ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಶಾಲೆಗೂ ಕಾಂಪೌಂಡ್‌ ಅ.2ರ ಗಡುವು

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಾಗ್ವಾದ
Last Updated 1 ಆಗಸ್ಟ್ 2018, 14:41 IST
ಅಕ್ಷರ ಗಾತ್ರ

ಬಳ್ಳಾರಿ: ‘ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅ.1ರ ಹೊತ್ತಿಗೆ ಶೌಚಾಲಯ, ಕಾಂಪೌಂಡ್‌ ನಿರ್ಮಿಸಿ, ಕೈ ತೋಟಗಳ ನಿರ್ಮಾಣಕ್ಕೆ ಅನುವು ಮಾಡಬೇಕು. ಇಲ್ಲದಿದ್ದರೆ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಮಾನತ್ತಿಗೆ ಶಿಫಾರಸು ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿಯಲ್ಲಿ ಬುಧವಾರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ, ಶಿಕ್ಷಣ ಇಲಾಕೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಜಂಟಿ ಪ್ರಯತ್ನ ನಡೆಸಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಂಪೌಂಡ್ ನಿರ್ಮಿಸಬೇಕು. ತೋಟಗಾರಿಕೆ ಇಲಾಖೆಯು ಕೈತೋಟಗಳನ್ನು ನಿರ್ಮಿಸಬೇಕು’ ಎಂದು ಸೂಚಿಸಿದರು.

ಖಾಲಿ ಹುದ್ದೆಗಳ ಭರ್ತಿ:‘ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ವಿವಿಧ ಹಂತದ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಇರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಜಿಲ್ಲಾ ಖನಿಜ ನಿಧಿ ಅಡಿ ಅದಕ್ಕಾಗಿಯೇ ನಿಧಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಅದನ್ನು ಬಳಸಿ ಎಲ್ಲ ಹುದ್ದೆಗಳನ್ನು ಗೌರವ ಹುದ್ದೆ ಹೆಸರಿನಲ್ಲಿ ಭರ್ತಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕ್ರಿಮಿನಲ್‌ ಮೊಕದ್ದಮೆ–ವರದಿಗೆ ಸೂಚನೆ: `ಅಕ್ರಮವಾಗಿ ವಿದ್ಯುತ್‌ ಬಳಸಿದ ಆರೋಪದ ಮೇಲೆ ಕೂಡ್ಲಿಗಿ ತಾಲ್ಲೂಕಿನ ಧೂಪದಳ್ಳಿ ತಾಂಡಾದ 140 ಮಂದಿ ವಿರುದ್ಧ ಜೆಸ್ಕಾಂ ಜಾಗೃತ ದಳ ಕ್ರಿಮಿನಲ್‌ ಮೊಕದ್ದಮೆ ಹೂಡಿದೆ. ರಾತ್ರಿ ವೇಳೆ ಭೇಟಿ ನೀಡಿದ ಅಧಿಕಾರಿಗಳು ಉಚಿತ ಮನೆ ನೀಡುವುದಾಗಿ ಹೇಳಿ ಹೆಸರು,ಮಾಹಿತಿ ಪಡೆದು ಮೊಕದ್ದಮೆ ದಾಖಲಿಸಿರುವುದು ಅಮಾನವೀಯ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶನಾಯಕ್‌ ಗಮನ ಸೆಳೆದರು.

ಅವರಿಗೆ ಪ್ರತಿಕ್ರಿಯಿಸಿದ ರಾಜೇಂದ್ರ, ಆ ಬಗ್ಗೆ ಆ.14ರೊಳಗೆ ಮಾಹಿತಿ ನೀಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ‘ಪ್ರಕರಣವನ್ನು ಅದಾಲತ್ ಅಡಿ ಬಗೆಹರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು. ಸಾಧ್ಯವಾದರೆ ಬಗೆಹರಿಸಲಾಗುವುದು. ಇಲ್ಲದಿದ್ದಲ್ಲಿ ಜೆಸ್ಕಾಂ ವರದಿ ಮೇರೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ನೈರ್ಮಲ್ಯ ಇಲಾಖೆ ಇ.ಇ.ಗೆ ನೋಟಿಸ್‌: ಕೂಡ್ಲಿಗಿ ತಾಲ್ಲೂಕಿನಲ್ಲಿ ಅನುಷ್ಠಾನದಲ್ಲಿರುವ ಕುಡಿಯುವ ನೀರಿನ ಯೋಜನೆ ಪ್ರಗತಿಯ ಕುರಿತು ಮಾಹಿತಿ ನೀಡಲು ವಿಫಲರಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ದೇವನಾಳ್‌ ಅವರಿಗೆ ನೋಟಿಸ್‌ ನೀಡುವಂತೆ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

‘ಸಮರ್ಪಕ ಮಾಹಿತಿ ನೀಡಲು ಆಗದ ನೀವು ಯಾತಕ್ಕೆ ಎಂಜಿನಿಯರ್‌ ಆಗಿದ್ದೀರಿ’ ಎಂದು ಅಸಮಾಧಾನದಿಂದ ಕೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಂ ವೀರಭದ್ರಪ್ಪ, ‘ನೀರಿನ ಮೂಲ ಯಾವುದು ಎಂದು ತಿಳಿದುಕೊಳ್ಳದೇ ಪೈಪ್‌ಲೈನ್‌ ಅಳವಡಿಸುವ ಎಂಜಿನಿಯರುಗಳಿದ್ದರೆ ನೂರು ವರ್ಷವಾದರೂ ನೀರು ಬರುವುದಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಪ್ರಗತಿ ವರದಿಯನ್ನು ಸಲ್ಲಿಸುವ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ನೀರಿನ ಯೋಜನೆಗಳು ದಡ ಮುಟ್ಟುತ್ತವೆ’ ಎಂದರು.

‘ಸದಸ್ಯರು ಒಪ್ಪಿದರೆ. ಪಾವಗಡ ಯೋಜನೆಯಿಂದ ಪ್ರತ್ಯೇಕಿಸಿ ತಾಲ್ಲೂಕಿಗೆ ಪ್ರತ್ಯೇಕವಾಗಿ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ರಾಜೇಂದ್ರ ಹೇಳಿದರು.

ಪ್ರತಿ ದಿನ 2 ಕೋಟಿ ನಷ್ಟ: ಬಳ್ಳಾರಿ: ‘ಸಿ ಗುಂಪಿನ ಗಣಿಗಳನ್ನು ಇ ಹರಾಜು ಮೂಲಕ ಗುತ್ತಿಗೆ ನೀಡಲಾಗಿದ್ದು, ಮತ್ತೆ ಅಲ್ಲಿ ಗಣಿಗಾರಿಕೆ ನಡೆಸಲು, ಅರಣ್ಯ ಹಕ್ಕು ನಿವಾಸಿಗಳಿಲ್ಲ ಎಂದು ಪಂಚಾಯಿತಿಗಳು ಪ್ರಮಾಣಪತ್ರ ನೀಡಬೇಕು. ನೀಡದೇ ಇರುವುದರಿಂದ ಪ್ರತಿ ದಿನ ರಾಜ್ಯದ ಬೊಕ್ಕಸಕ್ಕೆ ₨ 2 ಕೋಟಿ ನಷ್ಟವಾಗುತ್ತಿದೆ’ ಎಂದು ತಿಳಿಸಿದರು.

‘ಪಂಚಾಯಿತಿ ಸದಸ್ಯರು ಈ ಬಗ್ಗೆ ಗಮನ ಹರಿಸಿ ಗ್ರಾಮಸಭೆಗಳನ್ನು ನಡೆಸಿ ಪ್ರಮಾಣಪತ್ರಗಳನ್ನು ನೀಡಬೇಕು’ ಎಂದರು.

ಕ್ರಿಯಾಯೋಜನೆಗೆ ಒಪ್ಪಿಗೆ:
2018–-19ನೇ ಸಾಲಿನ ಕಾರ್ಯಕ್ರಮಗಳ ವಾರ್ಷಿಕ ಕ್ರಿಯಾಯೋಜನೆಗೆ ಸಭೆ ಒಪ್ಪಿಗೆ ನೀಡಿತು. ಜಿಪಂ ಅಧ್ಯಕ್ಷೆ ಸಿ.ಭಾರತಿ, ಉಪಾಧ್ಯಕ್ಷೆ ಪಿ.ದೀನಾ ಇದ್ದರು.

ಹಾಗೇ ಬಂದು ಹೋದರು:
ಮಧ್ಯಾಹ್ನ 1.30ರ ವೇಳೆಗೆ ಸಭೆಗೆ ಬಂದ ಸಂಡೂರು ಶಾಸಕ ಈ.ತುಕಾರಾಂ, ರಾಜೇಂದ್ರ ಅವರ ಪಕ್ಕ ಕುಳಿತು ಕೆಲ ನಿಮಿಷ ಅವರೊಂದಿಗೆ ಮಾತನಾಡಿ ಎದ್ದು ಹೋದರು. ‘ಅವರು ಯಾರು’ ಎಂದು ಸದಸ್ಯರೊಬ್ಬರು ಸುದ್ದಿಗಾರರನ್ನು ಕೇಳಿದ ಘಟನೆಯೂ ನಡೆಯಿತು!

ಅನುದಾನವಿಲ್ಲ: ಸಭೆಗೆ ಬಹಿಷ್ಕಾರ

ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ದೊರಕುತ್ತಿಲ್ಲ ಎಂದು ದೂರಿ ಸದಸ್ಯರು ಆರಂಭದಲ್ಲೇ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.

‘ಶೇ 89ರಷ್ಟು ಅನುದಾನ ವೇತನ ಮತ್ತು ನಿರ್ವಹಣೆಗೇ ಮೀಸಲಿದೆ. ಉಳಿದ ಶೇ 11 ಅನುದಾನ ಕಟ್ಟಡ, ಸಹಾಯಾನುದಾನಕ್ಕೆ ಮೀಸಲಿದೆ. ಸದಸ್ಯರಿಗೇ ಮೀಸಲಾದ ಅನುದಾನವೇ ಇಲ್ಲ. ಕನಿಷ್ಠ ₨ 1.29 ಕೋಟಿ ಮೀಸಲಿಡಬೇಕು’ ಎಂಬ ಸದಸ್ಯ ಅಲ್ಲಂ ಪ್ರಶಾಂತ ಅವರ ದನಿಗೆ ಬಹುತೇಕ ಸದಸ್ಯರು ಸಹಮತ ಸೂಚಿಸಿದರು.

‘ಈ ಬಗ್ಗೆ ಸಭೆಯಲ್ಲಿ ಚರ್ಚಿಸೋಣ ಎಂದು ಕೆ.ವಿ.ರಾಜೇಂದ್ರ ಸಮಾಧಾನ ಪಡಿಸಿದ ಬಳಿಕ ಸಭೆ ಆರಂಭವಾಯಿತು. ಮುಷ್ಕರದ ಕಾರಣಕ್ಕೆ ಸಭೆ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT