ಆದಾಯ ಹೆಚ್ಚಿಸುವತ್ತ ನಗರಸಭೆ ಚಿತ್ತ

ಶುಕ್ರವಾರ, ಏಪ್ರಿಲ್ 26, 2019
35 °C
ಹೊಸಪೇಟೆಯ ಪ್ರಮುಖ ಭಾಗಗಳಲ್ಲಿ ಹೋರ್ಡಿಂಗ್ಸ್‌ ಅಳವಡಿಕೆ

ಆದಾಯ ಹೆಚ್ಚಿಸುವತ್ತ ನಗರಸಭೆ ಚಿತ್ತ

Published:
Updated:
Prajavani

ಹೊಸಪೇಟೆ: ಹೋರ್ಡಿಂಗ್ಸ್‌ಗಳ ಮೂಲಕ ಆದಾಯ ಹೆಚ್ಚಿಸಲು ನಗರಸಭೆ ಮುಂದಾಗಿದೆ.

ಅದಕ್ಕಾಗಿ ನಗರದ ಆರು ಪ್ರಮುಖ ರಸ್ತೆಗಳಲ್ಲಿ ಹೋರ್ಡಿಂಗ್ಸ್‌ ಅಳವಡಿಸಲು ನಿರ್ಧರಿಸಿದೆ. ಈಗಾಗಲೇ ನಗರದ ರೋಟರಿ ವೃತ್ತ, ಬಸ್‌ ನಿಲ್ದಾಣದಿಂದ ಸ್ಟೇಶನ್‌ ರಸ್ತೆಗೆ ಹೋಗುವ ಮಾರ್ಗ ಹಾಗೂ ಅನಂತಶಯನಗುಡಿ ಬಳಿ ಈಗಾಗಲೇ ಹೋರ್ಡಿಂಗ್ಸ್‌ ಅಳವಡಿಸಲಾಗಿದೆ. ಇನ್ನು ಮೂರು ಕಡೆಗಳಲ್ಲಿ ಇನ್ನಷ್ಟೇ ಅಳವಡಿಸಬೇಕಿದೆ.

ನಗರದ ಎ.ಕೆ.ಮೀಡಿಯಾ ಮತ್ತು ಕೆ.ಎಂ.ಮೀಡಿಯಾಗೆ ಟೆಂಡರ್‌ ಒಪ್ಪಿಸಲಾಗಿದೆ. ಒಂದು ವರ್ಷದ ಅವಧಿಗೆ ಈ ಟೆಂಡರ್‌ ಕೊಡಲಾಗಿದೆ. ಹೋರ್ಡಿಂಗ್ಸ್‌ ಅಳವಡಿಕೆ, ನಿರ್ವಹಣೆಯ ಜವಾಬ್ದಾರಿ ಒಪ್ಪಿಸಲಾಗಿದೆ. ಹೋರ್ಡಿಂಗ್ಸ್‌ನಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಿ, ಅದರಿಂದ ಆದಾಯ ಗಳಿಸುವ ಗುರಿ ಹೊಂದಲಾಗಿದೆ.

ನಗರ ದಿನೇ ದಿನೇ ಬೆಳೆಯುತ್ತಿದೆ. ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿ ಸನ್ನಿಹದಲ್ಲೇ ಇರುವುದರಿಂದ ಹೋಟೆಲ್‌ ಉದ್ಯಮ, ರಿಯಲ್‌ ಎಸ್ಟೇಟ್‌ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಗ್ರಾಹಕರನ್ನು ಸೆಳೆಯಲು ಹೋಟೆಲ್‌ಗಳು ಜಾಹೀರಾತುಗಳ ಮೂಲಕ ಪೈಪೋಟಿ ನಡೆಸುತ್ತಿವೆ. ಅವುಗಳನ್ನು ಆಕರ್ಷಿಸಿ, ಆದಾಯ ಹೆಚ್ಚಿಸಿಕೊಳ್ಳಲು ನಗರಸಭೆ ಹೋರ್ಡಿಂಗ್ಸ್‌ಗಳ ಮೊರೆ ಹೋಗಿದೆ.

‘ನಗರಸಭೆ ಆದಾಯ ಹೆಚ್ಚಿಸಿಕೊಳ್ಳಲು ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲ. ಮೊಬೈಲ್‌ ಟವರ್‌ಗಳು ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡರು ವಸೂಲಿ ಮಾಡುತ್ತಿಲ್ಲ. ಹೆಸರಿಗಷ್ಟೇ ನಗರಸಭೆ ಇದ್ದರೆ ಏನು ಪ್ರಯೋಜನ. ಇತರೆ ನಗರಗಳಂತೆ ನಗರದಲ್ಲಿ ಹೋರ್ಡಿಂಗ್ಸ್‌ಗಳನ್ನು ಅಳವಡಿಸಿ, ಅವುಗಳ ಮೂಲಕ ಆದಾಯ ಬರುವಂತೆ ನೋಡಿಕೊಳ್ಳಬೇಕು. ಅದರಿಂದ ಬರುವ ಹಣದಲ್ಲಿ ನಗರದ ಅಭಿವೃದ್ಧಿಗೆ ಕೆಲಸ ಮಾಡಬೇಕು’ ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಅನೇಕ ಸದಸ್ಯರು ಹಕ್ಕೊತ್ತಾಯ ಮಾಡಿದ್ದರು. 

ಕೊನೆಗೂ ಎಚ್ಚೆತ್ತುಕೊಂಡಿರುವ ನಗರಸಭೆ ಈಗ ಆದಾಯದ ದಾರಿ ಕಂಡುಕೊಂಡಿದೆ. ‘ಜಾಹೀರಾತು ಹೋರ್ಡಿಂಗ್ಸ್‌ಗಳಿಗೆ ಭಾರಿ ಬೇಡಿಕೆ ಇದೆ. ಅದರಿಂದ ಲಾಭ ಗಳಿಸಬಹುದು ಎಂಬ ಉದ್ದೇಶದಿಂದ ಹೋರ್ಡಿಂಗ್ಸ್‌ಗಳನ್ನು ಅಳವಡಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ವಿ. ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಟ್ಟು ಆರು ಪ್ರಮುಖ ರಸ್ತೆಗಳಲ್ಲಿ ಹೋರ್ಡಿಂಗ್ಸ್‌ ಹಾಕಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಮೂರು ಕಡೆ ಅಳವಡಿಸಿದ್ದೇವೆ. ಅವುಗಳಿಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದುವರಿಯಲಾಗುವುದು. ಬೆಲೆ ನಿಗದಿಗೆ ಸಂಬಂಧಿಸಿದಂತೆ ಇನ್ನಷ್ಟೇ ತೀರ್ಮಾನಕ್ಕೆ ಬರಬೇಕಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲ ಅಂತಿಮಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !