕ್‌ಡೌನ್‌ ಸಡಿಲಿಕೆ; ಜನ ನಿರಾಳ
* ತುಂಗಭದ್ರಾ ಜಲಾಶಯಕ್ಕೆ ಸಿಐಎಸ್‌ಎಫ್‌ ಭದ್ರತೆ
* ತುಂಗಭದ್ರಾ ಒಳಹರಿವು ಭಾರಿ ಹೆಚ್ಚಳ
* ಗೊರವಯ್ಯ ಮಾಲತೇಶಪ್ಪ (61) ನಿಧನ
* ಹಂಪಿ ಸ್ಮಾರಕ ವೀಕ್ಷಣೆಗೆ ಸಾರ್ವಜನಿಕ ಮುಕ್ತ
* ಕಾರ್ ಹುಣ್ಣಿಮೆ ಆಚರಣೆ

ಜುಲೈ
* ಕೂಡ್ಲಿಗಿಗೆ ಕುಡಿಯುವ ನೀರು ಯೋಜನೆಗೆ ಮಂಜೂರು
* ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಮುಕ್ತ
‌* ಎಸ್ಸೆಸ್ಸೆಲ್ಸಿ ಪರೀಕ್ಷೆ
* ಕಾಲುವೆಗೆ ನೀರು
* ತುಂಗಭದ್ರಾ ಜಲಾಶಯ ಭರ್ತಿ ನದಿಗೆ ನೀರು
* ನದಿಯಲ್ಲಿ ಪ್ರವಾಹ ಹಂಪಿ ಸ್ಮಾರಕಗಳು ಮುಳುಗಡೆ

ಆಗಸ್ಟ್‌
* ದರೋಜಿಯಲ್ಲಿ ಜಂಗಲ್‌ ಸಫಾರಿ ಆರಂಭ
* ತುಂಗಭದ್ರೆಗೆ ಸಚಿವ ಕಾರಜೋಳ ಬಾಗಿನ
* ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭೇಟಿ

ಸೆಪ್ಟೆಂಬರ್‌
* ಹಂಪಿ, ಗುಡೇಕೋಟೆಗೆ ಪುನೀತ್‌ ರಾಜಕುಮಾರ್‌ ಭೇಟಿ
* ಶಾಲೆ ಮರು ಆರಂಭ
* ಹಂಪಿಗೆ ಪ್ರವಾಸಿಗರ ಭೇಟಿ ನಿರ್ಬಂಧ ತೆರವು

ಅಕ್ಟೋಬರ್‌
* ವಿಜಯನಗರ ಜಿಲ್ಲೆ ಉದ್ಘಾಟನೆ
* ಏಳುಕೇರಿಗಳಲ್ಲಿ ದಸರಾ ಸಂಭ್ರಮ ಆರಂಭ

ನವೆಂಬರ್‌
* ಜಿಮ್‌ ಆರಂಭ
* ಮಳೆಗೆ ಜಿಲ್ಲೆಯಲ್ಲಿ ಅಪಾರ ಹಾನಿ

ಡಿಸೆಂಬರ್‌
* ವಿಧಾನ ಪರಿಷತ್‌ ಚುನಾವಣೆ
* ಕೊಟ್ಟೂರು ಠಾಣೆಯ ಐವರು ಪೊಲೀಸರು ಅಮಾನತು
* ಹಂಪಿಯಲ್ಲಿ ಫಲಪೂಜಾ ಮಹೋತ್ಸವದ ಸಂಭ್ರಮ
* ಹತ್ತು ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ
* ಸ್ಥಳೀಯ ಸಂಸ್ಥೆಗಳಿಗೆ ಮತದಾನ
* ನೈಟ್‌ ಕರ್ಫ್ಯೂ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT