ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುತ್ತು ಬಾಯಿಗೆ ಬರದಂಗ ಆಗೇತ್ರಿ: ಜೋಳ ಬೆಳೆದ ರೈತರ ಸಂಕಟ

ಸತತ ಮಳೆಯಿಂದ ಜೋಳಕ್ಕೆ ಕಾಡಿಗೆ ರೋಗ: ರೈತರು ಕಂಗಾಲು
Last Updated 20 ಸೆಪ್ಟೆಂಬರ್ 2020, 4:43 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ‘ನೋಡ್ರಿ ಈ ಬಾರಿ ಸಕಾಲಕ್ಕ ಸಾಕಷ್ಟು ಮಳೆಯಾತು. ಮುತ್ತಿನಂತ ಜೋಳದ ಫಸಲೂ ಚೆನ್ನಾಗಿ ಬಂತು ಅಂತ ಬೊ ಕುಸಿಯಿಂದ ಕಟಾವು ಮಾಡಿ ರಾಶಿನೂ ಹಾಕಿದ್ವಿ. ಆದ್ರ ಒಂದು ವಾರದಿಂದ ಹತ್ತಿಕೊಂಡ ಮಳೆಯಿಂದ ಕಪ್ಪಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂಗ ಆಗೇತಿ ನಮ್ ರೈತ್ರ ಪರಿಸ್ಥಿತಿ’

ಹೋಬಳಿ ವ್ಯಾಪ್ತಿಯ ಮರಿಯಮ್ಮನಹಳ್ಳಿ ತಾಂಡಾ ಸೇರಿದಂತೆ ತಿಮ್ಮಲಾಪುರ, ಜಿ.ನಾಗಲಾಪುರ, ಡಣಾಯಕನಕೆರೆ ಸೇರಿದಂತೆ ಇತರೆ ಭಾಗದಲ್ಲಿ ಜೋಳ ಬೆಳೆದ ರೈತರ ಸಂಕಟದ ನುಡಿಗಳಿವು.

ಹೋಬಳಿ ವ್ಯಾಪ್ತಿಯ ಬಹುತೇಕ ರೈತರು ಎಂಟತ್ತು ದಿನದಿಂದ ಜೋಳದ ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡಿದ್ದರು. ಕೆಲವು ಕಡೆ ಕಟಾವು ನಡೆದಿತ್ತು. ಆದರೆ, ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಫಂಗಸ್ ತಗುಲಿ ರಾಶಿಯಲ್ಲಿಯೇ ಕಪ್ಪಾಗಿ, ಮೊಳಕೆ ಯೊಡದಿರುವುದು ರೈತರು ನಷ್ಟ ಅನುಭವಿಸುವಂತಾಗಿದೆ.

ಮುಂಗಾರು ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ 452 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದರು. ಸಕಾಲಕ್ಕೆ ಸುರಿದ ಉತ್ತಮ ಮಳೆಗೆ ಫಸಲು ಚೆನ್ನಾಗಿ ಬಂದಿತ್ತು.

ಇನ್ನೇನು ಕಟಾವು ಮಾಡಿ ರಾಶಿಯಾದ ಜೋಳದ ತೆನೆಗಳನ್ನು ಕಾಳು ಮಾಡಿಸುವಷ್ಟರಲ್ಲಿಯೇ ಸತತ ಮಳೆಗೆ ಜೋಳಕ್ಕೆ ಕಾಡಿಗೆ ರೋಗ(ಫಂಗಸ್) ತಗುಲಿದೆ. ಇತ್ತ ಊಟಕ್ಕೆ ಇಲ್ಲ, ಅತ್ತ ಮಾರಾಟಕ್ಕೂ ಯೋಗ್ಯವಲ್ಲದ ಜೋಳ
ದಿಂದಾಗಿ ರೈತರು ಕೈ ಸುಟ್ಟುಕೊಳ್ಳುವಂತೆ ಆಗಿದೆ.

‘ನೋಡ್ರಿ ಸತತ ಬರಗಾಲದಿಂದ ಈ ಬಾರಿ ಸಕಾಲಕ್ಕೆ ಮಳೆಯಾಗಿದ್ದರಿಂದ ಊಟಕ್ಕೆ ಎರಡು ಎಕರೆಯಲ್ಲಿ ಜೋಳ ಬೆಳದ್ವಿ. ಆದ್ರ ಕೈಗ ಬಂದದ್ದು ಬರದಂಗೆ ಆಗೈತಿ. ಹಿಂಗಾದ್ರ ಹೆಂಗ ರೈತರು ಜೀವನ ಸಾಗಿಸೋದು’ ಎಂದು ಮರಿಯಮ್ಮನಹಳ್ಳಿ ತಾಂಡಾದ ಜೋಳ ಬೆಳೆದ ರೈತರಾದ ಹೇಮ್ಲನಾಯ್ಕ, ರಾಮಾಂಜಿನಾಯ್ಕ, ವಾಲಿಬಾಯಿ, ಗೂಗಿಬಾಯಿ, ಭೀಮಾನಾಯ್ಕ, ಲಕ್ಷ್ಮಣನಾಯ್ಕ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT