ಸೋಮವಾರ, ಡಿಸೆಂಬರ್ 9, 2019
21 °C
ಹೊಸಪೇಟೆ ನಗರಸಭೆಗೆ 248, ಕಮಲಾಪುರ ಪಟ್ಟಣ ಪಂಚಾಯಿತಿಗೆ 70 ಆಕಾಂಕ್ಷಿಗಳು

ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ಯಾವುದೇ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಘೋಷಣೆ ಆಗಲಿರುವುದರಿಂದ ಕಾಂಗ್ರೆಸ್‌ ಭರ್ಜರಿ ಸಿದ್ಧತೆ ನಡೆಸಿದೆ.

ಇಲ್ಲಿನ ನಗರಸಭೆಯ 35 ವಾರ್ಡ್‌ ಹಾಗೂ ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತು ಆರಂಭಿಸಿದೆ. ನಗರಸಭೆಯ 35 ವಾರ್ಡ್‌ಗಳಿಗೆ 248 ಜನ ಆಕಾಂಕ್ಷಿಗಳು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದರೆ, ಕಮಲಾಪುರ ಪಂಚಾಯಿತಿಯ 20 ವಾರ್ಡ್‌ಗಳಿಗೆ 70 ಜನ ಅರ್ಜಿ ಸಲ್ಲಿಸಿದ್ದಾರೆ.

ಟಿಕೆಟ್‌ ಅಂತಿಮಗೊಳಿಸಲು ಸ್ಥಳೀಯ ಶಾಸಕರು, ಪಕ್ಷದ ಜಿಲ್ಲಾ ಅಧ್ಯಕ್ಷ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಹಿರಿಯ ಮುಖಂಡರನ್ನು ಒಳಗೊಂಡ 45 ಜನರ ಆಯ್ಕೆ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಪ್ರತಿ ವಾರ್ಡ್‌ಗೆ ಒಬ್ಬ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ.

ಸತತ ಗೆಲುವಿನಿಂದ ಆಕಾಂಕ್ಷಿಗಳು ಹೆಚ್ಚು:

ವಿಧಾನಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌, ಇತ್ತೀಚೆಗೆ ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ಜಯ ಸಾಧಿಸಿತು. ನವೆಂಬರ್‌ನಲ್ಲಿ ನಡೆದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ವಿ.ಎಸ್‌. ಉಗ್ರಪ್ಪ ಗೆಲ್ಲುವುದರೊಂದಿಗೆ ಪಕ್ಷದ ಶಕ್ತಿ ಮತ್ತಷ್ಟು ವೃದ್ಧಿಸಿದೆ. ಮೂರೂ ಚುನಾವಣೆಗಳಲ್ಲಿ ಜನ ದೊಡ್ಡ ಮಟ್ಟದಲ್ಲಿ ಪಕ್ಷವನ್ನು ಬೆಂಬಲಿಸಿರುವುದರಿಂದ ಸಹಜವಾಗಿಯೇ ಸ್ಥಳೀಯ ಸಂಸ್ಥೆಗಳಿಗೆ ಆಕಾಂಕ್ಷಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಈ ವಿಷಯವನ್ನು ಸ್ವತಃ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್‌ ರಾಮಕೃಷ್ಣ ಒಪ್ಪಿಕೊಳ್ಳುತ್ತಾರೆ.

‘ಲೋಕಸಭೆ ಉಪಚುನಾವಣೆಗೆ ಮುನ್ನ ಎರಡೂ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲು ಪಟ್ಟಿ ಅಂತಿಮಗೊಂಡಿತ್ತು. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರು ಒಲವು ವ್ಯಕ್ತಪಡಿಸಿದ್ದರೋ ಅವರಿಗೆ ಉಪಚುನಾವಣೆಯಲ್ಲಿ ಆಯಾ ವಾರ್ಡ್‌ನಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ವಹಿಸಲಾಗಿತ್ತು. ಜತೆಗೆ ಕಾಂಗ್ರೆಸ್‌ನ ‘ಶಕ್ತಿ’ ಕಾರ್ಯಕ್ರಮದ ಹೊಣೆಗಾರಿಕೆ ವಹಿಸಲಾಗಿತ್ತು. ಯಾರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೋ ಟಿಕೆಟ್‌ ಹಂಚಿಕೆಯಲ್ಲಿ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

‘ಈ ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ಶಾಸಕರಿರಲಿಲ್ಲ. ಅದಾಗಿಯೂ ಪಕ್ಷ ಎರಡೂ ಕಡೆ ಅಧಿಕಾರಕ್ಕೆ ಬಂದಿತ್ತು. ಈಗ ಶಾಸಕ ಆನಂದ್‌ ಸಿಂಗ್‌ ಕಾಂಗ್ರೆಸ್‌ನಲ್ಲಿ ಇರುವುದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಎಲ್ಲೆಡೆ ಸೂಕ್ತ ಅಭ್ಯರ್ಥಿಗಳನ್ನು ಹಾಕಿ, ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಹೀಗಾಗಿ ಪುನಃ ಅಧಿಕಾರಕ್ಕೆ ಬರುವುದು ಖಚಿತ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)