ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: 31ರವರೆಗೂ ಸಂಪೂರ್ಣ ಲಾಕ್‌ಡೌನ್‌ ವಿಸ್ತರಣೆ: ಡಿ.ಸಿ.

24, 25ರಂದು ಮಾತ್ರ ಮಧ್ಯಾಹ್ನ 12ರವರೆಗೆ ಸಾಮಗ್ರಿ ಖರೀದಿಗೆ ಅವಕಾಶ
Last Updated 22 ಮೇ 2021, 15:22 IST
ಅಕ್ಷರ ಗಾತ್ರ

ಬಳ್ಳಾರಿ: ‘ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಾದ್ಯಂತ ಮೇ 19ರಿಂದ ಜಾರಿಯಲ್ಲಿರುವ ಸಂಪೂರ್ಣ ಲಾಕ್‌ಡೌನ್‌ ಅನ್ನು 31ರವರೆಗೂವಿಸ್ತರಿಸಲಾಗಿದ್ದು,24 ಮತ್ತು 25 ರಂದು ಮಾತ್ರ ಮಧ್ಯಾಹ್ನ 12ರವರೆಗೂ ಅವಶ್ಯಕ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದರು.

‘ರಾಜ್ಯ ಸರ್ಕಾರವು ಜೂನ್‌ 7ರವರೆಗೂ ಲಾಕ್‌ಡೌನ್‌ ವಿಸ್ತರಿಸಿದ್ದು, ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲು ಅಧಿಕಾರ ನೀಡಿದೆ. ಸಾರ್ವಜನಿಕರ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ವಿಸ್ತರಿಸುವುದು ಅನಿವಾರ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಹಾಗೂ ತಜ್ಞರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ನಗರದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘19ರಿಂದ ಐದು ದಿನಗಳ ಕಾಲದ ಸಂಪೂರ್ಣ ಲಾಕ್‌ಡೌನ್‌ ನಿಯಮಗಳು 24ರವರೆಗೂ ಜಾರಿಯಲ್ಲಿರಲಿವೆ. ಅಂದು ಹಾಗೂ 25ರಂದು ಕೊಂಚ ಹೆಚ್ಚಿನ ಸಮಯಾವಕಾಶ ನೀಡಿ ಅವಶ್ಯ ವಸ್ತುಗಳ ಖರೀದಿಗೆ ಅನುವು ಮಾಡಲಾಗುವುದು. ನಂತರ ನಿಗದಿಯಾಗಿರುವ ಅವಧಿಯನ್ನು ಹೊರತುಪಡಿಸಿದ 31ರವರೆಗೂ ಅನಗತ್ಯ ಓಡಾಡುವಂತಿಲ್ಲ. ಕೃಷಿ ಪರಿಕರಗಳ ಮಾರಾಟದ ಅವಧಿಯನ್ನು ಕೂಡ ಕಡಿತಗೊಳಿಸಲಾಗಿದೆ. ಈ ಅಂಗಡಿಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗಷ್ಟೇ ತೆರೆದಿರಬೇಕು’ ಎಂದು ಹೇಳಿದರು.

‘ಕಿರಾಣಿ ಅಂಗಡಿಗಳು ದಿನಸಿ, ಹಣ್ಣು, ತರಕಾರಿಗಳು, ಮದ್ಯದ ಅಂಗಡಿಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು ಮಾತ್ರ ಕೋವಿಡ್‌ ನಿಯಮಾನುಸಾರ ತೆರೆದಿರಬಹುದು. ಜನರ ಅಂತರ ಕಾಯ್ದುಕೊಳ್ಳಲು ಗುರುತು ಹಾಕಬೇಕು.ಕೃಷಿ ಉತ್ಪನ್ನ ಮಾರುಕಟೆಯಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ನಿಗದಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಬೇಕು’ ಎಂದರು.

‘ನಗರದ ಬೆಂಗಳೂರು ರಸ್ತೆಯಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆ ರಸ್ತೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮಾರುತ್ತಿರುವವರು ನಿಗದಿತ ಬೇರೆ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಬಹುದು’ ಎಂದರು.

‘ಕೃಷಿಗೆ ಸಂಬಂಧಿಸಿದ ಅಗತ್ಯ ವಸ್ತು, ಉಪಕರಣಗಳ ಅಂಗಡಿಗಳನ್ನು ಮೇ 24ರಿಂದ 30ರವರೆಗೆ ಪ್ರತಿ ದಿನ ಬೆಳ್ಳಿಗೆ 6 ಗಂಟೆಯಿಂದ ಬೆಳ್ಳಿಗೆ 10 ಗಂಟೆಯವರೆಗಷ್ಟೇ ತೆರೆಯಬೇಕು. ಮದುವೆ ಸೇರಿದಂತೆ ಕೌಟುಂಬಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ’ ಎಂದು ಹೇಳಿದರು.

ಮೇ 31ರನಂತರ ಜಿಲ್ಲೆಯಲ್ಲಿ ಕೋವಿಡ್-19 ಸ್ಥಿತಿ–ಗತಿಯನ್ನು ಪರಿಶೀಲಿಸಿದ ಬಳಿಕ ನಿರ್ಬಂಧಗಳ ತೆರವು ಕುರಿತು ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ಸೋಂಕು ದೃಢ ಪ್ರಮಾಣ ಕುಸಿತ
‘ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಸೋಂಕು ದೃಢ ಪ್ರಮಾಣ ಜಿಲ್ಲೆಯಲ್ಲಿ ಸುಮಾರು ಶೇ 30ರಿಂದ 35ಕ್ಕೆ ಕುಸಿದಿದೆ’ ಎಂದರು.

‘ಮನೆಗಳ ಸಮೀಕ್ಷೆ ನಡೆದಿದ್ದು, 50 ಸಾವಿರ ಮಂದಿಗೆ ಅಗತ್ಯವಿರುವ ಔಷಧಿ ಕಿಟ್‌ಗಳು ಶುಕ್ರವಾರ ರಾತ್ರಿಯೇ ಸರಬರಾಜಾಗಲಿದೆ. ಸೋಂಕಿನ ಲಕ್ಷಣಗಳುಳ್ಳವರಿಗೆ ಔಷಧಿ ಕಿಟ್‌, ಮನೆಯಲ್ಲಿರುವ ಸೋಂಕಿತರಿಗೆ ಕೋವಿಡ್‌ ಕಿಟ್‌ ನೀಡಲಾಗುವುದು’ ಎಂದರು.

‘ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಸಾಧ್ಯವಾಗದ ಸುಮಾರು 1 ಸಾವಿರ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಗ್ರಾಮಗಳಲ್ಲಿ ಪಂಚಾಯ್ತಿ ಕಾರ್ಯಪಡೆಗಳ ಮೂಲಕ ಸ್ಥಳೀಯ ಶಾಲೆಗಳನ್ನೇ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಲಾಗಿದ್ದು, ಅಲ್ಲಿಯೇ ಇರಲು ಜಿಲ್ಲಾಡಳಿತದ ವತಿಯಿಂದಲೇ ಊಟ, ವಸತಿ, ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಕುಟುಂಬ ಕಾರ್ಯಪಡೆ ರಚನೆ
‘ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸೋಂಕು ನಿಯಂತ್ರಣಕ್ಕೆ ಗ್ರಾಮ ಕಾರ್ಯಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸಹಕಾರಿಯಾಗಿ ಕುಟುಂಬ ಕಾರ್ಯಪಡೆಗಳನ್ನೂ ರಚಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್‌.ನಂದಿನಿ ತಿಳಿಸಿದರು.

‘ಗ್ರಾಮದ ಪ್ರತಿ 50 ಕುಟುಂಬಗಳ ಸದಸ್ಯರನ್ನು ಸೇರಿಸಿ ಕಾರ್ಯಪಡೆ ರಚಿಸಲಾಗಿದ್ದು, ಕಾರ್ಯಪಡೆಯಲ್ಲಿರುವ ಸದಸ್ಯರೇ ಮನೆಗಳಿಗೆ ಭೇಟಿ ನೀಡಿ ಸೋಂಕಿನ ಲಕ್ಷಣಗಳುಳ್ಳವರ ಪತ್ತೆ ಮಾಡಲಿದ್ದಾರೆ. ಅವರಿಗೂ ಔಷಧಿ ಕಿಟ್‌ ನೀಡಲಾಗುತ್ತಿದೆ’ ಎಂದರು.

‘ಸಂಪೂರ್ಣ ಲಾಕ್‌ಡೌನ್‌ ಅವಧಿಯಲ್ಲಿ ಇದುವರೆಗೆ 948 ವಾಹನಗಳನ್ನು ಜಪ್ತಿ ಮಾಡಲಾಗಿದೆ, 438 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT