ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ಕಲಿ, ಸಂಡಿಗೆಯಿಂದ ಬದುಕು ಕಟ್ಟಿಕೊಂಡರು

ಸ್ವಾವಲಂಬಿ ಬದುಕಿಗೆ ದಾರಿದೀಪವಾದ ಗೃಹ ಉದ್ಯಮ
Last Updated 6 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ನಿಪ್ಪಟ್ಟು, ಹಪ್ಪಳ, ಶಂಕರಪಳೆ, ಸಂಡಿಗೆ, ಚಕ್ಕಲಿ ಇವು ಹಬ್ಬ ಹರಿದಿನಗಳಲ್ಲಿ ಎಲ್ಲರ ಮನೆಯಲ್ಲಿ ಮಾಡಲಾಗುತ್ತದೆ. ಆದರೆ, ಈ ಮನೆಯಲ್ಲಿ ನಿತ್ಯವೂ ಇವುಗಳನ್ನು ತಯಾರಿಸಲಾಗುತ್ತದೆ.

ಅದು ಪಟ್ಟಣದ ನೇಕಾರ ಲಕ್ಷ್ಮಮ್ಮನವರ ಮನೆ. ನಿತ್ಯವೂ ಅವರ ಮನೆಯಲ್ಲಿ ಸಂಡಿಗೆ, ಹಪ್ಪಳ ಕರಿಯುವ ಸದ್ದು ಕೇಳಿಸುತ್ತದೆ. ಪಟ್ಟಣದರಾಮನಗರದ ತೇರುಬೀದಿಯಲ್ಲಿರುವ ಪಾದಗಟ್ಟೆ ಆಂಜನೇಯ ದೇವಸ್ಥಾನದ ಬಳಿಯ ಪುಟ್ಟ ಮನೆಯಲ್ಲಿ ಲಕ್ಷ್ಮಮ್ಮ ಈ ಕೆಲಸ ಮಾಡುತ್ತಿದ್ದಾರೆ. ಅದೇ ಅವರ ಬದುಕಿಗೆ ಆಧಾರವಾಗಿದ್ದು, ಆ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ.

ಐದು ವರ್ಷಗಳಿಂದ ಈ ಕಿರು ಗೃಹ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನ 15ಕ್ಕೂ ಹೆಚ್ಚು ಗ್ರಾಮಗಳ ಅಂಗಡಿಗಳಲ್ಲಿ ಇವರು ಕೊಡುವ ಪದಾರ್ಥಗಳೇ ಅಚ್ಚುಮೆಚ್ಚು. ಇದರ ಜತೆಯಲ್ಲಿ ಮಸಾಲೆ ಅಲಸಂದಿಗೂ ಹೆಚ್ಚಿನ ಬೇಡಿಕೆ ಇದೆ.

ಲಕ್ಷ್ಮಮ್ಮ ಆರಂಭದಲ್ಲಿ ಕೇವಲ ₹5 ಸಾವಿರ ಬಂಡವಾಳದೊಂದಿಗೆ ಸಂಡಿಗೆ, ಹಪ್ಪಳ ತಯಾರಿಸಿ ಮಾರಾಟ ಮಾಡಲು ಆರಂಭಿಸಿದರು. ಕ್ರಮೇಣ ಬೇಡಿಕೆ ಹೆಚ್ಚಾದಂತೆಲ್ಲಾ ಪ್ರತಿದಿನ 10 ಕೆ.ಜಿ ಸಂಡಿಗೆ ತಯಾರಿಸಿ ಮಾರಾಟ ಮಾಡಿದರು. ಲಕ್ಷ್ಮಮ್ಮ ಸಂಡಿಗೆ ಸೇರಿದಂತೆ ಇತರೆ ಪದಾರ್ಥಗಳನ್ನು ತಯಾರಿಸಿದರೆ, ಇವರ ಮಗಳು ಪೂರ್ಣಿಮಾ ಮತ್ತು ಇತರೆ ಐದು ಜನ ಮಹಿಳೆಯರು ತಿನಿಸುಗಳ ಪ್ಯಾಕೆಟ್‌ ಸಿದ್ಧಪಡಿಸಲು, ಹಪ್ಪಳ ಉದ್ದಲು ಬರುತ್ತಾರೆ.

ಮೂರು ಗಂಟೆ ಕೆಲಸಕ್ಕೆ ₹100 ಕೂಲಿ ನೀಡುತ್ತಾರೆ. ಕೆ.ಜಿ ಕಚ್ಚಾ ಸಂಡಿಗೆಯಲ್ಲಿ ಕರಿದ 120 ಪ್ಯಾಕೆಟ್‌ ಸಂಡಿಗೆಗಳಾಗುತ್ತವೆ. ಆರು ಬಿಡಿ ಸಂಡಿಗೆಗಳ ಒಂದು ಪ್ಯಾಕೆಟ್‌ ಮಾಡಲಾಗುತ್ತದೆ. ಎಂ.ಎ, ಬಿ.ಇ.ಡಿ. ಪದವೀಧರರಾಗಿರುವ ಅವರ ಮಗ ಅನಂತ್‌, ತಮ್ಮ ದ್ವಿಚಕ್ರ ವಾಹನದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮಳಿಗೆಗಳಿಗೆ ಹೋಗಿ ಸಗಟು ಮಾರಾಟ ಮಾಡುತ್ತಾರೆ. ಇದುವರೆಗೂ ಮಾರುಕಟ್ಟೆ ಸಮಸ್ಯೆ ಆಗಿಲ್ಲ. ‘ಸ್ಥಳದಲ್ಲೇ ಹಣ ಪಾವತಿಸುತ್ತಾರೆ’ ಎಂದು ಅನಂತ್‌ ಹೇಳಿದರು.

ಲಕ್ಷ್ಮಮ್ಮ ಅವರು ಈ ಕಿರು ಉದ್ಯಮಕ್ಕಾಗಿ ಸ್ಥಳೀಯ ಬ್ಯಾಂಕ್‌ನಿಂದ ₹1ಲಕ್ಷ ಸಾಲ ಪಡೆದು ಮರುಪಾವತಿ ಮಾಡಿದ್ದಾರೆ. ಕಿರು ಉದ್ಯಮಕ್ಕೂ ಮುನ್ನ ಲಕ್ಷ್ಮಮ್ಮ ಅವರು ಪಟ್ಟಣದ ವಿದ್ಯಾಸಂಸ್ಥೆಯಲ್ಲಿ ಸಹಾಯಕಿ ಆಗಿ ಕೆಲಸ ಮಾಡಿದರು. ಕುಟುಂಬದ ನಿರ್ವಹಣೆಗೆ ಅಲ್ಲಿ ಕೊಡುವ ಅಲ್ಪ ವೇತನ ಸಾಲದಾದಾಗ ಸ್ವಾವಲಂಬಿ ಬದುಕಿಗಾಗಿ ಹಪ್ಪಳ ತಯಾರಿಸುವ ಕೆಲಸಕ್ಕೆ ಕೈ ಹಾಕಿದರು. ಬೇಡಿಕೆ ಹೆಚ್ಚಾದಂತೆ ಸಂಡಿಗೆ, ಶಂಕರಪಳೆ, ನಿಪ್ಪಟ್ಟು ತಯಾರಿಸಿ ಮಾರಾಟ ಮಾಡಿದರು. ಪಟ್ಟಣದ ಅನೇಕರು ಮನೆಗಳಲ್ಲಿ ಶುಭ ಕಾರ್ಯಗಳಿಗೆ ಮುಂಗಡ ಹಣಕೊಟ್ಟು ನಿಪ್ಪಟ್ಟು ಇತರೆ ಪದಾರ್ಥಗಳನ್ನು ತಯಾರಿಸುವಂತೆ ಬೇಡಿಕೆ ಇಡುತ್ತಾರೆ. ಬರು ಬರುತ್ತ ಅದು ಉದ್ಯಮದ ಸ್ವರೂಪ ಪಡೆದಿದೆ. ಅವರ ಬದುಕಿನಲ್ಲಿ ಬದಲಾವಣೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT