ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧತೆ, ಬದ್ಧತೆ ಇದ್ದರೆ ಐಎಎಸ್‌ ಖಚಿತ: ಡಾ.ರಾಜೇಂದ್ರ ಕರೆ

‘ಯುವಜನರ ನಡೆ ಸಾಧನೆಯ ಕಡೆ’ ತರಬೇತಿ ಕಾರ್ಯಗಾರ
Last Updated 2 ಸೆಪ್ಟೆಂಬರ್ 2018, 12:02 IST
ಅಕ್ಷರ ಗಾತ್ರ

ಬಳ್ಳಾರಿ: ‘ಸಮರ್ಪಕ ಸಿದ್ಧತೆ ಮತ್ತು ಬದ್ಧತೆ ಇದ್ದರೆ 22 ವರ್ಷ ಪೂರ್ಣಗೊಳಿಸುವುದರಲ್ಲೇ ಐಎಎಸ್‌ ಅಧಿಕಾರಿಯಾಗಬಹುದು. ಜಿಲ್ಲೆಯ ಯುವಜನರು ಇದು ಸಾಧ್ಯ ಎಂಬ ಮನಸ್ಥಿತಿಯಿಂದ ಆರಂಭಿಸಬೇಕಷ್ಟೇ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ಭಾನುವಾರ ‘ಯುವಜನರ ನಡೆ ಸಾಧನೆಯ ಕಡೆ’ ತರಬೇತಿ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದ ಅವರು, ‘2012ನೇ ಐಎಎಸ್‌ ತಂಡದಲ್ಲಿ ನನ್ನೊಂದಿಗಿದ್ದ 180 ಮಂದಿ ಪೈಕಿ ಸುಮಾರು 30 ಮಂದಿ 22–23ನೇ ವಯಸ್ಸಿನಲ್ಲೇ ಸಾಧನೆ ಮಾಡಿದ್ದರು. ಆದರೆ 27ನೇ ವಯಸ್ಸಿನಲ್ಲಿ ನಾನು ಪಾಸಾಗಿದ್ದೆ. ಪೋಷಕರ ಒತ್ತಡದ ಮೇರೆಗೆ ವೈದ್ಯಕೀಯ ಪದವಿಗೆ ಅಭ್ಯಾಸ ನಡೆಸಿದ್ದರಿಂದ ಅಮೂಲ್ಯವಾದ ಮೂರು ವರ್ಷಗಳು ಕಳೆದುಹೋದವು’ ಎಂದು ವಿಷಾದಿಸಿದರು.

‘ಅತ್ಯಂತ ಚಿಕ್ಕ ವಯಸ್ಸಿಗೇ ಐಎಎಸ್‌ನಂಥ ಪದವಿ ಪಡೆದವರು ಸಾಕಷ್ಟು ಮುಂಚಿತವಾಗಿಯೇ ಸಿದ್ಧತೆಯನ್ನು ನಡೆಸಿದ್ದರು ಎಂಬುದನ್ನು ಅರಿಯಬೇಕು. ಮಾಹಿತಿಯೇ ಸಂಪತ್ತು. ಆದರೆ ಗ್ರಾಮೀಣ ಪ್ರದೇಶದ ಬಹಳ ಯುವಜನರಿಗೆ ಪರೀಕ್ಷೆಯ ಕುರಿತು ಪ್ರಾಥಮಿಕ ಮಾಹಿತಿಯೂ ಇರುವುದಿಲ್ಲ’ ಎಂದರು.

ಶ್ರೀಮಂತರೇನಲ್ಲ: ಐಎಎಸ್‌ ಪರೀಕ್ಷೆ ಪಾಸು ಮಾಡುವವರೆಲ್ಲ ಶ್ರೀಮಂತರ ಮನೆ ಮಕ್ಕಳು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ನಮ್ಮ ಐಎಎಸ್‌ ತಂಡದಲ್ಲಿದ್ದವರ ಪೈಕಿ ಶೇ 80 ರಷ್ಟು ಮಂದಿ ಬಿಪಿಎಲ್‌ ಕುಟುಂಬದವರಾಗಿದ್ದರು. ರಾಜೇಂದ್ರ ಕಟಾರ ಬುಡಕಟ್ಟು ಹಿನ್ನೆಲೆಯವರಾಗಿದ್ದರು’ ಎಂದು ಸ್ಮರಿಸಿದರು.

ಹೊರಕ್ಕೆ ಬನ್ನಿ: ‘ನಿಮ್ಮ ಮನೆಯ ಓಣಿ, ಊರಿನ ಗಡಿ ದಾಟಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಪರೀಕ್ಷೆಯನ್ನು ಎದುರಿಸಿದರೆ ಮಾತ್ರ ಉನ್ನತ ಹುದ್ದೆಗಳನ್ನು ಪಡೆಯಬಹುದು. ಸುರಕ್ಷಿತ ವಲಯ ಮತ್ತು ಸ್ಥಳೀಯ ಅನುಕೂಲವನ್ನಷ್ಟೇ ನೋಡಿದರೆ ಯಶಸ್ಸು ಅಸಾಧ್ಯ’ ಎಂದು ಎಚ್ಚರಿಸಿದರು.

ವೇದಿಕೆಯಲ್ಲಿದ್ದ ಕೊಪ್ಪಳ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ವೆಂಕಟರಾಜು ಅವರ ಕುರಿತು ಮಾತನಾಡಿದ ರಾಜೇಂದ್ರ, ‘ನನಗಿಂತ ಚಿಕ್ಕ ವಯಸ್ಸಿನವರಾದ ಅವರು ರಾಜಾಸ್ತಾನದವರು. ಆದರೆ ಭಾರತೀಯ ಆಡಳಿತ ಸೇವೆ ಅವರನ್ನು ಕರ್ನಾಟಕಕ್ಕೆ ಕರೆತಂದಿದೆ. ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಕುಮಾರ್‌ ತಮಿಳುನಾಡಿನವರು. ಅವರೆಲ್ಲ ತಮ್ಮೂರು ಬಿಟ್ಟು ಹೊರಕ್ಕೆ ಬಂದಿದ್ದರಿಂದಲೇ ಅದ್ಭುತ ಅವಕಾಶಗಳು ದೊರಕಿವೆ’ ಎಂದರು.

ಸಮಾಜ ಕಲ್ಯಾಣ ಇಲಾಖೆ ಹಿರಿಯ ಉಪನಿರ್ದೇಶಕ ರಾಜಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ್‌ಬಾಬು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಶುಭಾ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ವೇದಿಕೆಯಲ್ಲಿದ್ದರು.

ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ್‌, ವೆಂಕಟರಾಜು ಉಪನ್ಯಾಸ ನೀಡಿದರು.

ಪರದ ಅಳವಡಿಕೆ: ರಂಗಮಂದಿರದ ಒಳಗೆ ನಿಲ್ಲಲೂ ಸ್ಥಳಾವಕಾಶವಿಲ್ಲದೆ ಹೊರಗೆ ನಿಂತಿದ್ದ ನೂರಾರು ಯುವಜನರಿಗೆ ಎರಡು ಎಲ್‌ಇಡಿ ಪರದೆ ಮೂಲ ಕಾರ್ಯಾಗಾರ ವೀಕ್ಷಣೆಗೆ ಅನುವು ಮಾಡಲಾಯಿತು.

ರೋಮಾಂಚನ ಮೂಡಿಸಿದ ರವಿ ಡಿ. ಚನ್ನಣ್ಣನವರ್

ಬೆಂಗಳೂರು ಪಶ್ಚಿಮ ಡಿಸಿಪಿ ರವಿ ಡಿ ಚನ್ನಣ್ಣನವರ್‌ ಕಾರ್ಯಾಗಾರದ ವೇದಿಕೆ ಬರುತ್ತಲೇ ಯುವಜನರು ಸಂಭ್ರಮದಿಂದ ಚಪ್ಪಾಳೆ ತಟ್ಟಿ ಸ್ವಾಗತಿಸಿದರು

ನಂತರ ಉಪನ್ಯಾಸ ನೀಡಿದ ರವಿ, ’ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಇತರರನ್ನು ನೋಡಿ ಕೀಳರಿಮೆಯಿಂದ ನರಳುವ ಬದಲು ಇಂದಿನಿಂದಲೇ ಸಿದ್ಧತೆಯನ್ನು ಆರಂಭಿಸಿಬಿಡಿ. ಮುಂದಿನ ನಾಲ್ಕೈದು ವರ್ಷಗಳಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT