ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಪ್ಲ್ಯಾಂಟೇಷನ್‌ ಆರ್ಥಿಕತೆಯ ಸವಾಲುಗಳು

Last Updated 26 ಮಾರ್ಚ್ 2018, 20:32 IST
ಅಕ್ಷರ ಗಾತ್ರ

ಭರತ್ ಮಂದಣ್ಣ

ದೇಶದಲ್ಲಿ ಕಾಫಿ ಬೆಳೆಯುವ ದಕ್ಷಿಣದ ಎರಡು ಪ್ರಮುಖ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲಿ ಈ ವರ್ಷ ಮೂರು ಲಕ್ಷ ಟನ್‌ಗಿಂತ ಕಡಿಮೆ ಫಸಲು ಬರಲಿದೆ ಎಂದು ಭಾರತೀಯ ಕಾಫಿ ಮಂಡಳಿಯು ಹೊಸದಾಗಿ ಅಂದಾಜಿಸಿದೆ. ಇದು ಈ ಮೊದಲಿನ ಅಂದರೆ, ಹೂ ಬಿಟ್ಟ ನಂತರ ಅಂದಾಜಿಸಲಾಗಿದ್ದ ಕಾಫಿ ಉತ್ಪಾದನೆಯ ಪ್ರಮಾಣ 3.5 ಲಕ್ಷ ಟನ್‌ಗಳಿಗಿಂತ ಕಡಿಮೆ ಇದೆ. ಇದರಲ್ಲಿ 2.47 ಲಕ್ಷ ಟನ್‌ ರೋಬಸ್ಟಾ ಮತ್ತು 1.03 ಲಕ್ಷ ಟನ್‌ ಅರೇಬಿಕಾ ಉತ್ಪನ್ನ ಇರಲಿದೆ ಎಂದು ಕಾಫಿ ಮಂಡಳಿಯು ಅಂದಾಜಿಸಿತ್ತು. ಕರ್ನಾಟಕದ ಪ್ಲ್ಯಾಂಟೇಷನ್‌ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ದೇಶದ ಒಟ್ಟು ಕಾಫಿ ಉತ್ಪಾದನೆಯ ಶೇ 85ರಷ್ಟನ್ನು ಬೆಳೆಯಲಾಗುತ್ತಿದೆ. ಉಳಿದ ಶೇ 15ರಷ್ಟನ್ನು ಕೇರಳದ ವಯನಾಡಿನಲ್ಲಿ ಬೆಳೆಯಲಾಗುತ್ತಿದೆ.

ಕಾಫಿ ಗಿಡಗಳು ನೆರಳಿನ ಆಶ್ರಯದಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ತನ್ನ ನೈಸರ್ಗಿಕ ಪರಿಸರದಲ್ಲಿ ಕಾಫಿ ಫಸಲು ಹುಲುಸಾಗಿ ಬೆಳೆಯುತ್ತವೆ. ಎರಡು ತಿಂಗಳ ಒಣ ಹವೆ ನಂತರ ಮಳೆ ಸುರಿದಾಗ ಕಾಫಿ ಗಿಡದಲ್ಲಿ ವಾರ್ಷಿಕ ಹೂ ಅರಳಲು ಆರಂಭಿಸುತ್ತದೆ. ಆ ನಂತರ ಇದನ್ನು ಸುಸ್ಥಿರವಾಗಿ ಕಾಪಾಡಿಕೊಂಡು ಬರಲು ವಾತಾವರಣದಲ್ಲಿ ಸೂಕ್ತ ಪ್ರಮಾಣದಲ್ಲಿ ತೇವಾಂಶವೂ ಇರಬೇಕಾಗುತ್ತದೆ. ಇಂತಹ ಪೂರಕ ವಾತಾವರಣವು ಮುಂದಿನ ವರ್ಷದ ಫಸಲಿನ ಪ್ರಮಾಣವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಉತ್ತಮ ಕಾಫಿ ಫಸಲು ಪಡೆಯಲು  ಒಂದು ವರ್ಷದಲ್ಲಿ 70 ಇಂಚುಗಳಷ್ಟು ಮಳೆಯಾಗುವುದು ಅಪೇಕ್ಷಣೀಯ. ಕಾಫಿ ಬೀಜ ಮಾಗಿ ಕಟಾವು ಮಾಡಲು ನಿರ್ದಿಷ್ಟ ಅವಧಿಯಲ್ಲಿ ಒಣ ಹವೆಯೂ ಬೇಕಾಗುತ್ತದೆ.  ಆದರೆ, ಹಿಂದಿನ ವರ್ಷ ವಾರ್ಷಿಕ ಸರಾಸರಿ ಮಳೆಯು ಕೆಲವೇ ಕೆಲ ಪ್ರದೇಶಕ್ಕೆ ಸೀಮಿತವಾಗಿತ್ತು. ಹೀಗಾಗಿ ಈ ವರ್ಷ ಕಡಿಮೆ ಫಸಲು ಬರಲಿದೆ ಎಂದು ಅಂದಾಜಿಸಲಾಗಿದೆ.

ಕಾಫಿ ಸಾಗುವಳಿ ಮಾಡಲು ಪ್ರತಿ ಎಕರೆಗೆ ಕನಿಷ್ಠ ಮೂವರು ಕಾರ್ಮಿಕರು ಬೇಕಾಗುತ್ತಾರೆ. ನಿರ್ದಿಷ್ಟಪಡಿಸಿದ ಕಾರ್ಯಗಳನ್ನು ನಿಗದಿಪಡಿಸಿದ ವೇಳಾಪಟ್ಟಿಯಂತೆ ನಿರ್ವಹಿಸಲು ಕಾರ್ಮಿಕರ ಸೇವೆ ಅಗತ್ಯವಾಗಿರುತ್ತದೆ. ತೃಪ್ತಿದಾಯಕ ಮಟ್ಟದಲ್ಲಿ ಮಳೆ ಸುರಿದ ನಂತರ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ರಸಗೊಬ್ಬರ ಬಳಕೆ ಮಾಡಲಾಗುತ್ತದೆ. ಈ ದಿನಗಳಲ್ಲಿ ಕಾಫಿ ಗಿಡವು ಈ ಪೋಷಕಾಂಶಗಳನ್ನು ಹೀರಿಕೊಳ್ಳಲು ಆರಂಭಿಸುತ್ತದೆ. ಈ ಹಂತದಲ್ಲಿ ಅಗತ್ಯ ಪ್ರಮಾಣದಲ್ಲಿ ಕಾರ್ಮಿಕರ ಸೇವೆ ಅಗತ್ಯವಾಗಿರುತ್ತದೆ. ಸಕಾಲದಲ್ಲಿ ಕಾರ್ಮಿಕರು ದೊರೆಯದೆ ಹೋದರೆ ಕಾಫಿ ಗಿಡವು ಸಮ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವುದಿಲ್ಲ. ಇದು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜತೆಗೆ ಉತ್ಪಾದನಾ ವೆಚ್ಚವನ್ನೂ ಹೆಚ್ಚಿಸುತ್ತದೆ.

ಕಾಫಿ ಗಿಡದ ರೆಂಬೆ ಕತ್ತರಿಸುವ ಮತ್ತು ಮರಗಳ ನೆರಳು ನಿರ್ವಹಣೆ ಕೆಲಸಕ್ಕೆ ಪರಿಣತ ಕಾರ್ಮಿಕರೇ ಬೇಕಾಗುತ್ತಾರೆ. ಕುಶಲ ಕಾರ್ಮಿಕರ ಸಂಖ್ಯೆಯು ದಿನೇ ದಿನೇ ಕಡಿಮೆ ಆಗುತ್ತಿರುವುದರಿಂದ ಇಂತಹ ಕೆಲಸಗಳಲ್ಲಿ ಅಗತ್ಯ ಪ್ರಮಾಣದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಹಾರ, ಜಾರ್ಖಂಡ್‌ ಮತ್ತು ಅಸ್ಸಾಂಗಳಿಂದ ಸಾವಿರಾರು ಕೆಲಸಗಾರರು ಕರ್ನಾಟಕ ರಾಜ್ಯಕ್ಕೆ ವಲಸೆ ಬಂದಿರುವುದು ಸ್ಥಳೀಯವಾಗಿ ಪ್ಲ್ಯಾಂಟೇಷನ್‌ ಕಾರ್ಮಿಕರ ತೀವ್ರ ಕೊರತೆ ಇರುವುದಕ್ಕೆ ಕನ್ನಡಿ ಹಿಡಿಯುತ್ತದೆ.

ದಕ್ಷಿಣದ ರಾಜ್ಯಗಳಲ್ಲಿನ ಗರಿಷ್ಠ ಪ್ರಮಾಣದ ಸಾಕ್ಷರತೆ ಮತ್ತು ಆರ್ಥಿಕತೆಯ ವಿವಿಧ ವಲಯಗಳಲ್ಲಿನ ಕೈಗಾರಿಕೀಕರಣದ ಫಲವಾಗಿ ಗ್ರಾಮೀಣ ಭಾಗದ ಜನರು ನಗರಗಳಿಗೆ ವಲಸೆ ಹೋಗುವ ಪ್ರಮಾಣವು ಹೆಚ್ಚಿದೆ. ಇದರಿಂದಾಗಿ ಪ್ಲ್ಯಾಂಟೇಷನ್‌ ಕೆಲಸಕ್ಕೆ ನುರಿತ ಕಾರ್ಮಿಕರು ಸಿಗುವುದೇ ದುಸ್ತರವಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ಪ್ಲ್ಯಾಂಟೇಷನ್‌ ಕಾರ್ಮಿಕರು ಜಿಗಣೆ ಕಡಿತದ ಮಧ್ಯೆಯೇ ಪ್ರಯಾಸದಿಂದ ಕೆಲಸ ಮಾಡಬೇಕಾಗುತ್ತದೆ. ತಮ್ಮ ಮಕ್ಕಳು ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದನ್ನು ನೋಡಲು ಹಳೆಯ ತಲೆಮಾರಿನವರು ಇಷ್ಟಪಡುವುದೂ ಇಲ್ಲ.

ಕಾಫಿ ತೋಟಗಳು ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಕಾಡು ಪ್ರಾಣಿಗಳು ಆಹಾರ ಅರಸಿಕೊಂಡು ಕಾಫಿ ಸಾಗುವಳಿ ಪ್ರದೇಶಕ್ಕೆ ಮೇಲಿಂದ ಮೇಲೆ ದಾಳಿ ಇಡುತ್ತವೆ. ಅರಣ್ಯದಲ್ಲಿ ಹಸಿ ಹುಲ್ಲು ಮತ್ತು ಮೇವು ಸಿಗದೆ ಹೋದಾಗ ಕಾಡಿನ ಪ್ರಾಣಿಗಳು ನಾಡಿಗೆ ನುಗ್ಗುತ್ತವೆ. ಇದರಿಂದ ಅರಣ್ಯದ ಅಂಚಿನ ಪ್ರದೇಶದಲ್ಲಿ ಮಾನವ ಮತ್ತು ಕಾಡು ‍ಪ್ರಾಣಿಗಳ ನಡುವಣ ಸಂಘರ್ಷ ತೀವ್ರಗೊಳ್ಳುತ್ತದೆ. ಚಿರತೆ, ಹುಲಿ ಮತ್ತು ಆನೆಗಳು ಪ್ಲ್ಯಾಂಟೇಷನ್‌ ಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದ ಘಟನೆಗಳೂ ವರದಿಯಾಗುತ್ತಲೇ ಇರುತ್ತವೆ.

ಕಾರ್ಮಿಕರ ಕೊರತೆ ಹೆಚ್ಚುತ್ತಿರುವಂತೆಯೇ ಕಾಫಿ ಸಾಗುವಳಿಯ ಯಾಂತ್ರೀಕರಣವೊಂದೇ ಬೆಳೆಗಾರರ ಮುಂದೆ ಈಗ ಉಳಿದಿರುವ ಏಕೈಕ ಆಯ್ಕೆಯಾಗಿದೆ. ಹಣ್ಣಾದ ಕಾಫಿ ಬೀಜಗಳನ್ನು ಕೀಳಲು ಕಾರ್ಮಿಕರ ಸೇವೆ ಪಡೆಯುವುದಕ್ಕೆ ಒಟ್ಟಾರೆ ವೆಚ್ಚದಲ್ಲಿ ಶೇ 50ರಷ್ಟು ಖರ್ಚಾಗುತ್ತದೆ. ಉಬ್ಬುತಗ್ಗಿನಿಂದ ಕೂಡಿದ ಪ್ರದೇಶದಲ್ಲಿ ಕಾಫಿ ಬೆಳೆಯುವುದರಿಂದ ಯಾಂತ್ರೀಕರಣವೂ ಸವಾಲಿನಿಂದ ಕೂಡಿದೆ. ಹೀಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆ ನಡೆಸಲು ಅವಕಾಶ ಇದೆ.

ಬ್ರೆಜಿಲ್‌ನಲ್ಲಿ ಸಮತಟ್ಟಾದ ಭೂ ಪ್ರದೇಶದಲ್ಲಿ ಕಾಫಿಸಾಗುವಳಿ ಮಾಡುವುದರಿಂದ ಯಾಂತ್ರೀಕರಣ ಅಳವಡಿಕೆ ಅಲ್ಲಿ ಯಶಸ್ವಿಯಾಗಿದೆ. ಕಾರ್ಮಿಕನೊಬ್ಬ ಅಲ್ಲಿ 100 ಎಕರೆಯಲ್ಲಿನ ಕಾಫಿ ಬೆಳೆಯನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಬೆಳೆ ಕಟಾವು ಮಾಡುವುದು ಮತ್ತು ಇತರ ಕಾರ್ಯಾಚರಣೆಗಳಲ್ಲಿ ತಂತ್ರಜ್ಞಾನ ಮೇಳೈಸಿದ ಯಾಂತ್ರೀಕರಣ ವ್ಯವಸ್ಥೆಯನ್ನು ಭಾರತವು ಕಾಫಿ ಫ್ಲ್ಯಾಂಟೇಷನ್‌ನಲ್ಲಿ ಇನ್ನೂ ಅಳವಡಿಸಿಕೊಳ್ಳಬೇಕಾಗಿದೆ.

ಕೆಲ ದಶಕಗಳಿಂದೀಚೆಗೆ ಅರಣ್ಯ ಪ್ರದೇಶವು ಗಮನಾರ್ಹ ಪ್ರಮಾಣದಲ್ಲಿ ನಾಶವಾಗುತ್ತಿರುವುದು ಕಾಫಿ ಸಾಗುವಳಿ ಎದುರಿಸುತ್ತಿರುವ ಇನ್ನೊಂದು ಪ್ರಮುಖ ಸವಾಲಾಗಿದೆ. ಇದರಿಂದ ಪರಿಸರವೂ ನಾಶವಾಗುತ್ತಿದೆ. ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿರುವ ಅರಣ್ಯ ನಾಶದಿಂದಾಗಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಜತೆಗೆ ನೀರಾವರಿಯ ಮೂಲಗಳಾದ ಹಳ್ಳ ಕೊಳ್ಳಗಳೂ ಬತ್ತುತ್ತಿವೆ.

ದೇಶದಲ್ಲಿನ ಕಾಫಿ ಪ್ಲ್ಯಾಂಟೇಷನ್‌, ಪರಿಸರದ ಬೆಂಬಲದಿಂದಾಗಿ ನೈಸರ್ಗಿಕವಾಗಿಯೇ ಸಮೃದ್ಧವಾಗಿದೆ. ನೆರಳಿನ ಆಶ್ರಯದ, ನೈಸರ್ಗಿಕ ಪರಿಸರದಲ್ಲಿ ಬೆಳೆಯುವ ಕಾಫಿ ಕೃಷಿಯು ಸೂರ್ಯನ ಪ್ರಖರ ಬೆಳಕಿನಲ್ಲಿ ಬೆಳೆಯುವ ಕಾಫಿ ಗಿಡಕ್ಕಿಂತ ಹೆಚ್ಚು ಲಾಭದಾಯಕ ಆಗಿರುತ್ತದೆ ಎಂಬುದನ್ನು ಅಮೆರಿಕದ ವಲಸೆ ಹಕ್ಕಿಗಳ ಕೇಂದ್ರದ ಅಧ್ಯಯನವೊಂದು ಖಚಿತಪಡಿಸಿದೆ.

ವಿಭಿನ್ನ ಬಗೆಯ ಹಕ್ಕಿಗಳ ಸಂಖ್ಯೆಯಲ್ಲಿನ ಹೆಚ್ಚಳ, ಮಣ್ಣಿನ ಸಂರಕ್ಷಣೆ, ಮಣ್ಣಿನ ಸವೆತ ನಿಯಂತ್ರಣ, ನೈಸರ್ಗಿಕ ಕೀಟನಾಶಕಗಳ ಬಳಕೆ ಮತ್ತು ಪರಾಗಸ್ಪರ್ಶದಲ್ಲಿನ ಸುಧಾರ
ಣೆಯ ಕಾರಣಕ್ಕೆ ನೈಸರ್ಗಿಕ ಪರಿಸರದಲ್ಲಿನ ಕಾಫಿ ಸಾಗುವಳಿಯು ಹಲವಾರು ಬಗೆಗಳಲ್ಲಿ ಉತ್ತಮವಾಗಿರುತ್ತದೆ. ಕಾಫಿ ಪ್ಲ್ಯಾಂಟೇಷನ್‌, ಪರಿಸರ ಸಂರಕ್ಷಣೆಗೆ ಉತ್ತಮ ಪರ್ಯಾಯವೂ ಆಗಿದೆ. ಇಲ್ಲಿ ಪರಿಸರ ನಾಶಕ್ಕೆ ಯಾವುದೇ ಅವಕಾಶವೇ ಇರುವುದಿಲ್ಲ.

ಕಾಫಿ ಪ್ಲ್ಯಾಂಟೇಷನ್‌ ಆರ್ಥಿಕತೆಯು ದುರ್ಬಲಗೊಂಡಿರುವುದಕ್ಕೆ ಹಲವಾರು ಕಾರಣಗಳಿವೆ. ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಕಾಫಿ ಸಗಟು ಬೆಲೆಯು ವಾಸ್ತವದಲ್ಲಿ ನಿಂತಲ್ಲೇ ನಿಂತುಬಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಇತರ ಕಚ್ಚಾ ಸರಕುಗಳಾದ ರಸಗೊಬ್ಬರ, ಕಾರ್ಮಿಕರ ವೇತನ, ಕೀಟನಾಶಕ ಮತ್ತು ಇಂಧನ ಬೆಲೆಗಳು ಏರುಗತಿಯಲ್ಲಿ ಇವೆ. 2007ನೇ ವರ್ಷವನ್ನು ಆಧಾರವಾಗಿ ಪರಿಗಣಿಸಿದರೆ, ಕಳೆದ 10 ವರ್ಷಗಳಲ್ಲಿ ರೋಬಸ್ಟಾ ಕಾಫಿಯ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಯು ಶೇ 1.75ರಷ್ಟು ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ, ಸಾಗುವಳಿ ವೆಚ್ಚವು ಎರಡೂವರೆ ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ಕಾಫಿ ಪ್ಲ್ಯಾಂಟೇಷನ್‌ಗಳ ಲಾಭದ ಪ್ರಮಾಣವು ಶೇ 33ರಷ್ಟು ಕಡಿಮೆಯಾಗಿದೆ.

ಕಡಿಮೆ ಲಾಭದ ಪರಿಣಾಮವಾಗಿ ಹಳೆಯ ಗಿಡಗಳ ಬದಲಾವಣೆ, ನೀರಾವರಿ ಮತ್ತಿತರ ಮೂಲ ಸೌಕರ್ಯಗಳಲ್ಲಿ ಬೆಳೆಗಾರರು ತೊಡಗಿಸುವ ಹಣದ ಪ್ರಮಾಣವೂ ಕಡಿಮೆಯಾಗಿದೆ. ಇದು ಪ್ಲ್ಯಾಂಟೇಷನ್‌ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾಫಿ ಸಾಗುವಳಿ ತಂದೊಡ್ಡಿದ ನಷ್ಟದ ಕಾರಣಕ್ಕೆ ಕಾಫಿ ಬೆಳೆಗಾರರು ಈಗ ಇತರ ವರಮಾನ ಮೂಲಗಳತ್ತ ಗಮನ ಕೇಂದ್ರೀಕರಿಸಿದ್ದಾರೆ.

ಕಾಫಿ ಪ್ಲ್ಯಾಂಟರ್‌ಗಳು ಇತರ ವರಮಾನದ ಮೂಲಗಳತ್ತ ಗಮನ ಹರಿಸಿರುವುದರಲ್ಲಿ ಕಾಫಿ ಪ್ರವಾಸೋದ್ಯಮ ಹೆಸರಿನಲ್ಲಿ ಆರಂಭಿಸಿರುವ ‘ಹೋಮ್‌ ಸ್ಟೇ’ ಪರಿಕಲ್ಪನೆ ಹೆಚ್ಚು ಜನಪ್ರಿಯವಾಗಿದೆ. ಒಂದೇ ಬೆಳೆಯ ಮೇಲಿನ ಅವಲಂಬನೆ ತಪ್ಪಿಸಲು ಪ್ಲ್ಯಾಂಟೇಷನ್‌ ಬೆಳೆಯಾಗಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಕಳೆದ ವರ್ಷದವರೆಗೆ ಕಾಳುಮೆಣಸು ಕೂಡ ಕಾಫಿ ಬೆಳೆಗಾರರಿಗೆ ಲಾಭ ತಂದುಕೊಟ್ಟಿತ್ತು. ಕಳೆದ ಫೆಬ್ರುವರಿಯಿಂದ ಮೆಣಸಿನ ಬೆಲೆ ಕುಸಿಯುತ್ತಿರುವುದರಿಂದ ಪ್ಲ್ಯಾಂಟೇಷನ್‌ ಆರ್ಥಿಕತೆ ಮೇಲೆ ತೀವ್ರ ಸ್ವರೂಪದ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಅಪಾಯಕಾರಿಯಾಗಿ ಪರಿಣಮಿಸಿರುವ ಹವಾಮಾನ ಬದಲಾವಣೆ, ಕಾರ್ಮಿಕರ ಕೊರತೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಕರೆನ್ಸಿ ವಿನಿಮಯ ದರಗಳಲ್ಲಿನ ವ್ಯಾಪಕ ಏರಿಳಿತಗಳ ಹೊರತಾಗಿಯೂ ಕಾಫಿ ಸಾಗುವಳಿಯನ್ನು ನಿರ್ವಹಿಸಿಕೊಂಡು ಬರಲಾಗುತ್ತಿದೆ. ಅಗತ್ಯವಾದ ಹಣಕಾಸಿನ ಬೆಂಬಲದ ನೆರವಿನಿಂದ ಕಾರ್ಪೊರೇಟ್‌ ಪ್ಲ್ಯಾಂಟೇಷನ್‌ ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ.

ಆದರೆ, ಬಹುಸಂಖ್ಯಾತ ಸಣ್ಣ ಬೆಳೆಗಾರರ ಒಡೆತನದಲ್ಲಿ ಇರುವ ಪ್ಲ್ಯಾಂಟೇಷನ್‌ಗಳು ನಗದು ಹರಿವಿನ ಸಮಸ್ಯೆ ಎದುರಿಸುತ್ತಿವೆ. ಹಣದ ಮುಗ್ಗಟ್ಟಿನಿಂದಾಗಿ ಸಕಾಲಕ್ಕೆ ಸಾಗುವಳಿ ಕಾರ್ಯಾಚರಣೆ ನಡೆಸಲು ಮತ್ತು ಗರಿಷ್ಠ ಪ್ರಮಾಣದ ಫಸಲು ಪಡೆಯಲು ಅವರಿಂದ ಸಾಧ್ಯವಾಗುತ್ತಿಲ್ಲ.

ಪ್ಲ್ಯಾಂಟೇಷನ್‌ ಲಾಭದಾಯಕವಾಗಿರಲು ಬೆಳೆಗಾರರು ಒಣ ಚೆರ‍್ರಿಗಳನ್ನು ಮಾರಾಟ ಮಾಡಲು ಅವಸರ ಮಾಡಬಾರದು. ಹೆಚ್ಚಿನ ಲಾಭ ತರುವ ರೀತಿಯಲ್ಲಿ ಅವುಗಳನ್ನು ಸಂಸ್ಕರಿಸಬೇಕು. ಪ್ಲ್ಯಾಂಟೇಷನ್‌ದಾರರ ಫಸಲಿನ ಗುಣಮಟ್ಟ ಹೆಚ್ಚಿಸಲು ಶ್ರೇಷ್ಠ ದರ್ಜೆಯ ಸಂಸ್ಕರಣಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಭಾರತದ ಕಾಫಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಪಡಬೇಕು.

ಕಾಫಿ ಬೆಳೆಗಾರರು ಉತ್ತಮ ಬೆಲೆ ಮತ್ತು ಗರಿಷ್ಠ ಲಾಭಮಾಡಿಕೊಳ್ಳಲು ಕಾಫಿಯ ಮೌಲ್ಯವರ್ಧನೆಗೆ ಅವಕಾಶ ಮಾಡಿಕೊಡಲು ಆದಾಯ ತೆರಿಗೆ ನಿಯಮ 1962ರಲ್ಲಿನ
7ಬಿ ನಿಯಮವನ್ನು ರದ್ದು ಮಾಡಬೇಕು. ದೇಶಿ ಕಾಫಿ ಪ್ಲ್ಯಾಂಟೇಷನ್‌ ವಲಯಕ್ಕೆ ಹಲವು ಬಗೆಗಳಲ್ಲಿ ಬೆಂಬಲ ದೊರೆಯಬೇಕಾಗಿದೆ. ಜಾಗತಿಕ ಕರೆನ್ಸಿ ಏರಿಳಿತದಂತಹ ಸವಾಲುಗಳನ್ನು ಸಣ್ಣ ಬೆಳೆಗಾರರು ಸಮರ್ಥವಾಗಿ ಎದುರಿಸಬೇಕು ಎಂದು ನಿರೀಕ್ಷಿಸುವುದು ಸರಿಯಾಗಲಾರದು.

ಈ ಎಲ್ಲ ಕಾರಣಗಳಿಗಾಗಿ, ಇಂತಹ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಉದಾರ ರೀತಿಯಲ್ಲಿ ಸಬ್ಸಿಡಿ ಕೊಡುಗೆಗಳನ್ನು ನೀಡಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಫಿ ಮಂಡಳಿಯು ಸಕಾಲದಲ್ಲಿ ಸಬ್ಸಿಡಿ ಬಿಡುಗಡೆ ಮಾಡಬೇಕಾಗಿದೆ. ಇದರಿಂದ ಬೆಳೆಗಾರರು ಮೂಲ ಸೌಕರ್ಯಗಳಲ್ಲಿ ಹಣ ತೊಡಗಿಸಲು, ಜಾಗತಿಕ ಸ್ಪರ್ಧಾತ್ಮಕ ಮಟ್ಟದಲ್ಲಿ ಯಾಂತ್ರೀಕರಣ ಅಳವಡಿಸಿಕೊಳ್ಳಲು ಮತ್ತು ಹವಾಮಾನ ಬದಲಾವಣೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ.

ಲೇಖಕ: ಕೊಡಗಿನ ಬಾಂಬೆ ಬರ್ಮಾ ಟ್ರೇಡಿಂಗ್ ಕಾರ್ಪೊರೇಷನ್‌ ಮಾಜಿ ಉಪಾಧ್ಯಕ್ಷ ಮತ್ತು ಪ್ಲ್ಯಾಂಟೇಷನ್‌ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT