ಸಾಮಾನ್ಯ ಸಭೆಯಲ್ಲಿ ಸದಸ್ಯರು ಗರಂ

7
ಸಭೆಯ ಅನುಮತಿ ಪಡೆಯದೆ ಜಾಹೀರಾತು ಫಲಕ ಅಳವಡಿಸಲು ಅನುಮತಿ

ಸಾಮಾನ್ಯ ಸಭೆಯಲ್ಲಿ ಸದಸ್ಯರು ಗರಂ

Published:
Updated:
Prajavani

ಹೊಸಪೇಟೆ: ಸಭೆಯ ಒಪ್ಪಿಗೆ ಪಡೆಯದೆ ಜಾಹೀರಾತು ಫಲಕಗಳನ್ನು ಅಳವಡಿಸಲು ಎ.ಕೆ. ಮೀಡಿಯಾ ಮತ್ತು ಕೆ. ಸ್ಟಾರ್ಸ್‌ ಮೀಡಿಯಾಕ್ಕೆ ಅನುಮತಿ ಕೊಟ್ಟಿರುವುದಕ್ಕೆ ಶುಕ್ರವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಆಕ್ಷೇಪ ವ್ಯಕ್ತಪಡಿಸಿದರು. 

ನಗರಸಭೆ ವ್ಯಾಪ್ತಿಗೆ ಬರುವ ವಿವಿಧ ರಸ್ತೆಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಎ.ಕೆ. ಮೀಡಿಯಾ ಮತ್ತು ಕೆ. ಸ್ಟಾರ್ಸ್‌ ಮೀಡಿಯಾಗೆ ಮಂಜೂರಾತಿ ನೀಡುವ ವಿಷಯದ ಕುರಿತು ಸಭೆಯಲ್ಲಿ ಓದಲಾಯಿತು. ಅದಕ್ಕೆ ಕಾಂಗ್ರೆಸ್‌ ಸದಸ್ಯ ಡಿ. ವೇಣುಗೋಪಾಲ್‌ ಗರಂ ಆದರು.

‘ಈಗಾಗಲೇ ಪ್ರಮುಖ ರಸ್ತೆಗಳಲ್ಲಿ ಎ.ಕೆ. ಮೀಡಿಯಾ ಸಂಸ್ಥೆ ಜಾಹೀರಾತು ಫಲಕಗಳನ್ನು ಅಳವಡಿಸಿದೆ. ಈಗ ಸಭೆಯಲ್ಲಿ ಒಪ್ಪಿಗೆ ಕೇಳುತ್ತಿದ್ದಿರಲ್ಲ. ಒಪ್ಪಿಗೆ ಪಡೆಯದೆ ಬೋರ್ಡ್‌ ಹಾಕಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ’ ಎಂದು ಪ್ರಭಾರ ಪೌರಾಯುಕ್ತ ಸೈಯದ್‌ ಮನ್ಸೂರ್‌ ಅಹಮ್ಮದ್‌ ಅವರನ್ನು ವೇಣುಗೋಪಾಲ್‌ ಪ್ರಶ್ನಿಸಿದರು.

ಅದಕ್ಕೆ ದನಿಗೂಡಿಸಿದ ಇನ್ನೊಬ್ಬ ಕಾಂಗ್ರೆಸ್‌ ಸದಸ್ಯ ಗುಡಿಗುಂಟಿ ಮಲ್ಲಿಕಾರ್ಜುನ, ‘ಜಾಹೀರಾತು ಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಕಂಪನಿಗೆ ಹೈಕೋರ್ಟ್‌ ಸಂಚಾರಿ ಪೀಠ ತಡೆ ನೀಡಿದೆ. ಹೀಗಿರುವಾಗ ಇನ್ನೊಂದು ಕಂಪನಿಗೆ ಜಾಹೀರಾತು ಫಲಕ ಅಳವಡಿಸಲು ಹೇಗೆ ಆಸ್ಪದ ಮಾಡಿಕೊಟ್ಟಿದ್ದೀರಿ’ ಎಂದು ಕೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸೈಯದ್‌ ಮನ್ಸೂರ್‌, ‘ಈ ಹಿಂದೆ ಟೆಂಡರ್‌ ಕರೆದು ಕೆಲಸ ಒಪ್ಪಿಸಿದಾಗ ಜಿಲ್ಲಾಧಿಕಾರಿ ಅದನ್ನು ರದ್ದುಪಡಿಸಿದ್ದರು. ಈಗ ಪುನಃ ಟೆಂಡರ್‌ ಕರೆದು, ಬಾಡಿಗೆ ಆಧಾರದ ಮೇಲೆ ಕೊಡಲಾಗುತ್ತಿದೆ’ ಎಂದು ಸಮಜಾಯಿಷಿ ನೀಡಿದರು.

ಅದಕ್ಕೆ ವೇಣುಗೋಪಾಲ್‌, ‘ಯಾರದೋ ಒತ್ತಡಕ್ಕೆ ಮಣಿದು ನಿರ್ದಿಷ್ಟ ಸಂಸ್ಥೆಗೆ ಟೆಂಡರ್‌ ಕೊಟ್ಟಿರುವಂತೆ ಕಾಣುತ್ತಿದೆ. ನಿಯಮ ಉಲ್ಲಂಘಿಸಿ ಈ ರೀತಿ ಮಾಡುವುದು ಸರಿಯಲ್ಲ’ ಎಂದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ, ‘ಜಾಹೀರಾತು ಫಲಕಗಳಿಂದ ನಗರಸಭೆಗೆ ಆದಾಯ ಬರುತ್ತದೆ. ಅದಕ್ಕೆ ಅಡ್ಡಿಪಡಿಸುವುದು ಬೇಡ’ ಎಂದು ಮನವಿ ಮಾಡಿದರು.

‘ನಗರಸಭೆಗೆ ಆದಾಯ ಬಂದರೆ ಒಳ್ಳೆಯ ವಿಷಯ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಸಭೆಯ ಒಪ್ಪಿಗೆ ಪಡೆಯದೆ ಟೆಂಡರ್‌ ಹೇಗೆ ಕರೆದಿರಿ ಎಂಬುದು ಎಲ್ಲರಿಗೂ ಗೊತ್ತಾಗಬೇಕು’ ಎಂದು ಗುಡಿಗುಂಟಿ ಮಲ್ಲಿಕಾರ್ಜುನ ಒತ್ತಾಯಿಸಿದರು.

‘ಈ ಹಿಂದಿನ ಟೆಂಡರ್‌ ಡಿ.ಸಿ. ರದ್ದುಪಡಿಸಿದರೂ ಜಾಹೀರಾತು ಫಲಕ ಹಾಕಲು ಹೇಗೆ ಅವಕಾಶ ಕೊಟ್ಟಿರಿ’ ಎಂದು ಕಾಂಗ್ರೆಸ್‌ ಸದಸ್ಯ ಕೆ. ಬಡಾವಲಿ ಪ್ರಶ್ನಿಸಿದರು.

‘ಕೌನ್ಸಿಲ್‌ ಗಮನಕ್ಕೆ ತರದೇ ಟೆಂಡರ್‌ ಕರೆಯುವುದು ಸರಿಯಲ್ಲ. ಈಗ ಏಕಾಏಕಿ ಸಭೆಯ ಮುಂದೆ ವಿಷಯ ಪ್ರಸ್ತಾಪಿಸುತ್ತಿದ್ದೀರಿ’ ಎಂದು ಕಾಂಗ್ರೆಸ್‌ ಸದಸ್ಯ ಕೆ. ಮಲ್ಲಪ್ಪ ಹೇಳಿದರು.

‘ಹಿಂದಿನ ಸಭೆಯಲ್ಲಿ ಎಲ್ಲೆಲ್ಲಿ ಜಾಹೀರಾತು ಫಲಕ ಹಾಕಬೇಕು ಎನ್ನುವುದರ ಕುರಿತು ಕೈಗೆತ್ತಿಕೊಂಡಿದ್ದ ಚರ್ಚೆ ಪೂರ್ಣಗೊಂಡಿರಲಿಲ್ಲ. ಆದರೂ ಎ.ಕೆ. ಮೀಡಿಯಾ ಫಲಕಗಳನ್ನು ಹೇಗೆ ಅಳವಡಿಸಿತು’ ಎಂದು ಬಿಜೆಪಿ ಸದಸ್ಯ ಚಂದ್ರಕಾಂತ ಕಾಮತ್‌ ಪ್ರಶ್ನಿಸಿದರು.

‘ಸಭೆ ಒಪ್ಪಿಗೆ ಕೊಟ್ಟರೆ ಎರಡೂ ಸಂಸ್ಥೆಗಳಿಗೆ ಜಾಹೀರಾತು ಫಲಕ ಅಳವಡಿಸಲು ಅನುಮತಿ ಕೊಡಲಾಗುವುದು. ಸರ್ಕಾರದ ನಿಯಮಾವಳಿ ಪ್ರಕಾರ ದರ ನಿಗದಿಪಡಿಸಲಾಗುವುದು’ ಎಂದು ಮನ್ಸೂರ್‌ ಹೇಳಿದರು. ಅದರೊಂದಿಗೆ ಚರ್ಚೆಗೆ ತೆರೆ ಬಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !