ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಕೇಳಿಸಿದ್ದು, ಕಾಣಿಸಿದ್ದು.....

Last Updated 29 ನವೆಂಬರ್ 2019, 10:39 IST
ಅಕ್ಷರ ಗಾತ್ರ

‘ನಾನು ಈ ಊರಿನ ಅಳಿಯ..’

‘ನಾನು ಈ ಊರಿನ ಅಳಿಯ. ನನಗೆ ಸ್ವಲ್ಪ ಮಾತನಾಡಲು ಬಿಡಪ್ಪ..’ ಹೀಗೆ ಮನವಿ ಮಾಡಿದವರು ಶಾಸಕ ಈ. ತುಕಾರಾಂ.

ಗುರುವಾರ ಸಂಜೆ ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡುವಾಗ ಕಾರ್ಯಕ್ರಮದ ನಿರೂಪಕರು, ‘ಸರ್‌, ಮುಗಿಸಿ’ ಎಂದರು. ಅದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು. ‘ನಾನು ಸಂಡೂರು ತಾಲ್ಲೂಕಿನ ಯಶವಂತನಗರದ ಮಗನಾದರೆ, ಕಮಲಾಪುರದ ಅಳಿಯ. ನನಗೆ ಸಿದ್ದರಾಮಯ್ಯನವರು ಮಾವನ ಸಮಾನ. ಅವರ ಎದುರು ಸ್ವಲ್ಪ ಮಾತನಾಡಲು ಬಿಡಿ’ ಎಂದು ನಸುನಕ್ಕರು. ಅದನ್ನು ಕೇಳಿ ಜನ ಕೇಕೆ ಹಾಕಿದರು.

‘ಶಾಸಕರು ಸತ್ತಾಗ ಉಪಚುನಾವಣೆ’

‘ಯಾರಾದರೂ ಶಾಸಕರು ಸತ್ತರೆ ಮಾತ್ರ ಉಪಚುನಾವಣೆ ನಡೆಯುತ್ತದೆ. ಆದರೆ, ವಿಜಯನಗರ ಕ್ಷೇತ್ರದ ಹಿಂದಿನ ಶಾಸಕರಿಗೆ ಏನು ಕೂಡ ಆಗದಿದ್ದರೂ ಉಪಚುನಾವಣೆ ನೋಡುವಂತಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್‌. ಆಂಜನೇಯ ವ್ಯಂಗ್ಯವಾಡಿದರು.

‘ಸ್ವಾರ್ಥಕ್ಕಾಗಿ ಆನಂದ್‌ ಸಿಂಗ್‌ ರಾಜೀನಾಮೆ ಕೊಟ್ಟಿದ್ದಾರೆ. ಪಕ್ಷಾಂತರ ಕೂಡ ಮಾಡಿದ್ದಾರೆ. ಅಂತಹವರಿಗೆ ಸೂಕ್ತ ಪಾಠ ಕಲಿಸಿ ಮನೆಗೆ ಕಳುಹಿಸಬೇಕು’ ಎಂದು ಕೋರಿದರು.

ಆಂಬ್ಯುಲೆನ್ಸ್‌ಗೆ ದಾರಿಮಾಡಿದ ಸಿದ್ದರಾಮಯ್ಯ

ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿಯಲ್ಲಿ ಸಿದ್ದರಾಮಯ್ಯನವರು ರೋಡ್‌ ಶೋ ಮಾಡುವಾಗ, ಆಂಬ್ಯುಲೆನ್ಸ್‌ ಜನರ ಮಧ್ಯೆ ನಿಂತಿತ್ತು. ಅದನ್ನು ಗಮನಿಸಿದ ಅವರು, ‘ಕಾರ್ಯಕರ್ತರು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಬೇಕು’ ಎಂದು ಸೂಚಿಸಿದರು. ಆಗ ಆಂಬ್ಯುಲೆನ್ಸ್‌ ಸುಗಮವಾಗಿ ಹೋಯಿತು. ಅದಾದ ಕೆಲವೇ ನಿಮಿಷಗಳ ನಂತರ ಮತ್ತೊಂದು ಆಂಬ್ಯುಲೆನ್ಸ್‌ ಬಂತು, ಆಗಲೂ ಕಾರ್ಯಕರ್ತರು ಅದಕ್ಕೆ ದಾರಿ ಮಾಡಿಕೊಟ್ಟರು.

‘ಗಣೇಶ್‌–ಭೀಮಾ ಕಾಂಗ್ರೆಸ್‌ ಜೋಡೆತ್ತುಗಳು’

‘ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಕಾಂಗ್ರೆಸ್ಸಿನ ಜೋಡೆತ್ತುಗಳು’ ಎಂದು ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ಬಸವರಾಜ ರಾಯರಡ್ಡಿ ಹೇಳಿದರು. ಅದಕ್ಕೆ ಸಭಿಕರು ಶಿಳ್ಳೆ ಹೊಡೆದು, ಕೇಕೆ ಹಾಕಿದರು.

‘ಆನಂದ್‌ ಸಿಂಗ್‌ ಭೇದಿ ಶುರುವಾಗುತ್ತೆ’

‘ಇಂದಿನ ಕಾಂಗ್ರೆಸ್‌ ಪ್ರಚಾರ ಸಭೆಗೆ ಸೇರಿರುವ ಜನಸ್ತೋಮ ನೋಡಿ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರಿಗೆ ಭೇದಿ ಶುರುವಾಗುತ್ತೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಹೇಳಿದರು.

ಹೊಸಪೇಟೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ನಾಮಪತ್ರ ಸಲ್ಲಿಸುವ ವೇಳೆ ಆನಂದ್‌ ಸಿಂಗ್‌ ಅವರ ಅಪ್ಪನ ಮೀಸೆ ತಿರುವಿ, ಜನರಿಗೆ ಅಪಮಾನ ಮಾಡಿದ್ದಾರೆ. ಅಹಂ ತೋರಿಸಿದ್ದಾರೆ’ ಎಂದು ಟೀಕಿಸಿದರು.

ಹೊಸಕೋಟೆ, ಹೊಸಪೇಟೆ ಗೊಂದಲ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗುರುವಾರ ಸಂಜೆ ನಗರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡುವಾಗ, ಹೊಸಪೇಟೆ ಬದಲು ಹೊಸಕೋಟೆ ಎಂದರು. ಬಳಿಕ ಸಾವರಿಸಿಕೊಂಡರು.
ಇತ್ತೀಚೆಗೆ ಕಮಲಾಪುರದಲ್ಲಿ ಬಿಜೆಪಿ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇದೇ ರೀತಿ ಹೇಳಿದ್ದರು.

ಟಿಪ್ಪು ಹೆಸರೇಳುತ್ತಲೇ ಕೇಕೆ, ಶಿಳ್ಳೆ

ಸಿದ್ದರಾಮಯ್ಯನವರು ಹೊಸಪೇಟೆ, ಕಮಲಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತ, ‘ಟಿಪ್ಪು ಜಯಂತಿ ರದ್ದುಪಡಿಸಿ ಬಿಜೆಪಿಯವರು ತಾವು ಮತಾಂಧರು ಎನ್ನುವುದನ್ನು ಸಾಬೀತು ಮಾಡಿದ್ದಾರೆ’ ಎನ್ನುತ್ತಲೇ ಜನ ಶಿಳ್ಳೆ, ಕೇಕೆ ಹಾಕಿ ಚಪ್ಪಾಳೆ ಹಾಕಿದರು.

‘ಹಿಂದೆ ಬಿ.ಎಸ್‌. ಯಡಿಯೂರಪ್ಪ ಕೆ.ಜೆ.ಪಿ. ಪಕ್ಷ ಕಟ್ಟಿದ್ದಾಗ ಟಿಪ್ಪುವಿನಂತೆ ಪೇಟ ಧರಿಸಿ, ಖಡ್ಗ ಹಿಡಿದು, ಪಕ್ಷದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ನಿಲ್ಲಿಸಿಕೊಂಡು, ಟಿಪ್ಪು ಒಬ್ಬ ದೇಶಭಕ್ತ, ಪರಾಕ್ರಮಿ ಎಂದು ಹೊಗಳಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಟಿಪ್ಪು ಮತಾಂಧ ಎನ್ನುತ್ತಿದ್ದಾರೆ. ಈ ಬಿಜೆಪಿಯವರಿಗೆ ಎರಡೆರಡೂ ನಾಲಿಗೆ ಇದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT