ಉದ್ಯಾನ ಅಧೀನಕ್ಕೆ ಪಡೆಯಲು ಹಿಂದೇಟು

ಬುಧವಾರ, ಜೂನ್ 19, 2019
27 °C
ನಗರಸಭೆಯ ನಿರಾಸಕ್ತಿಯಿಂದ ಅಭಿವೃದ್ಧಿಗೊಳ್ಳದ ಉದ್ಯಾನಗಳು

ಉದ್ಯಾನ ಅಧೀನಕ್ಕೆ ಪಡೆಯಲು ಹಿಂದೇಟು

Published:
Updated:

ಹೊಸಪೇಟೆ: ನಗರಾಭಿವೃದ್ಧಿ ಪ್ರಾಧಿಕಾರವು ನಗರದ ವಿವಿಧ ಕಡೆ ಅಭಿವೃದ್ಧಿಗೊಳಿಸಿರುವ ವಸತಿ ಪ್ರದೇಶದಲ್ಲಿನ 50 ಉದ್ಯಾನಗಳಿಗೆ ಮೀಸಲಾದ ಜಾಗವನ್ನು ತನ್ನ ಅಧೀನಕ್ಕೆ ಪಡೆಯಲು ನಗರಸಭೆ ಹಿಂದೇಟು ಹಾಕುತ್ತಿದೆ.

2015ರ ಜುಲೈ 16ರಂದು ಪ್ರಾಧಿಕಾರವು ನಗರಸಭೆಗೆ ಪತ್ರ ಬರೆದು, ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ವಶಕ್ಕೆ ಪಡೆಯುವಂತೆ ಕೋರಿದೆ. ಆದರೆ, ಇದುವರೆಗೆ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಒಟ್ಟು 50 ಉದ್ಯಾನಗಳ ಪೈಕಿ ಒಂದೇ ಒಂದು ಉದ್ಯಾನವನ್ನು ಸುಪರ್ದಿಗೆ ಪಡೆದುಕೊಂಡಿಲ್ಲ.

ಪ್ರಾಧಿಕಾರವು ನಗರಸಭೆಗೆ ಪತ್ರ ಬರೆದು ಸುಮಾರು ಮೂರು ವರ್ಷಗಳಾಗುತ್ತ ಬಂದಿದೆ. ಆದರೆ, ಈ ಕುರಿತು ನಗರಸಭೆ ಇಲ್ಲಿಯವರೆಗೆ ಸ್ಪಂದಿಸಿಲ್ಲ. ಹೀಗಾಗಿ ಎಂದೋ ಅಭಿವೃದ್ಧಿಗೊಂಡು ಉದ್ಯಾನಗಳಾಗಿ ಬದಲಾಗಬೇಕಿದ್ದ ಜಾಗಗಳು ಈಗಲೂ ಬಯಲಿನ ಸ್ವರೂಪದಲ್ಲಿವೆ.

ಈ ಕುರಿತು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌ ಅವರನ್ನು ಸಂಪರ್ಕಿಸಿದಾಗ, ‘ಈ ವಿಷಯದ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಅದು ಮುಗಿದ ಬಳಿಕ ಸಭೆಯಲ್ಲಿ ಅನುಮೋದನೆ ಪಡೆದು ಮುಂದುವರೆಯಲಾಗುವುದು’ ಎಂದು ಹೇಳಿದರು.

ವರ್ಷದಿಂದ ವರ್ಷಕ್ಕೆ ನಗರದ ಜನಸಂಖ್ಯೆ ಬೆಳೆಯುತ್ತಿದೆ. ಹಾಲಿ ಇರುವ ಉದ್ಯಾನಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ವಾರಾಂತ್ಯದಲ್ಲಿ ಅಲ್ಲಿ ಹೆಚ್ಚಿನ ಜನಸಂದಣಿ ಇರುತ್ತಿದೆ. ನಿರ್ವಹಣೆಗೆ ಕಷ್ಟವಾಗುತ್ತಿದೆ. ಶ್ರೀರಾಮುಲು, ಟಿ.ಬಿ. ಡ್ಯಾಂ, ನೆಹರೂ ಪಾರ್ಕ್‌ಗಳು ಬಿಟ್ಟರೆ ಬೇರೆ ಉದ್ಯಾನಗಳಿಲ್ಲ. ಅದರಲ್ಲೂ ಶ್ರೀರಾಮುಲು, ನೆಹರೂ ಪಾರ್ಕ್‌ ಉದ್ಯಾನಗಳು ಕಿರಿದಾಗಿವೆ. ಟಿ.ಬಿ. ಡ್ಯಾಂ ಉದ್ಯಾನ ವಿಶಾಲವಾಗಿದ್ದರೂ ನಗರದಿಂದ ಸ್ವಲ್ಪ ದೂರದಲ್ಲಿರುವ ಕಾರಣ ಜನ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಆಯಾ ಬಡಾವಣೆಗಳಿಗೆ ಒಂದರಂತೆ ಉದ್ಯಾನಗಳು ನಿರ್ಮಾಣಗೊಂಡರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

‘ನಗರಸಭೆಗೆ ಸರ್ಕಾರದಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ಅನುದಾನ ಬರುತ್ತದೆ. ಮೇಲಿಂದ ಕೋಟಿಗಟ್ಟಲೆ ತೆರಿಗೆ ಸಂಗ್ರಹವಾಗುತ್ತದೆ. ಪ್ರಾಧಿಕಾರ ಮೀಸಲಿಟ್ಟ ಉದ್ಯಾನದ ಜಾಗಗಳನ್ನು ತನ್ನ ಅಧೀನಕ್ಕೆ ಪಡೆದು, ಆ ಹಣದಿಂದ ಅಭಿವೃದ್ಧಿ ಪಡಿಸಿದರೆ ಸ್ಥಳೀಯರಿಗೆ ಬಹಳ ಅನುಕೂಲವಾಗುತ್ತದೆ’ ಎನ್ನುತ್ತಾರೆ ನಗರದ ನಿವಾಸಿ ರಾಜು.

‘ಪ್ರತಿಯೊಂದು ಬಡಾವಣೆಗಳಲ್ಲಿ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಿದರೆ ಅಲ್ಲಿ ಗಿಡ, ಮರಗಳನ್ನು ನೆಟ್ಟು ಪರಿಸರವನ್ನು ಹಸಿರಾಗಿಸಬಹುದು. ಸುತ್ತಮುತ್ತಲಿನ ಪರಿಸರದಲ್ಲಿ ಉತ್ತಮ ಗಾಳಿ, ವಾತಾವರಣ ಇರುತ್ತದೆ. ಹೀಗಾಗಿ ನಗರಸಭೆ ಇನ್ನಷ್ಟು ವಿಳಂಬ ಮಾಡದೆ ಅವುಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !