ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಬಯಲೇ ಪಾಠಶಾಲೆ!

ಬೈಲುವದ್ದಿಗೇರಿಯಲ್ಲಿ 9, 10ನೇ ತರಗತಿ ಮಕ್ಕಳಿಗಿಲ್ಲ ಕಾಯಂ ಕೊಠಡಿ
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಈ ಶಾಲೆಯ ಮಕ್ಕಳಿಗೆ ಬಯಲೇ ಪಾಠಶಾಲೆ. ದೇವಸ್ಥಾನದ ಆವರಣದಲ್ಲೇ ಇವರಿಗೆ ನಿತ್ಯ ಪಾಠ, ಪ್ರವಚನ. ಮದುವೆ, ಸಭೆ ಸಮಾರಂಭಗಳು ನಡೆದರೆ ಆ ದಿನ ರಜೆ!

ತಾಲ್ಲೂಕಿನ ಬೈಲುವದ್ದಿಗೇರಿಯಲ್ಲಿ ಕಳೆದ ಎರಡು ವರ್ಷಗಳಿಂದ ಇಂತಹದ್ದೊಂದು ಪರಿಸ್ಥಿತಿ ಇದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಸಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಗ್ರಾಮದಲ್ಲಿ 1ರಿಂದ ಹತ್ತನೇ ತರಗತಿ ವರೆಗೆ ಸರ್ಕಾರಿ ಶಾಲೆ ಇದೆ. ಒಟ್ಟು 430 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೊಸಪೇಟೆ–ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಶಾಲೆಯ ಎರಡು ಕೊಠಡಿಗಳನ್ನು ಎರಡು ವರ್ಷಗಳ ಹಿಂದೆಯೇ ತೆರವುಗೊಳಿಸಲಾಗಿದೆ. ಅದಕ್ಕೆ ಶಾಲೆಗೆ ₹45 ಲಕ್ಷ ಪರಿಹಾರವೂ ನೀಡಲಾಗಿದೆ. ಆದರೆ, ಮಕ್ಕಳ ಪಾಠ, ಪ್ರವಚನಕ್ಕೆ ಇದುವರೆಗೆ ಪರ್ಯಾಯ ವ್ಯವಸ್ಥೆಯೇ ಮಾಡಿಲ್ಲ.

‘ಶಾಲೆಯವರ ಬಳಿ ₹45 ಲಕ್ಷ ಹಣವಿದೆ. ಆದರೆ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಆದೇಶದ ನಿರೀಕ್ಷೆಯಲ್ಲಿ ಕಾಲ ದೂಡುತ್ತಿದ್ದಾರೆ. ಶಾಲೆಯ ಸಮೀಪದಲ್ಲಿರುವ ಸುಡುಗಾಡೆಪ್ಪ ದೇವಸ್ಥಾನದ ಆವರಣದಲ್ಲಿ ನಿತ್ಯ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಮಕ್ಕಳಿಗೆ ಕೂರಲು ಡೆಸ್ಕ್‌ಗಳಿಲ್ಲ. ನೆಲದ ಮೇಲೆ ಕುಳಿತು ಪಾಠ ಕೇಳಬೇಕು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವುದರಿಂದ ವಾಹನಗಳ ವಿಪರೀತ ಸದ್ದು, ದೂಳಿರುತ್ತದೆ. ಇನ್ನು, ದೇವಸ್ಥಾನಕ್ಕೆ ಭಕ್ತರು ಬಂದು ಹೋಗುತ್ತಿರುತ್ತಾರೆ. ಧಾರ್ಮಿಕ ಸಭೆ, ಸಮಾರಂಭ, ಮದುವೆಗಳು ಇದ್ದರೆ ಆ ದಿನ ಮಕ್ಕಳಿಗೆ ರಜೆ ಕೊಟ್ಟು ಮನೆಗೆ ಕಳಿಸಲಾಗುತ್ತದೆ. ಇದರಿಂದ ಮಕ್ಕಳ ಕಲಿಕೆಗೆ ಬಹಳ ತೊಂದರೆ ಉಂಟಾಗುತ್ತಿದೆ’ ಎನ್ನುವುದು ಪೋಷಕರ ಅಳಲು.

ಮಕ್ಕಳು ಮರ, ಗಿಡಗಳ ನೆರಳಿನಲ್ಲಿ ಕುಳಿತುಕೊಂಡು ಪಾಠ ಕೇಳುತ್ತಾರೆ. ಸ್ವಲ್ಪ ಮಳೆ ಬಂದರೂ ದೇವಸ್ಥಾನದೊಳಗೆ ತೆರಳಿ ಆಸರೆ ಪಡೆದುಕೊಳ್ಳುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಹೀಗಿರುವಾಗ ಮಕ್ಕಳಿಗೆ ಪಾಠ ಹೇಳಿಕೊಡಲು ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

‘ಕಳೆದ ಎರಡು ವರ್ಷಗಳಿಂದ ಮಕ್ಕಳು ಬಿಸಿಲು, ಮಳೆ, ಚಳಿಯೆನ್ನದೇ ಬಯಲಲ್ಲೇ ಪಾಠ ಕೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾದರೆ ಮಕ್ಕಳ ಭವಿಷ್ಯ ರೂಪುಗೊಳ್ಳುವುದಾದರೂ ಹೇಗೆ? ಕಲಿಕೆಗೆ ಎಲ್ಲಕ್ಕಿಂತ ಮುಖ್ಯವಾಗಿ ಇರಬೇಕಾದದ್ದು ಉತ್ತಮ ಪರಿಸರ. ಆದರೆ, ಕನಿಷ್ಠ ಸೌಕರ್ಯವೂ ಇಲ್ಲ. ಬಯಲಲ್ಲಿ ಪಾಠ ಹೇಳಿಕೊಟ್ಟರೆ ಮಕ್ಕಳು ಏಕಾಗ್ರತೆಯಿಂದ ಕಲಿಯಲು ಆಗುವುದಿಲ್ಲ. ಗ್ರಾಮೀಣ ಬಡ ಮಕ್ಕಳ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ಧೋರಣೆ ಸರಿಯಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT