ಮಂಗಳವಾರ, ಏಪ್ರಿಲ್ 20, 2021
29 °C
ಸ್ವಚ್ಛತಾ ಜಾಗೃತಿ, ಶ್ರಮದಾನಕ್ಕೆ ಚಾಲನೆ

‘ಸ್ವಚ್ಛ ಬಳ್ಳಾರಿ- ಸ್ವಸ್ಥ ಬಳ್ಳಾರಿ’ ಅಭಿಯಾನ ಮತ್ತೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಸ್ವಚ್ಛ ಬಳ್ಳಾರಿ- ಸ್ವಸ್ಥ ಬಳ್ಳಾರಿ ಕಾರ್ಯಕ್ರಮವು ರಾಷ್ಟ್ರೀಯ ಸ್ವಚ್ಛತಾ ದಿನವಾದ ಶನಿವಾರ ನಗರದಲ್ಲಿ ಮತ್ತೆ ಆರಂಭವಾಯಿತು.

ಆರು ತಿಂಗಳ ಕಾಲ ನಿರಂತರವಾಗಿ ನಡೆಯಲಿರುವ ಅಭಿಯಾನದ ವಿವಿಧ ಕಾರ್ಯಕ್ರಮಗಳ ಪಟ್ಟಿ ಹಾಗೂ ಜಾಗೃತಿ ಅಭಿಯಾನಕ್ಕೆ ನಗರದ ಕನಕ ದುರ್ಗಮ್ಮ ಗುಡಿ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಶಾಸಕ ಜಿ.ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.

ಅದಕ್ಕೂ ಮುನ್ನ ಮಾತನಾಡಿದ‌ ಅವರು, ‘ಸ್ವಚ್ಛತೆಯೇ ಆರೋಗ್ಯದ ಮೂಲಮಂತ್ರ.‌ ಹೀಗಾಗಿ  ನಗರದಲ್ಲಿ ಸ್ವಚ್ಛತೆ ನಿರ್ವಹಣೆ ಬಹಳ‌ ಮುಖ್ಯ. ಸ್ವಚ್ಛ ಮತ್ತು ಸ್ವಸ್ಥ ಬಳ್ಳಾರಿ ಕಾರ್ಯಕ್ರಮಕ್ಕೆ ನಗರದ ಎಲ್ಲ‌ರೂ ಸಹಕರಿಸಬೇಕು’ ಎಂದರು.

‘ಸ್ವಚ್ಚ ನಗರ ಮತ್ತು ಹಸಿರು ನಗರದ‌ ಪರಿಕಲ್ಪನೆಯನ್ನು ಜಾರಿಗೆ ತರಲು ಸಾರ್ವಜನಿಕರು ಕಸದ ವೈಜ್ಞಾನಿಕ ಬಳಕೆಯನ್ನು ಆರಂಭಿಸಬೇಕು. ಅದರೊಂದಿಗೆ,  ಮನೆ ಬಳಕೆ ನೀರು, ಶೌಚಾಲಯದ ನೀರನ್ನು ನೇರವಾಗಿ ತೆರೆದ ಚರಂಡಿಗೆ ಹರಿಸುವ ಬದಲು,  ಒಳಚರಂಡಿಗೆ ಸಂಪರ್ಕ‌ ಕಲ್ಪಿಸಬೇಕು’ ಎಂದರು.

‘ಕೆಲವು ವರ್ಷಗಳ ಹಿಂದೆ ಆಂಧ್ರದ ಜನ್ಮಭೂಮಿ ಕಾರ್ಯಕ್ರಮದ ರೀತಿಯಲ್ಲೇ ಕಸವನ್ನು ನಗರದ ಹೊರಕ್ಕೆ ಸಾಗಿಸುವ ಕೆಲಸವನ್ನು ಮಾಡಲಾಗಿತ್ತು. ಅಂಥ ದೊಡ್ಡಮಟ್ಟದ ಕಾರ್ಯಕ್ರಮಗಳು ನಡೆಯಬೇಕು’ ಎಂದರು.

‘ಸ್ವಚ್ಛತಾ ಕಾರ್ಯ ಮಾಡುವವರಿಗೆ ಸುರಕ್ಷತಾ ಪರಿಕರಗಳನ್ನು ತಪ್ಪದೇ ನಿರಂತರವಾಗಿ ನೀಡಬೇಕು.ಏಕೆಂದರೆ ತ್ಯಾಜ್ಯದೊಂದಿಗೆ ಒಡನಾಡುವವರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚಿರುತ್ತವೆ’ ಎಂದರು.

ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಡಳಿತಾಧಿಕಾರಿ ಪವನಕುಮಾರ ಮಲಪಾಟಿ‌ ಮಾತನಾಡಿ, ಸ್ವಚ್ಚತಾ ರ್ಯಾಂಕ್ ನಲ್ಲಿ‌ ಬಳ್ಳಾರಿ ನಗರವು ಮೈಸೂರಿನಂತೆ ಉತ್ತಮ ಸ್ಥಾನವನ್ನು ಪಡೆಯಬೇಕಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಸೈದುಲು ಅಡಾವತ್, ‘ಸ್ವಚ್ಛತೆ ನಿರ್ವಹಣೆಯ ಕುರಿತ ಸಾಮಾಜಿಕ ಜವಾಬ್ದಾರಿಯ ಅರಿವು ನಗರದ ಜನರಲ್ಲಿ ಕಡಿಮೆ ಇದೆ. ಈ ಮನಸ್ಥಿತಿ ಬದಲಾಗಬೇಕಾಗಿದೆ. ವಾಣಿಜ್ಯ ಮಳಿಗೆಗಳ ಕಸವನ್ನು ರಸ್ತೆಗೆ ಸುರಿಯುವ ಪರಿಪಾಠ ಬದಲಾಗಬೇಕು’ ಎಂದು ಹೇಳಿದರು.

‘ಸಾರ್ವಜನಿಕ ಆರೋಗ್ಯಕ್ಕೆ ಕುಂದು ತರುವ ಇಂಥ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೂ ಅವಕಾಶವಿದೆ. ಅದಕ್ಕೆ ನಾಗರಿಕರು, ವ್ಯಾಪಾರಸ್ಥರು ಅವಕಾಶ ಕೊಡಬಾರದು’ ಎಂದರು.

ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೊಟ್, ‘ನಗರದ ನಾಲ್ಕು ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ ಶೇ 100 ರಷ್ಟು ಕಸ ಸಂಗ್ರಹ ಮತ್ತು ವಿಲೇವಾರಿ ಮಾಡಲಾಗುವುದು. ಅಲ್ಲಿನ ಎಲ್ಲರಿಂದಲೂ ಕಸ ನಿರ್ವಹಣೆ ಬಳಕೆದಾರರ ಶುಲ್ಕವನ್ನು ವಸೂಲು ಮಾಡಲಾಗುವುದು. ಅಕ್ಟೋಬರ್ 2 ರ ಗಾಂಧಿ ಜಯಂತಿಯ ಹೊತ್ತಿಗೆ ಇಡೀ ನಗರವನ್ನು ಸ್ವಚ್ಛವಾಗಿಡುವ. 2021ರ ಜನವರಿ ಹೊತ್ತಿಗೆ ಬಳ್ಳಾರಿಯನ್ನು ಮಾದರಿ ಸ್ವಚ್ಛ ನಗರವನ್ನಾಗಿಸುವ ಗುರಿಯೂ ಇದೆ’ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎಸ್. ರಮೇಶ್ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಕಸ‌ ವಿಂಗಡಣೆ, ನಿರ್ವಹಣೆ ಕುರಿತ ಕಿರು ನಾಟಕಗಳನ್ನು ಪಾಲಿಕೆ ನೌಕರರು ಅಭಿನಯಿಸಿ ಗಮನ ಸೆಳೆದರು.

ಜಾಥಾ: ಗುಡಿಯ ಆವರಣದಿಂದ ಶುರುವಾದ ಜಾಥಾ ಎಸ್ಪಿ ವೃತ್ತ, ಪೊಲಿಸ್ ಜಿಮ್ ಖಾನ,ತಾಳೂರು ರಸ್ತೆ, ಶಕ್ತಿ ನರ್ಸಿಂಗ್ ಹೋಂ ಬಳಿ ಮುಕ್ತಾಯವಾಯಿತು. ನಂತರ ಅಲ್ಲಿಯೇ ಸ್ವಚ್ಛತಾ ಶ್ರಮದಾನ ನಡೆಯಿತು. ಪಾಲಿಕೆಯ ಪೌರ ಕಾರ್ಮಿಕರು, ಗೃಹರಕ್ಷಕರು, ಸಾರ್ವಜನಿಕರು ಶ್ರಮ ದಾನದಲ್ಲಿ ಪಾಲ್ಗೊಂಡಿದ್ದರು.

ಅಭಿಯಾನದಲ್ಲಿ: ಫೆ.7 ಹಾಗೂ 28, ಮಾರ್ಚ್ 7  ಹಾಗೂ 28,  ಏಪ್ರಿಲ್ 11 ಹಾಗೂ 24, ಮೇ 2 ಹಾಗೂ 30 ಹಾಗೂ ಜೂನ್ 27 ರಂದು ಶ್ರಮದಾನ ನಡೆಯಲಿದೆ.

ಫೆ 12, ಮಾರ್ಚ್ 12, ಏಪ್ರಿಲ್ 2,  ಮೇ 14 ರಂದು ಕ್ಯಾಂಡಲ್ ಜಾಥಾ ನಡೆಯಲಿದೆ. ಫೆ 19 ಹಾಗೂ ಮೇ 22 ರಂದು  ಸೈಕಲ್ ರ್ಯಾಲಿ ನಡೆಯಲಿದೆ.

ಪೌರಕಾರ್ಮಿಕರಿಗೆ ತರಬೇತಿ, ಚಿತ್ರಕಲೆ, ರಸ್ತೆ ಚಿತ್ರಕಲೆ‌, ಕಿರುಚಿತ್ರ ತಯಾರಿಕೆ ಸ್ಪರ್ಧೆಯೂ ನಡೆಯಲಿದೆ. ಜೂನ್ 27 ರಂದು ಅಭಿಯಾನ ಶ್ರಮದಾನದ ಮೂಲಕ ಮುಕ್ತಾಯವಾಗಲಿದೆ.


ಸ್ವಚ್ಛತಾ ಶ್ರಮದಾನ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು