ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ರೈಲು ನಿಲ್ದಾಣ; ಹೊಸಪೇಟೆ ಸ್ಥಾನಪಲ್ಲಟ

Last Updated 4 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಕೇಂದ್ರ ಸರ್ಕಾರವು ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ನಗರ ರೈಲು ನಿಲ್ದಾಣದ ಸ್ಥಾನ ಪಲ್ಲಟವಾಗಿದೆ.

2018ರಲ್ಲಿ ದೇಶದ 400 ರೈಲು ನಿಲ್ದಾಣಗಳನ್ನು ಗಣನೆಗೆ ತೆಗೆದುಕೊಂಡು ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಸಲ ಅದನ್ನು ವಿಸ್ತರಿಸಿದ್ದು, 720ಕ್ಕೆ ಹೆಚ್ಚಿಸಿದೆ.

ಪ್ರಸಕ್ತ ಸಾಲಿನಲ್ಲಿ ನಗರ ರೈಲು ನಿಲ್ದಾಣಕ್ಕೆ ಸ್ವಚ್ಛತೆಯಲ್ಲಿ 123 ಸ್ಥಾನ ಲಭಿಸಿದೆ. ಹಿಂದಿನ ವರ್ಷ 68ನೇ ಸ್ಥಾನದಲ್ಲಿತ್ತು. ಅದಕ್ಕೂ ಹಿಂದಿನ ವರ್ಷ, ಅಂದರೆ 2017ರಲ್ಲಿ 80 ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.

ಹೋದ ವರ್ಷ ಉತ್ತಮ ಸಾಧನೆ ತೋರಿದ್ದ ನಗರದ ರೈಲು ನಿಲ್ದಾಣದ ಸ್ಥಾನ ಈ ಸಲ ಸಾಕಷ್ಟು ಕೆಳಕ್ಕೆ ಇಳಿದಿದೆ. ಆದರೆ, ಇಡೀ ದೇಶದಲ್ಲಿ ರೈಲು ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸಿರುವುದರಿಂದ ಸಹಜವಾಗಿಯೇ ಅದು ಬದಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

‘ಎರಡು ವರ್ಷಗಳಿಂದ ಸ್ವಚ್ಛತೆಗೆ ಯಾವ ರೀತಿ ಆದ್ಯತೆ ನೀಡಲಾಗುತ್ತಿತ್ತೋ ಈಗ ಅದಕ್ಕಿಂತಲೂ ಹೆಚ್ಚಿನ ಸುಧಾರಣೆಯಾಗಿದೆ. ಒಂದು ಚೂರು ಕಸ ಬೀಳದಂತೆ ಎಚ್ಚರ ವಹಿಸಲಾಗಿದೆ. ಆದರೆ, ರೈಲು ನಿಲ್ದಾಣಗಳ ಸಂಖ್ಯೆ 400ರಿಂದ 720ಕ್ಕೆ ಹೆಚ್ಚಿಸಿದ್ದರಿಂದ ಪಟ್ಟಿಯಲ್ಲಿ ನಮ್ಮ ನಿಲ್ದಾಣದ ಸ್ಥಾನ ಬದಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಯಥಾರೀತಿಯಲ್ಲಿ ಇದೆ’ ಎನ್ನುತ್ತಾರೆ ನಗರ ರೈಲು ನಿಲ್ದಾಣದ ಆರೋಗ್ಯ ಅಧಿಕಾರಿ ಮಧು.

‘ನಮ್ಮ ನಿಲ್ದಾಣದಂತೆ ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇತರೆ ನಿಲ್ದಾಣಗಳು ಸಹ ಪಟ್ಟಿಯಲ್ಲಿ ಕೆಳಗಿನ ಸ್ಥಾನ ಪಡೆದಿವೆ. ಹಾಗಂತ ಅಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದರ್ಥವಲ್ಲ. ನಿಲ್ದಾಣಗಳ ಸಂಖ್ಯೆ ಏರಿರುವುದರಿಂದ ಹೀಗಾಗಿದೆ. ಮುಂದಿನ ವರ್ಷ ಇಷ್ಟೇ ಸಂಖ್ಯೆಯಿದ್ದರೆ ಆಗ ವಾಸ್ತವ ಗೊತ್ತಾಗುತ್ತದೆ’ ಎಂದು ಹೇಳಿದರು.

‘ಸ್ವಚ್ಛತೆಯ ಜತೆಗೆ ಕುಡಿಯುವ ನೀರು, ಎಂಜಿನಿಯರಿಂಗ್‌ ಕೆಲಸ, ನಿಲ್ದಾಣಗಳ ನಿರ್ವಹಣೆ, ಅಪಘಾತ ತಪ್ಪಿಸಲು ಕೈಗೊಂಡ ಕ್ರಮಗಳು, ಆರೋಗ್ಯ ಸೇವೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೆಲ ಹೊಸ ವಿಷಯಗಳನ್ನು ಈ ಸಲ ಸೇರಿಸಲಾಗಿದೆ’ ಎಂದರು.

‘ನಗರ ರೈಲು ನಿಲ್ದಾಣದಲ್ಲಿ ಸ್ವಚ್ಛತೆಗೆ ಏನೇನು ಬೇಕೋ ಅದೆಲ್ಲ ಕ್ರಮ ಕೈಗೊಳ್ಳಲಾಗಿದೆ. ನಿಲ್ದಾಣದ ಪರಿಸರ, ಪ್ಲಾಟ್‌ಫಾರಂಗಳನ್ನು ಸ್ವಚ್ಛ ಇಡಲಾಗುತ್ತಿದೆ. ಸುರಕ್ಷತೆಗೂ ಒತ್ತು ಕೊಡಲಾಗಿದೆ. ನಿಲ್ದಾಣಗಳ ಸಂಖ್ಯೆ ಹೆಚ್ಚಿಗೆ ಮಾಡಿ ಪಟ್ಟಿ ಸಿದ್ಧಪಡಿಸಿರುವ ಕಾರಣ ನಗರ ನಿಲ್ದಾಣದ ಸ್ಥಾನ ಕೆಳಗೆ ಇಳಿದಂತೆ ಭಾಸವಾಗುತ್ತಿದೆ’ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಸದಸ್ಯ ಮಹೇಶ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT