ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸಕ್ತಿಯೇ ಇಲ್ಲದ ಹುಡುಗ ವಿಮರ್ಶಕನಾದಾಗ...’

ಡಾ.ಗಿರಡ್ಡಿಯವರಿಗೆ ನುಡಿ ನಮನ
Last Updated 14 ಮೇ 2018, 6:59 IST
ಅಕ್ಷರ ಗಾತ್ರ

ಧಾರವಾಡ: ‘ಓದಿನ ಕಡೆ ಆಸಕ್ತಿಯೇ ಇಲ್ಲದ ಹುಡಗನೊಬ್ಬ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ, ಪಿ.ಎಚ್‌ಡಿ ಪಡೆದು ನಂತರ ಇಂಗ್ಲೆಂಡ್‌ನಲ್ಲಿ ಕಲಿತು, ಕನ್ನಡ ಸಾರಸ್ವತ ಲೋಕದ ವಿಮರ್ಶಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅಗ್ರಗಣ್ಯ ಲೇಖಕ, ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ' ಎಂದು ಹಿರಿಯ ಲೇಖಕ ಡಾ.ಶ್ಯಾಮಸುಂದರ ಬಿದರಕುಂದಿ ಬಣ್ಣಿಸಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೂಲತಃ ಕವಿಯಾಗಿದ್ದ ಡಾ.ಗಿರಡ್ಡಿ ನಂತರ ಕಥೆ, ಅನುವಾದ, ಲಲಿತ ಪ್ರಬಂಧ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿದವರು. ಅವರೊಬ್ಬ ಸರ್ವಗ್ರಾಹಿ ಲೇಖಕರು. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡ ಅವರು, ನವೋದಯ ಮತ್ತು ನವ್ಯ ಸಾಹಿತ್ಯ ಪ್ರಕಾರದಲ್ಲಿ ಸಾಧನೆ ಮಾಡಿದವರು' ಎಂದರು.

‘ಇಂದು ಭೌತಿಕವಾಗಿ ಅವರು ನಮ್ಮೊಂದಿಗಿಲ್ಲದಿದ್ದರೂ ಅವರು ಕೃಷಿ ಮಾಡಿದ ಅನೇಕ ಮಾರ್ಗದರ್ಶಿ ಕೃತಿಗಳು ನಮ್ಮೊಂದಿಗಿವೆ. ಅವುಗಳನ್ನು ಮನನ ಮಾಡಿಕೊಂಡು ಕನ್ನಡ ಕಟ್ಟುವ ಕೆಲಸಕ್ಕೆ ಆಸಕ್ತರು, ಅಧ್ಯಾಪಕರು, ಸಾಹಿತಿಗಳು, ಲೇಖಕರು ಸಿದ್ಧರಾಗಬೇಕಿದೆ. ಅದುವೇ ನಾವು ಅವರಿಗೆ ಸಲ್ಲಿಸುವ ಅರ್ಥಪೂರ್ಣ ಶ್ರದ್ಧಾಂಜಲಿ’ ಎಂದರು.

ಡಾ.ಜಿ.ಎಂ.ಹೆಗಡೆ ಮಾತನಾಡಿ, ‘ಕನ್ನಡದ ನವ್ಯ ವಿಮರ್ಶೆಗೆ ಹೊಸ ಆಯಾಮ ಒದಗಿಸಿದವರು ಡಾ.ಗಿರಡ್ಡಿ ಅವರು. ತಮ್ಮ ಜೀವಿತಾವಧಿಯಲ್ಲಿ ಯುವ ಲೇಖಕರನ್ನು ನಿರಂತರವಾಗಿ ಪ್ರೋತ್ಸಾಹಿಸಿದರು. ಆ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಪರಂಪರೆ ಹುಟ್ಟು ಹಾಕಿದರು. ಅವರಲ್ಲಿದ್ದ ವಿಶೇಷ ಗುಣವೆಂದರೆ ಅದು ನಾಯಕತ್ವ. ಅದಕ್ಕೆ ಉದಾಹರಣೆ ಎಂದರೆ ಅವರು ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ಆರಂಭಿಸಿದ್ದು, ಅದನ್ನು ಅತ್ಯಂತ ಯಶಸ್ವಿ ಸಾಹಿತ್ಯ ಕಾರ್ಯಕ್ರಮವಾಗಿ ರೂಪಿಸಿದ್ದು. ಡಾ.ಗಿರಡ್ಡಿ ಅವರು ಕನ್ನಡ ವಚನ ವಿಮರ್ಶೆಗೆ ನೀಡಿದ ಕೊಡುಗೆ ಅತ್ಯಂತ ಮಹತ್ವದ್ದು’ ಎಂದು ಹೇಳಿದರು.

ಡಾ.ಪಾಟೀಲ ಪುಟ್ಟಪ್ಪ, ಸಿ.ಯು ಬೆಳ್ಳಕ್ಕಿ, ಶ್ರೀನಿವಾಸ ವಾಡಪ್ಪಿ, ಎಸ್‌.ಬಿ.ಗುತ್ತಲ, ಡಾ.ಲಿಂಗರಾಜ ಅಂಗಡಿ, ಶಿವಣ್ಣ ಬೆಲ್ಲದ, ಪ್ರಕಾಶ ಉಡಿಕೇರಿ, ಕೃಷ್ಣ ಜೋಶಿ ಮಾತನಾಡಿ ಡಾ.ಗಿರಡ್ಡಿ ಅವರೊಂದಿಗಿನ ಒಡನಾಟ, ನೆನಪು, ಸಾಹಿತ್ಯಿಕ ಶ್ರೇಷ್ಠತೆ ಕೊಂಡಾಡಿ ನುಡಿ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT