ಗುರುವಾರ , ಜೂನ್ 30, 2022
24 °C
ಗಿರಿಯಾಪುರದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಗ್ರಾಮೀಣ ರಸ್ತೆ, ಹಕ್ಕುಪತ್ರದ್ದೇ ಸಮಸ್ಯೆ

ಕೆ. ಸೋಮಶೇಖರ್‌ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ಮೂರು ದಶಕ ಕಳೆದರೂ ಪರಿಹಾರ ಕಾಣದ ಆಶ್ರಯ ಮನೆ ಹಕ್ಕುಪತ್ರಗಳ ಸಮಸ್ಯೆ, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ಗ್ರಾಮದ ರಸ್ತೆಗಳು, ಪಡಿತರಕ್ಕಾಗಿ ಬೇರೆ ಊರಿಗೆ ಅಲೆಯುವ ಪಡಿಪಾಟಲು…

ಇದು ತಾಲ್ಲೂಕಿನ ಗಿರಿಯಾಪುರದ ಚಿತ್ರಣ.

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಭಾಗವಾಗಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸಲಿದ್ದು, ಜನ ಅನೇಕ ನಿರೀಕ್ಷೆಗಳೊಂದಿಗೆ ಎದುರು ನೋಡುತ್ತಿದ್ದಾರೆ.

ಗ್ರಾಮದಿಂದ ಶಿಬಾರ, ಚನ್ನಹಳ್ಳಿ ತಾಂಡಾ ಮೂಲಕ ಹರಪನಹಳ್ಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ದಶಕಗಳಿಂದ ಅಭಿವೃದ್ಧಿಯಾಗಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಜಾಲಿಪೊದೆಗಳು ಬೆಳೆದಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ಕೃಷಿ ಚಟುವಟಿಕೆಗೆ ಓಡಾಡಲು ತೀವ್ರ ತೊಂದರೆಯಾಗುತ್ತಿದ್ದು, ಹೊಲಗಳಿಂದ ಫಸಲು ಕಟಾವು ಮಾಡಿಕೊಂಡು ಬರುವಾಗ ರೈತರು ತೊಂದರೆ ಅನುಭವಿಸುತ್ತಾರೆ.

1991ರಲ್ಲಿ ಸರ್ಕಾರ ಗಿರಿಯಾಪುರ ಮಠದಲ್ಲಿ ಐದು ಎಕರೆಯಲ್ಲಿ 95 ನಿವೇಶನಗಳನ್ನು ನಿರ್ಮಿಸಿ ಬಡವರಿಗೆ ವಿತರಿಸಿತ್ತು. ಇಲ್ಲಿ ಶಾಲೆಗೆ ಮೀಸಲಿಟ್ಟಿರುವ ಜಾಗ ನಿವೇಶನಗಳಾಗಿವೆ, ನಿವೇಶನಗಳಿರುವ ಜಾಗದಲ್ಲಿ ಶಾಲೆ ನಿರ್ಮಿಸಲಾಗಿದೆ. ಹಕ್ಕು ಪತ್ರ ಅದಲು ಬದಲು ಸಮಸ್ಯೆಯಿಂದಾಗಿ ನಿವೇಶನಗಳಿಗೆ ಇ-ಸ್ವತ್ತು ದಾಖಲೆ ದೊರೆಯುತ್ತಿಲ್ಲ. ಹಿಂದೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಆಶ್ರಯ ಕಾಲೊನಿಯ ನಕಾಶೆ ಬದಲಿಸಿ, ಹಕ್ಕುಪತ್ರಗಳ ತಿದ್ದುಪಡಿಯಾಗಬೇಕಿದೆ. ಮೂರು ದಶಕದ ಈ ಸಮಸ್ಯೆ ಪರಿಹಾರ ಕಾಣುವ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.

‘ಇಲ್ಲಿನ ಬಡ ಕುಟುಂಬಗಳು ಪ್ರತಿ ತಿಂಗಳು ಪಡಿತರ ತರಲು 3 ಕಿ.ಮೀ. ದೂರದ ಕತ್ತೆಬೆನ್ನೂರು ಗ್ರಾಮಕ್ಕೆ ಅಲೆಯಬೇಕಿದೆ. ಗ್ರಾಮದಲ್ಲೇ ಪಡಿತರ ವಿತರಣೆ ವ್ಯವಸ್ಥೆಯಾಗಬೇಕೆಂಬ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಮ್ಮೂರಿಗೆ ಜಿಲ್ಲಾಧಿಕಾರಿ ಭೇಟಿ ನೀಡುತ್ತಿರುವುದು ಸಂತಸದ ವಿಷಯ. ಸಿ.ಸಿ. ರಸ್ತೆ ನಿರ್ಮಾಣ ವಿಚಾರದಲ್ಲಿ ನಮ್ಮೂರು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮೊರಾರ್ಜಿ ವಸತಿ ಶಾಲೆಗೆ ಹೋಗುವ ರಸ್ತೆ, ಗ್ರಾಮದಲ್ಲಿನ ರಸ್ತೆಗಳು ಮಳೆಗಾಲದಲ್ಲಿ ಕೆಸರು ಗದ್ದೆಗಳಾಗುತ್ತವೆ. ಶಾಲಾ ಕಾಂಪೌಂಡ್, ರಸ್ತೆಗಳ ಅಭಿವೃದ್ಧಿಗೆ ಅವರು ಕ್ರಮ ಕೈಗೊಳ್ಳಬೇಕು’ ಎಂದು ಹರಪನಹಳ್ಳಿ ನಾಗರಾಜ, ಎಚ್.ಚಂದ್ರಪ್ಪ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು