ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಗಿಂಗ್‌ ಮಾಡುವುದೇ ಮರೆತ ನಗರಸಭೆ!

ನಿಧಾನಗತಿ ಕಾಮಗಾರಿ; ತೆರೆದ ಚರಂಡಿಗಳಿಂದ ಸೊಳ್ಳೆ ಸಂಖ್ಯೆ ಹೆಚ್ಚಳ
Last Updated 11 ಸೆಪ್ಟೆಂಬರ್ 2019, 14:12 IST
ಅಕ್ಷರ ಗಾತ್ರ

ಹೊಸಪೇಟೆ: ನಿಧಾನ ಗತಿ ಚರಂಡಿ ನಿರ್ಮಾಣ ಕಾಮಗಾರಿ, ಹಳೆ ಚರಂಡಿಗಳನ್ನು ದುರಸ್ತಿಗೊಳಿಸದ ಕಾರಣ ಹೊಲಸು ರಸ್ತೆಯ ಮೇಲೆ ಹರಿದು ನಗರದಲ್ಲಿ ಸೊಳ್ಳೆ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಆದರೆ, ನಗರಸಭೆ ಅದನ್ನು ತಡೆಯಲು ಏನೂ ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ನಗರದ ಬಳ್ಳಾರಿ ರಸ್ತೆ, ಚಿತ್ತವಾಡ್ಗಿ ರಸ್ತೆಯಲ್ಲಿ ರಾಜಕಾಲುವೆಗಳನ್ನು ದುರಸ್ತಿಗೊಳಿಸಲಾಗಿದೆ. ಆದರೆ, ಅವುಗಳ ಮೇಲ್ಭಾಗ ಮುಚ್ಚಿಲ್ಲ. ತೆರೆದ ಅವಸ್ಥೆಯಲ್ಲೇ ಇರುವುದರಿಂದ ಎಲ್ಲೆಡೆ ದುರ್ಗಂಧ ಹರಡಿದೆ. ಸೊಳ್ಳೆ ಹುಟ್ಟಿಕೊಳ್ಳಲು ಕಾರಣವಾಗಿದೆ.

ಇನ್ನೂ ಪಟೇಲ್‌ ನಗರ, ತಿರುಮಲ ನಗರ, ಬಸವೇಶ್ವರ ಬಡಾವಣೆ, ದೇವಾಂಗಪೇಟೆ, ಹಂಪಿ ರಸ್ತೆಯಲ್ಲಿನ ಬಡಾವಣೆಗಳಲ್ಲಿ ಚರಂಡಿಗಳನ್ನು ದುರಸ್ತಿಗೊಳಿಸಿಲ್ಲ. ಇದರ ಪರಿಣಾಮ ಸ್ವಲ್ಪ ಮಳೆ ಬಂದರೂ ಹೊಲಸು ರಸ್ತೆ ಮೇಲೆ ಹರಿದಾಡುತ್ತಿದೆ. ಇದರಿಂದಲೂ ಸೊಳ್ಳೆ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

‘ಎಲ್ಲೂ ನೀರು ನಿಲ್ಲಲು ಬಿಡಬೇಡಿ. ಇದರಿಂದ ಡೆಂಗಿ ಹರಡುವ ಈಡಿಸ್‌ ಈಜಿಪ್ಟಿಯಾ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಎಲ್ಲೆಡೆ ಸ್ವಚ್ಛತೆ ಕಾಪಾಡಲು ಸಹಕರಿಸಿ’ ಎಂದು ನಗರಸಭೆ ಧ್ವನಿವರ್ಧಕಗಳ ಮೂಲಕ ನಿತ್ಯ ನಗರದಲ್ಲಿ ಪ್ರಚಾರ ಕೈಗೊಳ್ಳುತ್ತಿದೆ. ಆದರೆ, ಸ್ವತಃ ಅದೇ ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಅಷ್ಟೇ ಅಲ್ಲ, ಸೊಳ್ಳೆಗಳು ಹುಟ್ಟಿಕೊಳ್ಳದಂತೆ ತಡೆಯಲು ಎಲ್ಲೂ ಫಾಗಿಂಗ್‌ ಮಾಡುತ್ತಿಲ್ಲ. ಹೆಸರಿಗಷ್ಟೇ ನಗರಸಭೆಯ ಆರೋಗ್ಯ ವಿಭಾಗ ಎಂಬಂತಾಗಿದೆ ಎಂದು ಜನ ಆರೋಪಿಸಿದ್ದಾರೆ.

‘ಒಟ್ಟಿನಲ್ಲಿ ಹೇಳುವುದಾದರೆ ನಗರಸಭೆ ಮಳೆಗಾಲ ಎದುರಿಸಲು ಸಿದ್ಧತೆಯೇ ಮಾಡಿಕೊಂಡಿಲ್ಲ. ಇಲ್ಲದಿದ್ದಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಸ್ವಲ್ಪ ಮಳೆ ಬಂದರೂ ರಸ್ತೆಗಳಲ್ಲಿ ನೀರು ಸಂಗ್ರಹವಾಗುತ್ತದೆ. ಕೆಲವೆಡೆ ಚರಂಡಿಗಳನ್ನು ದುರಸ್ತಿಗೊಳಿಸದ ಕಾರಣ ಹೊಲಸು ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ಸಹಜವಾಗಿಯೇ ಸೊಳ್ಳೆಗಳು ಹುಟ್ಟಿಕೊಳ್ಳುತ್ತಿವೆ. ಕೆಲ ದಿನಗಳಿಂದ ಸೊಳ್ಳೆಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ ಎಂದರೆ ಅವುಗಳು ಎಲ್ಲೂ ಕೂರಲು ಬಿಡುತ್ತಿಲ್ಲ’ ಎಂದು ಪಟೇಲ್‌ ನಗರದ ನಿವಾಸಿ ರಮೇಶ ಹೇಳಿದರು.

‘ಸೊಳ್ಳೆಗಳಿಂದ ಡೆಂಗಿ, ಮಲೇರಿಯಾದಂತಹ ಮಾರಣಾಂತಿಕ ರೋಗಗಳು ಬರುತ್ತಿವೆ. ಸೊಳ್ಳೆ ನಿಯಂತ್ರಿಸದಿದ್ದರೆ ಬಹಳ ಗಂಭೀರವಾದ ಸಮಸ್ಯೆ ಸೃಷ್ಟಿಯಾಗುತ್ತದೆ. ನಗರಸಭೆಯ ಆರೋಗ್ಯ ವಿಭಾಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿತ್ಯ ನಗರದಲ್ಲಿ ಫಾಗಿಂಗ್‌ ಮಾಡಿಸಬೇಕು. ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಮಾರ್ಚ್‌ನಲ್ಲಿ ನಗರಸಭೆ ಅವಧಿ ಮುಗಿದಿದೆ. ಜನಪ್ರತಿನಿಧಿಗಳೇ ಇಲ್ಲ. ಜನರ ಸಮಸ್ಯೆ ಆಲಿಸಿ, ಪರಿಹಾರ ಒದಗಿಸುವವರೇ ಇಲ್ಲದಂತಾಗಿದೆ. ಇದು ಕೂಡ ಸಮಸ್ಯೆ ಹೆಚ್ಚಾಗಲು ಕಾರಣ ಎನ್ನುತ್ತಾರೆ‘ ತಿರುಮಲ ನಗರದ ನಿವಾಸಿ ರಾಜೇಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT