ವೀರಶೈವರ ಓಲೈಕೆಗೆ ಕಸರತ್ತು

ಶನಿವಾರ, ಏಪ್ರಿಲ್ 20, 2019
31 °C
ಧರ್ಮ ವಿಭಜನೆ ತಪ್ಪೊಪ್ಪಿಗೆ; ವೀರಶೈವ–ಲಿಂಗಾಯತ ಮುಖಂಡರಿಂದ ಭಿನ್ನ ಹೇಳಿಕೆ

ವೀರಶೈವರ ಓಲೈಕೆಗೆ ಕಸರತ್ತು

Published:
Updated:

ಹೊಸಪೇಟೆ: ಲೋಕಸಭೆ ಉಪಚುನಾವಣೆಯ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಮೌನ ವಹಿಸಿದ್ದ ಕಾಂಗ್ರೆಸ್‌ ಮುಖಂಡರು, ಸಾರ್ವತ್ರಿಕ ಚುನಾವಣೆಯಲ್ಲಿ ಆ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ.

‘ಧರ್ಮ ವಿಭಜನೆಗೆ ಭವಿಷ್ಯದಲ್ಲಿ ಇನ್ನೆಂದೂ ಕೈ ಹಾಕುವುದಿಲ್ಲ. ಅದು ನಮ್ಮಿಂದಾದ ದೊಡ್ಡ ಪ್ರಮಾದ’ ಎಂದು ಬಹಿರಂಗ ಪ್ರಚಾರ ಸಭೆಗಳಲ್ಲಿ ತಪ್ಪೊಪ್ಪಿಗೆ ಹೇಳಿಕೆ ಕೊಡುವ ಮೂಲಕ ವೀರಶೈವರ ಮನಗೆಲ್ಲಲು ಮುಂದಾಗಿದ್ದಾರೆ.

ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ವಿಷಯ ಪ್ರಸ್ತಾಪಿಸಿ, ‘ಧರ್ಮದಲ್ಲಿ ರಾಜಕೀಯ ಇರಬೇಕು. ರಾಜಕಾರಣದಲ್ಲಿ ಧರ್ಮದ ವಿಚಾರವನ್ನು ತರಬಾರದು ಎಂಬ ಅರಿವು ಈಗ ಬಂದಿದೆ. ಇನ್ನು ಮುಂದೆ ಧರ್ಮ ವಿಭಜನೆಯ ತಪ್ಪುಗಳಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಹೇಳಿದ್ದರು. ಪಕ್ಷದ ಇತರೆ ಮುಖಂಡರು ಕೂಡ ಇದೇ ವಿಷಯದ ಕುರಿತು ಮಾತುಗಳನ್ನು ಆಡುತ್ತಿದ್ದಾರೆ.

‘ಕಾಂಗ್ರೆಸ್‌ ಪಕ್ಷವು ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ವೀರಶೈವ ಮತ್ತು ಲಿಂಗಾಯತರ ಮನಸ್ಸಿನಲ್ಲೇನಿದೆ ಎಂಬುದನ್ನು ಅರಿಯದೇ ಕೈಗೊಂಡ ಈ ನಿರ್ಧಾರದಿಂದ ಕಾಂಗ್ರೆಸ್ಸಿಗೆ ಸಮಾಜದವರು ಒಳ್ಳೆಯ ಪಾಠ ಕಲಿಸಿದರು’ ಎಂದು ಬಿಜೆಪಿ ಮುಖಂಡರು ಹೇಳುತ್ತಲೇ ಬಂದಿದ್ದಾರೆ. ಈ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಇದೀಗ ಕಾಂಗ್ರೆಸ್‌ ಮುಖಂಡರು ಮುಂದಾಗಿದ್ದಾರೆ. ಈ ಕಾರಣಕ್ಕಾಗಿಯೇ ಸಚಿವ ಶಿವಕುಮಾರ ಸೇರಿದಂತೆ ಇತರೆ ಮುಖಂಡರು, ತಪ್ಪಾಗಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಡುವ ಮೂಲಕ ವೀರಶೈವರ ಮನಗೆದ್ದು, ಅವುಗಳು ಮತಗಳಾಗಿ ಬದಲಾಗುವಂತೆ ನೋಡಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಇದು ಫಲಿಸುವುದಿಲ್ಲ ಎನ್ನುತ್ತಾರೆ ಅಖಿಲ ಭಾರತ ವೀರಶೈವ ಮಹಾಸಭೆ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ.

‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ಪಕ್ಷ ಧರ್ಮ ವಿಭಜನೆ ಮಾಡಿತು. ತಡವಾಗಿಯಾದರೂ ಅದಕ್ಕೆ ತಪ್ಪಿನ ಅರಿವಾಗಿದೆ. ಆದರೆ, ಮುನಿಸಿಕೊಂಡಿರುವ ವೀರಶೈವರ ಮನಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ರಾಜ್ಯದಲ್ಲಿ ವೀರಶೈವರು ಗಟ್ಟಿಯಾಗಿ ಬಿಜೆಪಿ ಜತೆಗೆ ನಿಂತಿದ್ದಾರೆ’ ಎಂದು ಸಿದ್ದಯ್ಯ ಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹನ್ನೆರಡನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಪಡೆಯಲು ಹೋರಾಟ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಲಿಂಗಾಯತರ ಅಸ್ಮಿತೆಗಾಗಿ ನಡೆಯುತ್ತಿರುವ ಹೋರಾಟವಿದು. ಚುನಾವಣೆ ಸಂದರ್ಭದಲ್ಲಿ ಸಚಿವ ಡಿ.ಕೆ. ಶಿವಕುಮಾರ ಅವರು ಈ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸಿ, ಸಮಾಜದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ನಿಜವಾದ ಕಾಳಜಿಯಿದ್ದರೆ ಒಕ್ಕಲಿಗರನ್ನು ಒಟ್ಟುಗೂಡಿಸಲಿ’ ಎಂದು ಲಿಂಗಾಯತ ಸಮಾಜದ ಮುಖಂಡ ನಂದೀಶ್ವರ ದಂಡೆ ಪ್ರತಿಕ್ರಿಯಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !