ಚಿಣ್ಣರಿಂದ ಶಾಲೆಗೆ ಬಂತು ಕಳೆ

ಹೊಸಪೇಟೆ(ವಿಜಯನಗರ): ಕೋವಿಡ್ ಲಾಕ್‍ಡೌನ್‍ನಿಂದ ಒಂದುವರೆ ವರ್ಷದಿಂದ ಸ್ಥಗಿತಗೊಂಡಿದ್ದ ಶಾಲೆಯ ಬಾಗಿಲುಗಳು ಸೋಮವಾರ ಪುನಃ ತೆರೆದಿದ್ದು, ಚಿಣ್ಣರ ಬರುವಿಕೆಯೊಂದಿಗೆ ವಿದ್ಯಾ ಕೇಂದ್ರಗಳಿಗೆ ವಿಶೇಷ ಕಳೆ ಬಂದಿದೆ.
ಒಂಬತ್ತರಿಂದ ಹತ್ತನೇ ತರಗತಿಗಳು ಆರಂಭಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರವು ಆರರಿಂದ ಎಂಟನೇ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿತ್ತು. ಇದಕ್ಕಾಗಿ ಶನಿವಾರದಿಂದಲೇ ಶಾಲೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದವು. ತರಗತಿ ಕೊಠಡಿಗಳಿಂದ ದೂಳು ಹೊಡೆದು, ಸ್ಯಾನಿಟೈಸ್ ಮಾಡಲಾಗಿತ್ತು.
ಬಹುತೇಕ ಎಲ್ಲಾ ಶಾಲೆಗಳ ಮುಖ್ಯ ಪ್ರವೇಶ ದ್ವಾರಗಳನ್ನು ಬಾಳೆ ದಿಂಡು, ತಳಿರು ತೋರಣ, ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಚಿಣ್ಣರಿಗೆ ಸ್ಯಾನಿಟೈಸ್ ಹಾಕಿ, ಗುಲಾಬಿ ಹೂ, ಬಿಸ್ಕತ್ ಕೊಟ್ಟು ಚಪಾಳೆ ಹೊಡೆದು ಸ್ವಾಗತಿಸಿದರು. ನಗರದ ಬಿಆರ್‌ಸಿಎಸ್ ಶಾಲೆಗೆ ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಭೇಟಿ ನೀಡಿ, ಮಕ್ಕಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಬಳಿಕ ಮಕ್ಕಳಿಗೆ ಅವರು ಪಠ್ಯ ಪುಸ್ತಕಗಳನ್ನು ವಿತರಿಸಿದರು.
ತಾಲ್ಲೂಕಿನ ಹೊಸಮಲಪನಗುಡಿಯಲ್ಲಿ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ, ಶಾಲೆಗೆ ಬರಮಾಡಿಕೊಳ್ಳಲಾಯಿತು. ಹಳೆ ಮಲಪನಗುಡಿಯಲ್ಲಿ ಡ್ರಮ್, ಲೇಜಿಮ್ ಪರಿಕರ ಬಾರಿಸಿ ಸ್ವಾಗತಿಸಿದರು. ತಾಲ್ಲೂಕಿನ ಕಮಲಾಪುರ, ನಗರದ ಅನಂತಶಯನಗುಡಿ, ಕಬ್ಬೇರಪೇಟೆ ಸೇರಿದಂತೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ವಿದ್ಯಾರ್ಥಿಗಳನ್ನು ತರಗತಿಗಳಲ್ಲಿ ಅಂತರದಿಂದ ಕೂರಿಸಿ, ಮೊದಲ ದಿನವೇ ಪಾಠ ಮಾಡಲಾಯಿತು.
ಮಕ್ಕಳ ಸದ್ದು ಗದ್ದಲ, ಕಲರವ, ಗಂಟೆ ಸದ್ದಿನಿಂದ ಶಾಲೆಗಳಿಗೆ ಈ ಹಿಂದಿನ ಕಳೆ ಬಂದಿದೆ. ಮನೆಯಲ್ಲಿ ಕುಳಿತು ಬೇಸತ್ತಿದ್ದ ಮಕ್ಕಳು ಪುನಃ ಶಾಲೆಗೆ ಬಂದು ಖುಷಿಪಟ್ಟರು.
‘ಮೊದಲ ದಿನವೇ ತರಗತಿಗಳು ಆರಂಭವಾಗಿವೆ. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದ್ದೇವೆ. ಮಕ್ಕಳೆಲ್ಲರೂ ಪುನಃ ಶಾಲೆಗೆ ಬಂದ ಸಂಭ್ರಮದಲ್ಲಿದ್ದಾರೆ’ ಎಂದು ಕಬ್ಬೇರಪೇಟೆಯ ಬಿಆರ್‌ಸಿಎಸ್ ಪ್ರಾಥಮಿಕ ಶಾಲೆಯ ಶಿಕ್ಷಕ ಕಡ್ಲಿ ವೀರಭದ್ರೇಶ ತಿಳಿಸಿದರು.
‘ಎಸ್‍ಒಪಿ ನಿಯಮಗಳ ಪ್ರಕಾರ ಶಾಲೆ ಆರಂಭಿಸಲಾಗಿದೆ. ಹೊಸಪೇಟೆ, ಕಂಪ್ಲಿ ಮತ್ತು ಮರಿಯಮ್ಮನಹಳ್ಳಿಗೆ ಸಂಬಂಧಪಟ್ಟ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಉತ್ತಮವಾಗಿತ್ತು. ಕೋವಿಡ್ ನಿಯಮಗಳ ನಡುವೆ ಅದ್ದೂರಿ ಮತ್ತು ವಿಜೃಂಭಣೆಯಿಂದ ಶಾಲೆ ಆರಂಭಗೊಂಡಿವೆ. ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.