ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೈಕೆ ಕೇಂದ್ರಕ್ಕೆ ಕಳಿಸಲೊಪ್ಪದ ತಾಯಿಯಿಂದಲೇ ಬಾಲ ಚೈತನ್ಯ ಉದ್ಘಾಟನೆ

Last Updated 10 ಜೂನ್ 2021, 14:34 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ತನ್ನ ಮಗುವಿಗೆ ಮಕ್ಕಳ ಆರೈಕೆ ಕೇಂದ್ರಕ್ಕೆ ಕಳಿಸಲು ಒಪ್ಪದ ತಾಯಿಯೇ ಬಾಲ ಚೈತನ್ಯ ಕಾರ್ಯಕ್ರಮವನ್ನು ಗುರುವಾರ ನಗರದಲ್ಲಿ ಉದ್ಘಾಟಿಸಿದರು.

ಕೇಂದ್ರದಲ್ಲಿನ ವ್ಯವಸ್ಥೆ ಕಂಡು ಬೆರಗಾದ ಧನುಷ್‌ ಎಂಬ ಪೋರನ ತಾಯಿ ಲಕ್ಷ್ಮಿ ನಾಗರಾಜ, ಸ್ವಯಂ ಇಚ್ಛೆಯಿಂದ ಮಗುವನ್ನು ಕೇಂದ್ರಕ್ಕೆ ಕಳಿಸಿಕೊಡಲು ಮುಂದೆ ಬಂದಿದ್ದಾರೆ. ಹೀಗಾಗಿ ಅಪೌಷ್ಟಿಕ ಮಕ್ಕಳ ಆರೈಕೆಗೆ ನಗರದ ಸಂಡೂರು ರಸ್ತೆಯ ಬಾಲಕಿಯರ ವಸತಿ ನಿಲಯದಲ್ಲಿ ಆರಂಭಿಸಲಾಗಿರುವ ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರಕ್ಕೆ ಅವರಿಂದಲೇ ವಿಧ್ಯುಕ್ತ ಚಾಲನೆ ಕೊಡಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್‌. ನಂದಿನಿ ಮಾತನಾಡಿ, ‘ಕೋವಿಡ್–19 ಮೂರನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂದು ತಜ್ಞರು ತಿಳಿಸಿದ್ದಾರೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಭಾರತೀಯ ಮಕ್ಕಳ ತಜ್ಞರ ಸಮಿತಿಯ ಸಲಹೆ ಮೇರೆಗೆ ಆರೈಕೆ ಕೇಂದ್ರಗಳನ್ನು ತೆರೆದು, ವಿಶೇಷ ಆರೈಕೆ ಮಾಡಲಾಗುವುದು’ ಎಂದು ತಿಳಿಸಿದರು.

‘ಜಿಲ್ಲಾಡಳಿತದ ಈ ಮಹತ್ವಕಾಂಕ್ಷಿ ಯೋಜನೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಅನುಷ್ಠಾನಗೊಳಿಸುವರು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಪೌಷ್ಟಿಕ ಆಹಾರ ಪೂರೈಸಲಾಗುವುದು. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 827 ಮಕ್ಕಳು ಅಪೌಷ್ಟಿಕತೆ ಬಳಲುತ್ತಿದ್ದಾರೆ. 147 ಮಕ್ಕಳು ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದಾರೆ. ಹೊಸಪೇಟೆಯಲ್ಲಿ ಮೊದಲ ದಿನ 52 ಮಕ್ಕಳು ದಾಖಲಾಗಿರುವುದು ವಿಶೇಷ. ತಾಯಂದಿರು ಹಿಂಜರಿಕೆಯಿಲ್ಲದೇ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಿ, ಆರೋಗ್ಯವಾಗಿರಿಸಲು ಬಾಲ ಚೈತನ್ಯ ಕೇಂದ್ರಕ್ಕೆ ಕರೆ ತರಬೇಕು’ ಎಂದು ತಿಳಿಸಿದರು.

ಮಕ್ಕಳ ತಜ್ಞರ ಸಮಿತಿ ಅಧ್ಯಕ್ಷ ಡಾ.ಅಶೋಕ್ ದಾತಾರ ಮಾತನಾಡಿ, ‘ಇದು ಜಿಲ್ಲಾಡಳಿತದ ಉತ್ತಮ ಯೋಜನೆಯಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಅಗತ್ಯವಾಗಿತ್ತು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪೋಷಕರೇ ಆರೈಕೆ ಕೇಂದ್ರಕ್ಕೆ ಕಳುಹಿಸಿಕೊಡಬೇಕು’ ಎಂದು ಸಲಹೆ ಮಾಡಿದರು.

ಉಪವಿಭಾಗಧಿಕಾರಿ ಸಿದ್ದರಾಮೇಶ್ವರ, ಮಕ್ಕಳ ತಜ್ಞರಾದ ಡಾ.ರಾಜೀವ್, ಡಾ.ದೀಪಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್, ಮಕ್ಕಳ ರಕ್ಷಣಾಧಿಕಾರಿ ಚಾಂದ್ ಬಾಷಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ತಾಲ್ಲೂಕು ಸಂಯೋಜಕ ನೀಲಕಂಠ, ರಾಘವೇಂದ್ರ, ಯೋಜನೆಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT