ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ಪಟ್ಟಣ ಪಂಚಾಯಿತಿ: ‘ಕೈ’ ಕೋಟೆ ಮತ್ತಷ್ಟು ಸುಭದ್ರ

ಸೇನಾಧಿಪತಿಯಿಲ್ಲದೆ ಯುದ್ಧ ಗೆದ್ದ ಕಾಂಗ್ರೆಸ್‌; ಬಿಜೆಪಿಗೆ ಭಾರಿ ಮುಖಭಂಗ
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಕಾಂಗ್ರೆಸ್‌ ವಶವಾಗಿದ್ದು, ‘ಕೈ’ ಕೋಟೆ ಮತ್ತಷ್ಟು ಸುಭದ್ರವಾಗಿದೆ.

ಈ ಹಿಂದಿನ ಎರಡು ಚುನಾವಣೆಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಸತತ ಮೂರನೇ ಬಾರಿಗೆ ಗೆಲ್ಲುವುದರೊಂದಿಗೆ ‘ಹ್ಯಾಟ್ರಿಕ್‌’ ಸಾಧನೆ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್‌ ಪಾಳೆಯದಲ್ಲಿ ನಿರಾಶೆ ಮೂಡಿತ್ತು. ಚುನಾವಣೆಯಲ್ಲಿ ಸೋಲುಂಡ ಬಳಿಕ ವಿ.ಎಸ್‌. ಉಗ್ರಪ್ಪ ಸೇರಿದಂತೆ ಪಕ್ಷದ ಇತರೆ ಮುಖಂಡರು ಕಮಲಾಪುರದತ್ತ ಸುಳಿದಿರಲಿಲ್ಲ.

ಪಕ್ಷವನ್ನು ಪ್ರತಿನಿಧಿಸುವ ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಒಮ್ಮೆಯೂ ಪಕ್ಷದ ಪರ ಪ್ರಚಾರ ಕೈಗೊಳ್ಳಲಿಲ್ಲ. ಆ ಕಡೆ ತಿರುಗಿಯೂ ನೋಡಲಿಲ್ಲ. ಸೇನಾಧಿಪತಿಯಿಲ್ಲದೆ ಯುದ್ಧರಂಗಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಇಳಿದಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅಮಾಜಿ ಹೇಮಣ್ಣ, ಟಿಂಕರ್‌ ರಫೀಕ್‌ ಸೇರಿದಂತೆ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣಾ ಪ್ರಚಾರ ನಡೆಸಿದರು. ಅದರ ಫಲವಾಗಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾರ್ಯಕರ್ತರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ.

ಇದೇ ವೇಳೆ, ತನ್ನೆಲ್ಲ ಶಕ್ತಿಯನ್ನು ಪಣಕ್ಕೆ ಇಟ್ಟಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಹೇಗಾದರೂ ಮಾಡಿ ಈ ಸಲ ಕಾಂಗ್ರೆಸ್‌ ಕೋಟೆಯನ್ನು ಭೇದಿಸಿ ಅಧಿಕಾರಕ್ಕೆ ಬರಬೇಕೆಂಬ ಬಿಜೆಪಿ ಕನಸು ನುಚ್ಚು ನೂರಾಗಿದೆ. 20 ವಾರ್ಡ್‌ಗಳ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದೆ.

ಪಕ್ಷದ ಚುನಾವಣಾ ಉಸ್ತುವಾರಿ ಎಚ್‌.ಆರ್‌.ಗವಿಯಪ್ಪ, ಶಾಸಕ ಬಿ. ಶ್ರೀರಾಮುಲು, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಅವರು ಕಮಲಾಪುರ ಪಟ್ಟಣದಲ್ಲಿ ನಾಲ್ಕೈದು ಸಲ ಪ್ರಚಾರ ಕೈಗೊಂಡಿದ್ದರು. ನೂತನ ಸಂಸದ ವೈ. ದೇವೇಂದ್ರಪ್ಪ ಕೂಡ ಬಿರುಸಿನ ಪ್ರಚಾರ ಮಾಡಿದ್ದರು. ಲೋಕಸಭೆ ಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು ಅತೀವ ಆತ್ಮವಿಶ್ವಾಸದಲ್ಲಿದ್ದರು. ಆದರೆ, ಮೋದಿ ಅಲೆ ಅವರ ಕೈ ಹಿಡಿದಿಲ್ಲ. ಬಿಜೆಪಿಯ ಪ್ರಮುಖ ಮುಖಂಡರೆಲ್ಲರೂ ಪ್ರಚಾರ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರೂ ಬಿಜೆಪಿ ನಿರಾಶಾದಾಯಕ ಪ್ರದರ್ಶನ ಮಾಡಿದೆ.

ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಜೆ.ಡಿ.ಎಸ್‌.ಗೂ ಭಾರಿ ಮುಖಭಂಗವಾಗಿದೆ. ಖಾತೆ ತೆರೆಯಲು ಜೆ.ಡಿ.ಎಸ್‌. ವಿಫಲವಾಗಿದೆ. ಆ ಪಕ್ಷದ ಪ್ರಚಾರದ ಹೊಣೆ ಹೊತ್ತಿದ್ದ ಮುಖಂಡ ದೀಪಕ್‌ ಕುಮಾರ್‌ ಸಿಂಗ್‌ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಸುಳಿಯದ ಬಿಜೆಪಿ ಮುಖಂಡರು:

ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲುತ್ತದೆ ಎಂಬ ವಿಷಯ ಮೊದಲೇ ಅರಿತಿದ್ದರೋ ಏನೋ ಗೊತ್ತಿಲ್ಲ. ಆದರೆ, ಬಿಜೆಪಿ ಮುಖಂಡರು ಮತ ಎಣಿಕೆ ಕೇಂದ್ರದ ಕಡೆ ಸುಳಿಯಲೇ ಇಲ್ಲ. ಚುನಾವಣೆಗೆ ಸ್ಪರ್ಧಿಸಿದ ಬಹುತೇಕ ಅಭ್ಯರ್ಥಿಗಳು ಅಲ್ಲಿರಲಿಲ್ಲ. ಪಕ್ಷದ ಏಜೆಂಟರು, ಬೆರಳೆಣಿಕೆಯಷ್ಟು ಕಾರ್ಯಕರ್ತರಷ್ಟೇ ಅಲ್ಲಿದ್ದರು. ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದ ವಿಷಯ ತಿಳಿದು ಅವರು ಕೂಡ ಅಲ್ಲಿಂದ ಕಾಲ್ಕಿತ್ತರು.

ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು. ಆ ಪಕ್ಷದ ನೂರಾರು ಕಾರ್ಯಕರ್ತರು ಸೇರಿದ್ದರು. ‘ಕಾಂಗ್ರೆಸ್‌ಗೆ ಜೈ’ ಎಂದು ಘೋಷಣೆಗಳನ್ನು ಕೂಗಿದರು. ನಗರದಲ್ಲಿ ಬೈಕ್‌ ರ್‍ಯಾಲಿ ನಡೆಸಿದರು. ನಂತರ ರೋಟರಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT