ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಹಾಯವಾಣಿಯೇ ಅಸಹಾಯಕ!

ಸಿಬ್ಬಂದಿ ಕೊರತೆ, ನೆರವಿನ ಹಸ್ತ ಚಾಚಲು ಪರದಾಟ: ವೇತನ ಪರಿಷ್ಕರಣೆಯೂ ಇಲ್ಲ
Last Updated 15 ನವೆಂಬರ್ 2019, 4:12 IST
ಅಕ್ಷರ ಗಾತ್ರ

ಬಳ್ಳಾರಿ: ರಾಜ್ಯದಲ್ಲಿ ‘ಮಕ್ಕಳ ಸಹಾಯವಾಣಿ’ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದು, ಸಹಾಯ ಕೋರಿ ಬರುವ ಕರೆಗಳಿಗೆ ತಕ್ಷಣವೇ ಸ್ಪಂದಿಸಲು ಆಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಐದು ವರ್ಷದಿಂದ ವೇತನ ಪರಿಷ್ಕರಣೆಯೂ ಆಗದೇ ಜೀವನ ಸಾಗಿಸಲೂ ಪರದಾಡುತ್ತಿದ್ದಾರೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಅನುದಾನ ಪಡೆದು ಚೈಲ್ಡ್‌ ಇಂಡಿಯಾ ಫೌಂಡೇಶನ್ ದೇಶದಾದ್ಯಂತ ಸಹಾಯವಾಣಿಯನ್ನು ನಡೆಸುತ್ತಿದೆ.

2012ರವರೆಗೂ ರಾಜ್ಯದ 12 ಜಿಲ್ಲೆಗಳಲ್ಲಿ ಮಕ್ಕಳ ಸಹಾಯವಾಣಿ ಅಡಿ ಕೆಲಸ ಮಾಡಲು ಪ್ರತಿ ಜಿಲ್ಲೆಗೆ ಒಂದು ನೋಡಲ್‌ ಸಂಸ್ಥೆ, ಸಂಯೋಜಿತ ಸಂಸ್ಥೆ ಮತ್ತು ಬೆಂಬಲಿತ ಸಂಸ್ಥೆಯನ್ನು ನೇಮಿಸಲಾಗುತ್ತಿತ್ತು. ಈ ಮೂರು ಸಂಸ್ಥೆಗಳು ವಿವಿಧ ಇಲಾಖೆಗಳ ಸಹಯೋಗ ಪಡೆದು ‘ಸಹಾಯವಾಣಿ’ ನಡೆಸುತ್ತಿವೆ.

ಕಲಬುರ್ಗಿ, ಮಂಗಳೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಬೀದರ್‌, ಮೈಸೂರು, ಮಂಡ್ಯ, ಧಾರವಾಡಗಳಲ್ಲಿ ಮೂರು ಸಂಸ್ಥೆಗಳ ಸಹಯೋಗದಲ್ಲೇ ಮಕ್ಕಳ ಸಹಾಯವಾಣಿ ನಡೆದಿದೆ.

ಉಳಿದ 18 ಜಿಲ್ಲೆಗಳಲ್ಲಿ 2013ರಿಂದ ಸಂಯೋಜಿತ ಸಂಸ್ಥೆಯಷ್ಟೇ ಇದ್ದು, ಅಲ್ಲಿ ಒಬ್ಬ ತಂಡ ಸಂಯೋಜಕ, 6 ಮಂದಿ ಸದಸ್ಯರು, ಒಬ್ಬ ಆಪ್ತ ಸಮಾಲೋಚಕರು ಹಾಗೂ ಒಬ್ಬ ಸ್ವಯಂಸೇವಕರು ಸೇರಿ 9 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ.

ಸಿಬ್ಬಂದಿ ಸಾಲದು:‘ಬಳ್ಳಾರಿ ಜಿಲ್ಲೆಯಲ್ಲಿ ಮೂರೂ ಸಂಸ್ಥೆಗಳು ಸೇರಿ ಒಟ್ಟು 20 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹರಪನಹಳ್ಳಿ ಸೇರ್ಪಡೆ, ಮೂರು ಹೊಸ ತಾಲ್ಲೂಕು ರಚನೆಯಿಂದ ಸಹಾಯ ಕೋರುವ ಕರೆಗಳಿಗೆ ಸ್ಪಂದಿಸುವುದು ಕಷ್ಟವಾಗಿದೆ. ಇನ್ನು ಸಂಯೋಜಿತ ಸಂಸ್ಥೆಗಳಷ್ಟೇ ಇರುವ ಜಿಲ್ಲೆಗಳಲ್ಲಿ ಸಿಬ್ಬಂದಿಯ ಪರಿಸ್ಥಿತಿ ಹೇಳತೀರದಾಗಿದೆ’ ಎಂದು ಜಿಲ್ಲೆಯ ಮಕ್ಕಳ ಸಹಾಯವಾಣಿ ಸಂಯೋಜಿತ ಸಂಸ್ಥೆಯಾದ ಬಳ್ಳಾರಿ ಧರ್ಮಪ್ರಾಂತ ಅಭಿವೃದ್ಧಿ ಸಂಸ್ಥೆಯ ಜಿಲ್ಲಾ ಸಂಯೋಜಕ ಪುಷ್ಪರಾಜ್‌ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

ವೇತನ ಪರಿಷ್ಕರಣೆ ಇಲ್ಲ:‘2014ರಲ್ಲಿ ನಮ್ಮ ವೇತನವನ್ನು ಪರಿಷ್ಕರಿಸಲಾಗಿದೆ. ಸಹಾಯವಾಣಿ ಕರೆ ಆಧರಿಸಿ ಸ್ಥಳ ಭೇಟಿ, ಜಾಗೃತಿ ಕಾರ್ಯಕ್ರಮ, ಬಾಲಕಾರ್ಮಿಕ ರಕ್ಷಣೆಯಂಥ ಕಾರ್ಯಾಚರಣೆಗಳಿಗೂ ಅನುದಾನ ದೊರಕದಾಗಿದೆ. ಮಕ್ಕಳಿಗಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂಬ ತೃಪ್ತಿಯಿಂದ ಮುಂದುವರಿದಿದ್ದೇವೆ’ ಎಂದರು.

‘ಸಿಬ್ಬಂದಿ ಕೊರತೆ ಮತ್ತು ವೇತನ ಪರಿಷ್ಕರಣೆ ವಿಷಯದಲ್ಲಿ ಕೇಂದ್ರ ಸರ್ಕಾರವು ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಚೈಲ್ಡ್‌ ಇಂಡಿಯಾ ಫೌಂಡೇಶನ್ ಕೂಡಾ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT