ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡಿಗರಿಗೆ ಹೊಸ ನಾಯಕತ್ವ ಬೇಕಿದೆ: ಕೋಟ ಶ್ರೀನಿವಾಸ ಪೂಜಾರಿ

Last Updated 6 ನವೆಂಬರ್ 2019, 15:41 IST
ಅಕ್ಷರ ಗಾತ್ರ

ಹೊಸಪೇಟೆ: ‘ಈಡಿಗ ಸಮಾಜಕ್ಕೆ ಹೊಸ ನಾಯಕತ್ವ ಬೇಕಿದೆ. ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬದುಕು ಕಟ್ಟಿಕೊಡುವಂತಹ ನಾಯಕನ ಅಗತ್ಯವಿದೆ’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತಾಲ್ಲೂಕು ಆರ್ಯ ಈಡಿಗ ಟ್ರಸ್ಟ್‌ನಿಂದ ಬುಧವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ರಾಜ್ಯದ ಎಲ್ಲಾ ತಾಲ್ಲುಕುಗಳಲ್ಲಿ ಸಮಾಜದ ಹೊಸ ನಾಯಕರು ಬೆಳೆಯಬೇಕು. ಅದಕ್ಕಾಗಿ ಸಂಘಟನೆಗೆ ಒತ್ತು ಕೊಡಬೇಕು’ ಎಂದರು.

‘ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡಾಗ ಅನೇಕ ಸವಾಲುಗಳು ಎದುರಾಗುತ್ತವೆ. ನಮ್ಮ ಸಮಾಜ ಬಹಳ ಚಿಕ್ಕದ್ದು. ಬಡವರು ಹೆಚ್ಚಿದ್ದಾರೆ ಎಂಬ ಭಾವನೆ ಬರಬಾರದು. ನಮ್ಮ ಸರ್ಕಾರ ನಿಮಗೆ ಅಗತ್ಯ ನೆರವು ನೀಡಲು ಸಿದ್ಧವಿದೆ. ಪೋಷಕರು ಮಕ್ಕಳಿಗೆ ಐ.ಎ.ಎಸ್‌., ಐ.ಪಿ.ಎಸ್‌., ಡಾಕ್ಟರ್‌, ಎಂಜಿನಿಯರ್‌ ಕೋರ್ಸ್‌ ಓದಲು ಪ್ರೋತ್ಸಾಹಿಸಬೇಕು’ ಎಂದು ಸಲಹೆ ಮಾಡಿದರು.

‘ಸಮಾಜದ ಬಂಗಾರಪ್ಪ, ಜಾಲಪ್ಪ, ಕಾಗೋಡು ತಿಮ್ಮಪ್ಪ, ಜನಾರ್ದನ ಪೂಜಾರಿ ಸೇರಿದಂತೆ ಹಲವರು ಒಳ್ಳೆಯ ಕೆಲಸದ ಮೂಲಕ ಜನಮನ್ನಣೆ ಗಳಿಸಿದವರು. ಅವರ ನಂತರ ಹೊಸ ನಾಯಕರು ಮುಂಚೂಣಿಗೆ ಬರುವ ಅಗತ್ಯವಿದೆ’ ಎಂದರು.

‘ನಾವು ದುರ್ಬಲರಲ್ಲ ಎಂಬುದನ್ನು ಮೊದಲು ಮನಸ್ಸಿನಿಂದ ತೆಗೆದು ಹಾಕಬೇಕು. ಹಿಂದೆ ಡಾಕ್ಟರ್‌ ಮಗ ಡಾಕ್ಟರ್‌, ಕೂಲಿಯವನ ಮಗ ಕೂಲಿ ಆಗುತ್ತಿದ್ದ. ಈಗ ಹಾಗಲ್ಲ. ಕೂಲಿ ಮಾಡುವವರ ಮಕ್ಕಳು ಮೆರಿಟ್‌ ಆಧಾರದ ಮೇಲೆ ಡಾಕ್ಟರ್‌ ಆಗಬಹುದು. ಈಗ ಈಡಿಗ ಸಮಾಜದವರು ಯಾರೂ ಶರಾಬು ಮಾರುತ್ತಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಬಂದ ಕಸುಬಿನೊಂದಿಗೆ ಸಮಾಜದವರು ಮುಂದುವರೆದಿದ್ದರು’ ಎಂದು ಹೇಳಿದರು.

‘ಅಧಿಕಾರ ಬರುತ್ತೆ ಹೋಗುತ್ತೆ. ಅಧಿಕಾರ ಇರುವಾಗ ಅದನ್ನು ಬಳಸಿಕೊಂಡು, ನಾರಾಯಣ ಗುರುಗಳು ಹೇಳಿದಂತೆ ದುರ್ಬಲರನ್ನು ಮೇಲೆತ್ತಬೇಕು. ನಾವು ಒಗ್ಗಟ್ಟಾದರೆ ಮಾತ್ರ ಸರ್ಕಾರ ನಮ್ಮ ಧ್ವನಿಗೆ ಕಿವಿಗೊಡುತ್ತದೆ. ಸದ್ಯ ರಾಜ್ಯದಲ್ಲಿ ಈಡಿಗ ಸಮಾಜದ ಏಳು ಜನ ಶಾಸಕರಿದ್ದೇವೆ. ಎಲ್ಲರೂ ಒಟ್ಟಾಗಿ ಯಾವುದೇ ರಾಗ ದ್ವೇಷ, ರಾಜಕಾರಣವಿಲ್ಲದೇ ಸಮಾಜದ ಏಳಿಗೆಗೆ ಶ್ರಮಿಸುತ್ತೇವೆ’ ಎಂದು ಭರವಸೆ ನೀಡಿದರು.

ಜೆ.ಡಿ.ಎಸ್‌. ರಾಜ್ಯ ಉಪಾಧ್ಯಕ್ಷ ಎಚ್‌.ಆರ್‌. ಶ್ರೀನಾಥ ಮಾತನಾಡಿ, ‘ಹನ್ನೆರಡನೇ ಶತಮಾನದ ಬಸವಣ್ಣನವರ ಮತ್ತೊಂದು ಅವತಾರವೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಶೋಷಿತರ ಕಲ್ಯಾಣಕ್ಕೆ ಸಾಕಷ್ಟು ದುಡಿದವರು. ಆದರೆ, ಇಂದು ಆ ಸಮಾಜದವರೇ ಹಿಂದುಳಿದಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕವಾಗಿ ಸ್ಥಿತಿವಂತರಿಲ್ಲ. ಅವರ ಸ್ಥಿತಿ ಸುಧಾರಿಸಬೇಕಿದೆ’ ಎಂದರು.

ಆರ್ಯ ಈಡಿಗ ಸಂಘದ ತಾಲ್ಲೂಕು ಅಧ್ಯಕ್ಷ ಕುಮಾರ, ಟ್ರಸ್ಟ್‌ ಮುಖಂಡರಾದ ಚಂದ್ರಶೇಖರ್‌, ನಾರಾಯಣ ಸ್ವಾಮಿ, ಕೃಷ್ಣಪ್ಪ, ರಾಘವೇಂದ್ರ, ಈರಣ್ಣ, ಧನಂಜಯ, ಜಗದೀಶ್‌ ಗೌಡ, ಅಶೋಕ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT