ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಪಂಚಾಯಿತಿ: ಕಮಲಾಪುರ, ಹಡಗಲಿಯಲ್ಲಿ ಕಾಂಗ್ರೆಸ್‌ ಜಯಭೇರಿ

Last Updated 31 ಮೇ 2019, 9:40 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ.

ಒಟ್ಟು 20 ವಾರ್ಡ್‌ಗಳಿಗೆ ಇದೇ 29ರಂದು ಚುನಾವಣೆ ನಡೆದಿತ್ತು. ಕಾಂಗ್ರೆಸ್‌ 14 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಗೆಲುವಿನೊಂದಿಗೆ ಕಾಂಗ್ರೆಸ್‌ ಸತತ ಮೂರನೇ ಬಾರಿಗೆ ಆಡಳಿತಕ್ಕೆ ಬರುತ್ತಿದೆ.

18 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ ಒಂದು ಕ್ಷೇತ್ರದಲ್ಲಷ್ಟೇ ಜಯ ಸಾಧಿಸಿದೆ. ಪಕ್ಷೇತರರು ಐದು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವುದು ವಿಶೇಷ. ಚುನಾವಣೆಗೆ ಒಟ್ಟು 85 ಜನ ಸ್ಪರ್ಧಿಸಿದ್ದರು.

ಒಂದೂವರೆ ಗಂಟೆಯಲ್ಲಿ ಫಲಿತಾಂಶ:

ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡ ಮತ ಎಣಿಕೆ ಕೆಲಸ ಒಂದೂವರೆ ತಾಸಿನಲ್ಲಿ ಪೂರ್ಣಗೊಂಡಿತು. ಹನ್ನೊಂದನೇ ವಾರ್ಡಿನ ಫಲಿತಾಂಶ ಮೊದಲಿಗೆ ಹೊರಬಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಗೌಸಿಯಾ ಬೇಗಂ ಗೆಲುವಿನ ನಗೆ ಬೀರುವುದರೊಂದಿಗೆ ಮತ ಎಣಿಕೆ ಕೇಂದ್ರದಿಂದ ಹೊರಬಂದರು.

ಈ ವಿಷಯ ತಿಳಿದು ಕಾಂಗ್ರೆಸ್‌ ಕಾರ್ಯಕರ್ತರು ಗೆಲುವಿನ ಕೇಕೆ ಹಾಕಿದರು. ಶಿಳ್ಳೆ ಹೊಡೆದು ಸಂಭ್ರಮಿಸಿದರು. ಇದಾದ ಬಳಿಕ ಒಂದೊಂದೇ ವಾರ್ಡಿನ ಫಲಿತಾಂಶ ಹೊರಬಂತು. ಕಾಂಗ್ರೆಸ್‌ ಒಂದಾದ ಮೇಲೊಂದರಂತೆ ಜಯ ಸಾಧಿಸುತ್ತ ಬಹುಮತದ ಕಡೆಗೆ ಹೆಜ್ಜೆ ಇರಿಸಿತು. 9.30ಕ್ಕೆ ಇಪ್ಪತ್ತನೇ ವಾರ್ಡಿನ ಫಲಿತಾಂಶ ಘೋಷಿಸುವುದರೊಂದಿಗೆ ಮತ ಎಣಿಕೆ ಕಾರ್ಯಕ್ಕೆ ತೆರೆ ಬಿತ್ತು.

ಹೂವಿನಹಡಗಲಿ ವರದಿ:

ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದಿದೆ.
ಪಟ್ಟಣದ 23 ವಾರ್ಡ್‌ಗಳ ಪೈಕಿ 14ರಲ್ಲಿ ಕಾಂಗ್ರೆಸ್‌, 9 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

19ನೇ ವಾರ್ಡಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ 22 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.
ಕಾಂಗ್ರೆಸ್ ಪಕ್ಷ ಕಳೆದ ಬಾರಿ ಗೆದ್ದಿದ್ದ 14 ಸ್ಥಾನಗಳನ್ನು ಈ ಬಾರಿಯೂ ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಂಡಿದೆ. ಹಿಂದಿನ ಬಾರಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 9ರಲ್ಲಿ ಗೆಲುವು ಸಾಧಿಸಿದೆ. ಹಿಂದೆ 2 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ ಈ ಬಾರಿ ಖಾತೆ ತೆರೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT