ಅಪಘಾತ ವಲಯವಾದ ಕಾಲೇಜು ರಸ್ತೆ!

7
ಅರ್ಧ ಕಿ.ಮೀ ಅಂತರದಲ್ಲಿ ಎರಡು ಸಿಗ್ನಲ್; ಸದಾ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಕಿರಿಕಿರಿ

ಅಪಘಾತ ವಲಯವಾದ ಕಾಲೇಜು ರಸ್ತೆ!

Published:
Updated:
Deccan Herald

ಹೊಸಪೇಟೆ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಕಾಲೇಜು ರಸ್ತೆಯಲ್ಲಿ ವಾಹನಗಳ ನಿಲುಗಡೆ ಹಾಗೂ ಸಂಚಾರಕ್ಕೆ ಸೂಕ್ತ ಯೋಜನೆ ರೂಪಿಸದ ಕಾರಣ ಸದಾ ಟ್ರಾಫಿಕ್‌ ಕಿರಿಕಿರಿ ಉಂಟಾಗುತ್ತಿದೆ.

ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಿರುವುದರಿಂದ ಇತರೆ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಅರ್ಧ ಕಿ.ಮೀ. ಅಂತರದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ಹಾಗೂ ರೋಟರಿ ವೃತ್ತದಲ್ಲಿ ಸಿಗ್ನಲ್‌ ಅಳವಡಿಸಲಾಗಿದ್ದು, ಅದು ಕೂಡ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಹಿರಿಯ ನಾಗರಿಕರು, ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ರಸ್ತೆಯು ನಗರದ ಬಸವೇಶ್ವರ ಬಡಾವಣೆ, ಅಮರಾವತಿ, ಚಿತ್ತವಾಡ್ಗಿ, ಪಟೇಲ್‌ ನಗರ, ಹಂಪಿ ರಸ್ತೆ, ಟಿ.ಬಿ. ಡ್ಯಾಂಗೆ ಸಂಪರ್ಕ ಕಲ್ಪಿಸುತ್ತದೆ. ವಿಜಯನಗರ ಕಾಲೇಜು, ಶಂಕರ್‌ ಆನಂದ್‌ ಸಿಂಗ್‌ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢದೇವರಾಯ ತಾಂತ್ರಿಕ ಕಾಲೇಜು ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿವೆ. ಶಾಲಾ, ಕಾಲೇಜಿನ ಬಸ್ಸುಗಳು, ದೈನಂದಿನ ಕೆಲಸಗಳಿಗೆ ಹೋಗುವವರು ಈ ಮಾರ್ಗದಿಂದಲೇ ಓಡಾಡುತ್ತಾರೆ.

ಅಷ್ಟೇ ಅಲ್ಲ, ರಾಜಧಾನಿ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಹುಬ್ಬಳ್ಳಿ ಸೇರಿದಂತೆ ಇತರೆ ನಗರಗಳಿಗೆ ಹೋಗುವ ವಾಹನಗಳು ಇದೇ ರಸ್ತೆಯ ಮೂಲಕ ಸಂಚರಿಸುತ್ತವೆ. ಈ ರಸ್ತೆಯಿಂದ ತುಸು ದೂರದಲ್ಲಿಯೇ ಹೊರವರ್ತುಲ ರಸ್ತೆ ಇದೆ. ಆದರೆ, ಸಾರಿಗೆ ಸಂಸ್ಥೆಯ ಎಲ್ಲ ಬಸ್ಸುಗಳು, ಆಟೊಗಳು, ಸರಕು ಸಾಗಣೆ ಲಾರಿಗಳು ಈ ದಾರಿಯಿಂದಲೇ ಓಡಾಡುತ್ತವೆ.

ಈ ರಸ್ತೆಯ ಎರಡೂ ಬದಿಯಲ್ಲಿ ಹೋಟೆಲ್‌ಗಳು, ಬಟ್ಟೆ ಹಾಗೂ ಎಲೆಕ್ಟ್ರಾನಿಕ್‌ ವಸ್ತುಗಳ ಮಳಿಗೆಗಳಿವೆ. ಬಹುತೇಕ ಮಳಿಗೆಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇಲ್ಲ. ಜನ ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಇದರಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿ, ಅಪಘಾತಗಳಿಗೆ ಕಾರಣವಾಗುತ್ತಿದೆ. ವಾರಾಂತ್ಯದ ದಿನಗಳಲ್ಲಿ ಇದು ಮತ್ತಷ್ಟು ಮಿತಿ ಮೀರುತ್ತದೆ. ಅದಕ್ಕಾಗಿ ಸಂಚಾರ ಪೊಲೀಸರು ಸೂಕ್ತ ಯೋಜನೆ ರೂಪಿಸಿ, ವಾಹನ ದಟ್ಟಣೆ ಹಾಗೂ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಸದಾ ವಾಹನ ದಟ್ಟಣೆ ಉಂಟಾಗುತ್ತಿದೆ. ಜನ ಓಡಾಡಲು ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆಯ ಬಸ್ಸುಗಳು ಸೇರಿದಂತೆ ಇತರೆ ಭಾರಿ ವಾಹನಗಳ ಸಂಚಾರದ ಮೇಲೆ ಸಂಪೂರ್ಣ ನಿರ್ಬಂಧ ಹೇರಬೇಕು. ಬಸ್ಸುಗಳು ಹೊರವರ್ತುಲ ರಸ್ತೆಯ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳಬೇಕು. ಆಗ ವಾಹನ ದಟ್ಟಣೆ ತಾನಾಗಿಯೇ ಕಡಿಮೆಯಾಗುತ್ತದೆ’ ಎಂದು ಬಸವೇಶ್ವರ ಬಡಾವಣೆಯ ರಘು ಸಲಹೆ ನೀಡಿದರು.

‘ಸಂಚಾರ ಪೊಲೀಸರು ಸ್ಥಳದಲ್ಲಿದ್ದಾಗ ವಾಹನಗಳ ಓಡಾಟ ಸ್ವಲ್ಪ ಮಟ್ಟಿಗೆ ಸುಗಮವಾಗಿರುತ್ತದೆ. ಅವರಿಲ್ಲದಿದ್ದಾಗ ಜನ ಮನಬಂದಂತೆ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವರಂತೂ ಬೇಕಾಬಿಟ್ಟಿ ವಾಹನಗಳನ್ನು ಓಡಿಸುತ್ತಾರೆ. ರಸ್ತೆ ದಾಟುವುದೇ ಕಷ್ಟವಾಗುತ್ತದೆ. ಅರ್ಧ ಕಿ.ಮೀ.ಗೂ ಕಡಿಮೆ ಅಂತರದಲ್ಲಿ ಎರಡು ಸಿಗ್ನಲ್‌ಗಳನ್ನು ಅಳವಡಿಸಿರುವುದು ಕೂಡ ಸರಿಯಾದ ಕ್ರಮವಲ್ಲ. ಇದರಿಂದ ಕೆಲಸದ ಅವಧಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಇದರ ಬಗ್ಗೆ ಸಂಚಾರ ಪೊಲೀಸರು ಸೂಕ್ತ ಯೋಜನೆ ರೂಪಿಸುವ ಅಗತ್ಯವಿದೆ’ ಎಂದು ಪಟೇಲ್ ನಗರದ ಸುರೇಂದ್ರ ಅಭಿಪ್ರಾಯಪಟ್ಟರು.

‘ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊರವರ್ತುಲ ರಸ್ತೆಯ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳಬಹುದು. ಆದರೆ, ಗ್ರಾಮೀಣ ಪ್ರದೇಶದಿಂದ ಬರುವ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಜತೆಗೆ ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆಯೂ ಬರುತ್ತದೆ. ವಾಹನ ದಟ್ಟಣೆ ತಗ್ಗಿಸಲು ಏನೆಲ್ಲ ಮಾಡಬಹುದು ಎಂಬುದನ್ನು ಸಮಾಲೋಚಿಸಿ, ಜನರಿಂದ ಸಲಹೆ ಪಡೆದು ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಯ್ಯನಗೌಡ ಪಾಟೀಲ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !