ಭಾನುವಾರ, ಡಿಸೆಂಬರ್ 8, 2019
21 °C
ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ರಾಜ್ಯ ಉಪಾಧ್ಯಕ್ಷ ಬಸವರಾಜ ಆರೋಪ

ಕೇಂದ್ರದಿಂದ ಅಂಗನವಾಡಿ ಮುಚ್ಚುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ‘ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅಂಗನವಾಡಿಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ’ ಎಂದು ‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌’ (ಸಿ.ಐ.ಟಿ.ಯು.) ರಾಜ್ಯ ಉಪಾಧ್ಯಕ್ಷ ಆರ್‌.ಎಸ್‌. ಬಸವರಾಜ ಆರೋಪಿಸಿದರು.

ಸಿ.ಐ.ಟಿ.ಯು ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರ ಎಂಟನೇ ಬಳ್ಳಾರಿ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

‘ಅಂಗನವಾಡಿಗಳ ಮೇಲೆ ನೂರಾರು ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಬಡವರು ಅವಲಂಬಿತರಾಗಿದ್ದಾರೆ. ಒಂದುವೇಳೆ ಅವುಗಳನ್ನು ಮುಚ್ಚಲು ಮುಂದಾದರೆ ಲಕ್ಷಾಂತರ ಮಹಿಳೆಯರು ಸೇರಿಕೊಂಡು ಇಡೀ ನವದೆಹಲಿಯ ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಬಂದ್‌ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಶಾಸಕರು, ಸಂಸದರು ಯಾವಾಗ ಬೇಕಾದರೂ ವೇತನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಕನಿಷ್ಠ ಗೌರವ ಧನದಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಬಗ್ಗೆ ಗಮನ ಹರಿಸುವುದಿಲ್ಲ. ಹತ್ತಾರು ಸಲ ಹೋರಾಟ ನಡೆಸಿದರೂ ಅದರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಬದುಕು ಹಸನುಗೊಳಿಸುತ್ತೇನೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯವರ ಭರವಸೆ ಸುಳ್ಳಾಗಿದೆ. ಅಂಬಾನಿ, ಅದಾನಿ ಅವರ ಆಸ್ತಿ ದುಪ್ಪಟ್ಟು ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ನೀವು ಯಾರ ಹಿತ ಕಾಯಲು ಪ್ರಧಾನಿಯಾಗಿದ್ದೀರಿ?’ ಎಂದು ಪ್ರಶ್ನಿಸಿದರು.

‘ಐದು ವರ್ಷಗಳ ಹಿಂದೆ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₨40 ಇತ್ತು. ಈಗ ಅದು ₨85ಕ್ಕೆ ಏರಿಕೆಯಾಗಿದೆ. ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್‌ ಬೆಲೆ ₨450ರಿಂದ ₨1,000ಕ್ಕೆ ಹೆಚ್ಚಾಗಿದೆ. ಬಣ್ಣದ ಮಾತುಗಳ ಮೂಲಕ 2019ರಲ್ಲಿ ಮತ್ತೆ ಮತ ಕೇಳಲು ಬರುವ ಮೋದಿಗೆ ಒಳ್ಳೆಯ ಪಾಠ ಕಲಿಸಬೇಕು. ಒಂದುವೇಳೆ ಅವರು ಪುನರಾಯ್ಕೆಯಾದರೆ ಇಡೀ ದೇಶವನ್ನು ಹಾಳು ಮಾಡುತ್ತಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜ.8 ಮತ್ತು 9ರಂದು ಭಾರತ ಬಂದ್‌ಗೆ ಕರೆ ಕೊಡಲಾಗಿದೆ. ಅಂದಿನ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ’ ಎಂದು ಮನವಿ ಮಾಡಿದರು.

‘ಹೋರಾಟ, ಹಕ್ಕುಗಳ ಪ್ರಶ್ನೆ ಬಂದಾಗ ಕೆಂಪು ಧ್ವಜ ಹಿಡಿದುಕೊಳ್ಳುತ್ತೀರಿ. ಚುನಾವಣೆ ಸಂದರ್ಭದಲ್ಲಿ ಹಸಿರು, ಕೇಸರಿ ಧ್ವಜ ಹಿಡಿದುಕೊಂಡು ಬೆಂಬಲಿಸುತ್ತೀರಿ. ಆ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕು’ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಪಿ.ಎಸ್‌. ನಾಗರತ್ನ ಮಾತನಾಡಿ, ‘ಅಪೌಷ್ಟಿಕತೆ ದೂರ ಮಾಡುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಪ್ರಮುಖವಾದುದು. ಆದರೆ, ಅವುಗಳನ್ನು ಹಾಳು ಮಾಡಲು ಕೇಂದ್ರ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ. ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುವ ಅಗತ್ಯವಿದೆ’ ಎಂದರು.

‘ಶಿಕ್ಷಣ, ವೈದ್ಯಕೀಯ ಸೌಲಭ್ಯ, ಆಹಾರದ ಹಕ್ಕು ಕಲ್ಪಿಸಿಕೊಡುವುದು ಸರ್ಕಾರದ ಮೊದಲ ಆದ್ಯತೆಯ ಕೆಲಸವಾಗಬೇಕು. ಆದರೆ, ಸರ್ಕಾರ ಕಾರ್ಪೊರೇಟ್‌ ಕುಳಗಳ ಜೋಳಿಗೆ ತುಂಬಿಸುವ ಕೆಲಸ ಮಾಡುತ್ತಿದೆ. ಅಂಗನವಾಡಿ ಕೇಂದ್ರಗಳ ಮೇಲೆ ನೂರಾರು ಬಡವರು ಅವಲಂಬಿತರಾಗಿದ್ದಾರೆ. ಒಂದುವೇಳೆ ಅವುಗಳನ್ನು ಮುಚ್ಚಿದರೆ ಲಕ್ಷಾಂತರ ಮಂದಿಗೆ ತೊಂದರೆಯಾಗುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಕೇಂದ್ರ ಸರ್ಕಾರಕ್ಕೆ ಇಲ್ಲ’ ಎಂದು ಟೀಕಿಸಿದರು.

ಸಿ.ಐ.ಟಿ.ಯು. ಜಿಲ್ಲಾ ಅಧ್ಯಕ್ಷ ಭಾಸ್ಕರ್‌ ರೆಡ್ಡಿ ಮಾತನಾಡಿ, ‘ನಮ್ಮ ಹೋರಾಟಗಳು ಭಾಷಣ, ಘೋಷಣೆಗಳಿಗಷ್ಟೇ ಸೀಮಿತವಾಗುತ್ತಿವೆ. ಐದು ವರ್ಷಕ್ಕೊಮ್ಮೆ ಬರುವ ನಿಜವಾದ ಹೋರಾಟದಲ್ಲಿ ಮೈಮರೆತು ಸೋಲುತ್ತಿದ್ದೇವೆ. 2019ರಲ್ಲಿ ಎದುರಾಗುವ ಹೋರಾಟದಲ್ಲಿ ಮೈಮರೆತು ಬಿಜೆಪಿಗೆ ಮತ ಹಾಕಬಾರದು’ ಎಂದರು.

ಸಿ.ಐ.ಟಿ.ಯು. ಮುಖಂಡರಾದ ಕೆ. ನಾಗರತ್ನ, ಜೆ. ಸತ್ಯಬಾಬು, ಬಿ.ಎಂ. ಶಿಲ್ಪ. ಎಂ. ಜಂಬಯ್ಯ ನಾಯಕ, ಜೆ. ಪ್ರಕಾಶ್‌, ಎ. ಕರುಣಾನಿಧಿ, ಎಂ. ಗೋಪಾಲ್‌, ಯಲ್ಲಾಲಿಂಗ, ಕೆ.ಎಂ. ಸಂತೋಷ್‌ ಕುಮಾರ್‌, ಜಿ.ಆರ್‌. ಶಿವಶಂಕರ್‌, ತಿಪ್ಪಯ್ಯ ಇದ್ದರು. ಇದಕ್ಕೂ ಮುನ್ನ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಕಾರ್ಯಕ್ರಮ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ವರೆಗೆ ರ್‍ಯಾಲಿ ನಡೆಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು