ಗಣಿ ಸಚಿವರ ಭೇಟಿಗೆ ನಿರ್ಧಾರ

7
ಜಿಲ್ಲಾ ಖನಿಜ ಪ್ರತಿಷ್ಠಾನದ ನಿಯಮಾವಳಿ ತಿದ್ದುಪಡಿಗೆ ಆಗ್ರಹ

ಗಣಿ ಸಚಿವರ ಭೇಟಿಗೆ ನಿರ್ಧಾರ

Published:
Updated:

ಬಳ್ಳಾರಿ: ‘ಜಿಲ್ಲಾ ಖನಿಜ ಪ್ರತಿಷ್ಠಾನದ ನಿಯಮಗಳು ಗಣಿಬಾಧಿತ ಜನ ಮತ್ತು ಪ್ರದೇಶಗಳಿಗೆ ನಿರೀಕ್ಷಿತ ಮಟ್ಟದಲ್ಲಿ ನ್ಯಾಯ ಸಲ್ಲಿಸಲು ವಿಫಲವಾಗಿರುವುದರಿಂದ ನಿಯಮಾವಳಿಗಳನ್ನು ಬದಲಿಸುವಂತೆ ಆಗ್ರಹಿಸಿ ಕೇಂದ್ರದ ಗಣಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಗಮನ ಸೆಳೆಯಲು ನಿರ್ಧರಿಸಲಾಗಿದೆ’ ಎಂದು ಮೈನ್ಸ್, ಮಿನರಲ್ಸ್ ಅಂಡ್ ಪೀಪಲ್ ಸಂಘಟನೆಯ ಕರ್ನಾಟಕ ಪ್ರತಿನಿಧಿ ಶಿವಕುಮಾರ ಮಾಳಗಿ ತಿಳಿಸಿದ್ದಾರೆ.

‘ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗಣಿ ಸಚಿವರು ಮತ್ತು ಗಣಿಗಾರಿಕೆ ಮತ್ತು ಬುಡಕಟ್ಟು ವ್ಯವಹಾರಗಳ ಸಂಸದೀಯ ಸಮಿತಿಯ ಮುಖ್ಯಸ್ಥರನ್ನು ಭೇಟಿ ಮಾಡಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಜ್ಯದ ಖನಿಜ ಪ್ರತಿಷ್ಠಾನವು ಅಧಿಕಾರಿಗಳು, ಶಾಸಕರು ಹಾಗೂ ಸಚಿವರ ಪ್ರಭಾವಕ್ಕೆ ಸಿಲುಕಿದೆ. ಪ್ರತಿಷ್ಠಾನದ ನಿರ್ವಹಣಾ ಸಮಿತಿಯಲ್ಲಿ ಗಣಿ ಬಾಧಿತ ಪ್ರದೇಶಗಳ ಗ್ರಾಮ ಪಂಚಾಯ್ತಿ ಮತ್ತು ಪಟ್ಟಣಗಳ ಮುನ್ಸಿಪಲ್ ಕೌನ್ಸಿಲ್ ಸದಸ್ಯರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ. ಇದು ಖನಿಜ ಕಾಯ್ದೆಯ ಸ್ಪಷ್ಟ ಉಲ್ಲಂಘನೆ’ ಎಂದಿದ್ದಾರೆ.

‘ಬಾಧಿತ ಪ್ರದೇಶಗಳ ಜನರ ಪರವಾಗಿ ಮೂವರು ಪ್ರತಿನಿಧಿಗಳನ್ನು ಸಮಿತಿಗೆ ನೇಮಿಸಬೇಕು ಎಂದು ಕೇಂದ್ರವು ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನಾ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೆ ಕರ್ನಾಟಕದಲ್ಲಿ ಪ್ರತಿನಿಧಿಗಳನ್ನು ಸಮಿತಿಯಿಂದ ಹೊರಗಿಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಪ್ರತಿಷ್ಠಾನದ ಕಚೇರಿ ಆರಂಭವಾಗಿಲ್ಲ. ಸಿಬ್ಬಂದಿ ನೇಮಕಾತಿಯಾಗಿಲ್ಲ. ಆಡಳಿತ ನಿರ್ವಹಣೆಗಾಗಿ ನಿಧಿಯ ಶೇ 5 ರಷ್ಟು ಬಳಸಿಕೊಳ್ಳಲು ಅವಕಾಶವಿದೆ. ರಾಜ್ಯ ಸರ್ಕಾರ ಈ ದಿಸೆಯಲ್ಲಿ ವಿಫಲವಾಗಿದೆ’ ಎಂದು ದೂರಿದ್ದಾರೆ.

‘ಪ್ರತಿಷ್ಠಾನವು ಹಮ್ಮಿಕೊಂಡ ಯೋಜನೆಗಳ ಕುರಿತು ದೊರೆಯುತ್ತಿರುವ ಸಾರ್ವಜನಿಕ ಮಾಹಿತಿಯೂ ಕಳಪೆಯಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಯಾವುದೇ ವೆಬ್‌ಸೈಟ್ ಇಲ್ಲ. ಮಾಹಿತಿ ಪ್ರಸಾರಕ್ಕಾಗಿ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಗ್ರಾಮ ಮಟ್ಟದಲ್ಲಿ ನಡೆಸುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

‘ಈ ಹಿನ್ನೆಲೆಯಲ್ಲಿ, ನವದೆಹಲಿಯ ಪ್ರತಿಷ್ಠಿತ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಸಂಸ್ಥೆಯು ಇತ್ತೀಚೆಗೆ ಸಭೆ ನಡೆಸಿ, ಕೇಂದ್ರ ಗಣಿ ಸಚಿವಾಲಯದ ಹಿರಿಯ ಅಧಿಕಾರಿಗಳು, ಗಣಿ ಪರಿಸರ ತಜ್ಞರು ಗಣಿಗಾರಿಕೆ ನಡೆಸುವ ರಾಜ್ಯದ ಪ್ರತಿನಿಧಿಗಳೊಂದಿಗೆ ಚರ್ಚಿಸಿದೆ’ ಎಂದಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !