ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕಗ್ಗಲ್‌ನಲ್ಲಿ ಕೊರೊನಾ ಓಡಿಸಲು ಭೂತ ಪ್ರೇತಗಳಿಗೆ ಅನ್ನ ಸಂತರ್ಪಣೆ: ದೂರು ದಾಖಲು

Last Updated 25 ಮೇ 2021, 17:00 IST
ಅಕ್ಷರ ಗಾತ್ರ

ಬಳ್ಳಾರಿ: ‘ತಾಲ್ಲೂಕಿನ ಡಿ.ಕಗ್ಗಲ್‌ ಗ್ರಾಮದಲ್ಲಿ ಅನ್ನ ಸಂತರ್ಪಣೆ ಎಂಬ ಬೃಹದಾಕಾರದ ಮೌಢ್ಯಕಾರ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರೊಬ್ಬರು ಮೋಕ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಗ್ರಾಮದ ಐವರ ಹೆಸರನ್ನು ಉಲ್ಲೇಖಿಸಲಾಗಿದ್ದು, ದೂರುದಾರರ ಹೆಸರು ಇಲ್ಲ.

‘ಭೂತ, ಪ್ರೇತಗಳಿಗೆ ಬೃಹತ್‌ ಅನ್ನಸಂತರ್ಪಣೆ ಮಾಡಿದರೆ ಕೊರೊನಾ ದೂರವಾಗುವುದು ಎಂಬ ಪರಿಕಲ್ಪನೆಯನ್ನು ಇಡೀ ಊರಿನ ಜನರಿಗೆ ಡಂಗೂರ ಸಾರಿಸಿ, ಮೇ 21ರಂದು ಒತ್ತಾಯಪೂರ್ವಕವಾಗಿ 5 ಕೆಜಿ ಅನ್ನ ಮಾಡಿಸಿ, ಮೂರ್ನಾಲ್ಕು ಟ್ರ್ಯಾಕ್ಟರ್‌ ಟ್ರಾಲಿಯ ತುಂಬ ತುಂಬಿ ಆ ಅನ್ನವನ್ನು ರಾತ್ರಿಪೂರ ಊರಿನ ಸುತ್ತ ಚೆಲ್ಲಿದ್ದಾರೆ. ಅದು ಟಿವಿಗಳಲ್ಲಿ ರಾಜ್ಯ ಸುದ್ದಿಯಾಗಿರುವುದು ನೋವಿನ ವಿಚಾರವಾಗಿದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಇಂಥ ಮಹಾಕಾರ್ಯಗಳನ್ನು ನಮ್ಮೂರಿನ ಅನಕ್ಷರಸ್ಥ ಮುಖಂಡರು, ಭಂಡ ಮುಖಂಡರು ಆಗಾಗ ಮಾಡುತ್ತಲೇ ಇರುತ್ತಾರೆ. ಈ ವಿಚಾರ ನಿಮ್ಮ ವ್ಯಾಪ್ತಿಯಲ್ಲಿ ಬರುವುದರಿಂದ ಕಾರಣೀಭೂತರನ್ನು ತಕ್ಷಣ ಬಂಧಿಸಬೇಕು. ಊರಿನ ವಿದ್ಯಾವಂತರ ಆಶಾಭಾವನೆಗೆ ಪೂರಕವಾಗುವಿರೆಂದು ನನ್ನ ಮನವಿ’ ಎಂದು ದೂರಿನಲ್ಲಿ ಕೋರಿದ್ದಾರೆ.

ದೂರು ಬಂದಿಲ್ಲ: ಈ ಕುರಿತು ಪ್ರತಿಕ್ರಿಯಿಸಿದ ಮೋಕಾ ಠಾಣೆಯ ಪೊಲೀಸರು, ‘ವಾಟ್ಸ್‌ ಅಪ್‌ ಗುಂಪುಗಳಲ್ಲಿ ಹರಿದಾಡುತ್ತಿರುವ ದೂರಿನ ಪ್ರತಿ ನಮಗೂ ಬಂದಿದೆ. ಆದರೆ ಇದುವರೆಗೂ ಯಾರೂ ಬಂದು ದೂರು ನೀಡಿಲ್ಲ. ಅಂಚೆಯಲ್ಲೂ ದೂರು ಬಂದಿಲ್ಲ. ಘಟನೆ ನಡೆದಿರುವುದು ಮೇ 21ರಂದು. ಪತ್ರದಲ್ಲಿ ಮೇ 25 (ಮಂಗಳವಾರ) ಎಂದು ದಿನಾಂಕ ನಮೂದಾಗಿದೆ. ಆದರೆ ಇಂದು ಯಾವುದೇ ದೂರು ಬಂದಿಲ್ಲ’ ಎಂದು ಹೇಳಿದರು.

‘ಕಗ್ಗಲ್‌ ಗ್ರಾಮವು ಪಕ್ಷ ರಾಜಕಾರಣಕ್ಕೆ ಕುಖ್ಯಾತವಾಗಿದೆ. ದೂರಿನಲ್ಲಿ ಉಲ್ಲೇಖಿಸಲಾಗಿರುವ ಐವರು ಒಂದು ಪಕ್ಷಕ್ಕೆ ಸೇರಿದವರಾಗಿದ್ದು, ಇನ್ನೊಂದು ಪಕ್ಷದವರು ಅವರ ವಿರುದ್ಧ ಚಿತಾವಣೆ ಮಾಡಲು ಪತ್ರವನ್ನು ಬರೆದು ವಾಟ್ಸ್‌ ಅಪ್‌ ಗುಂಪುಗಳಲ್ಲಿ ಹಂಚಿರುವ ಸಾದ್ಯತೆ ಇದೆ’ ಎಂದು ಗ್ರಾಮಸ್ಥರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT