ಬುಧವಾರ, ನವೆಂಬರ್ 13, 2019
28 °C

ಮಳೆ ನೀರು ರಸ್ತೆಯನ್ನೇ ನುಂಗಿತ್ತಾ...

Published:
Updated:
Prajavani

ಬಳ್ಳಾರಿ: ಎರಡು ದಿನದಿಂದ ಮೋಡಕವಿದ ವಾತಾವರಣ, ನಿರಂತರ ತುಂತುರು ಮಳೆಗೆ ನಲುಗಿದ್ದ ಜನರಿಗೆ ಗುರುವಾರ ಭಿನ್ನ ಅನುಭವ. ಬೆಳಿಗ್ಗೆಯಿಂದಲೇ ಕೆಲವೆಡೆ ಧಾರಾಕಾರ ಮಳೆ, ಇನ್ನೂ ಕೆಲವೆಡೆ ತುಂತುರು ಮಳೆ ಸುರಿದ ಪರಿಣಾಮ ರಸ್ತೆಗಳನ್ನು ಮಳೆ ನೀರು ಸಂಪೂರ್ಣವಾಗಿ ಆವರಿಸಿತ್ತು.

ಕೆಲವು ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿದ ಪರಿಣಾಮ ಆಟೋರಿಕ್ಷಾಗಳು, ಬೈಕ್‌ಗಳು ಮಳೆಯಲ್ಲೇ ನಿಂತುಬಿಟ್ಟಿದ್ದವು. ಅವುಗಳನ್ನು ನೂಕಿಕೊಂಡು ಹೋಗಬೇಕಾದ ಪರಿಸ್ಥಿತಿಯೂ ನಿರ್ಮಾಣವಾಯಿತು.

ನಗರದ ಪಾರ್ವತಿನಗರ ಮುಖ್ಯರಸ್ತೆಯಲ್ಲಿರುವ ಎಸ್ಪಿ ಮನೆ ಬಳಿ, ಕಪ್ಪಗಲ್ಲು ರಸ್ತೆ, ದುರ್ಗಮ್ಮ ಗುಡಿ ಸೇತುವೆ, ಕ್ರೀಡಾಂಗಣ ಬಳಿಯ ರೈಲು ಸೇತುವೆ, ಸತ್ಯನಾರಾಯಣಪೇಟೆ ರೈಲು ಕೆಳ ಸೇತುವೆ. ಸಣ್ಣ ಮಾರುಕಟ್ಟೆ ರಸ್ತೆ, ಪಾಲಿಕೆ ಮುಂಭಾಗ,ತಾಲ್ಲೂಕು ಕಚೇರಿ ಮುಂಭಾಗ, ಕೋಟೆ ರಸ್ತೆ, ದೇವಿನಗರ ರಸ್ತೆ ಬುಡಾ ವಾಣಿಜ್ಯ ಸಂಕೀರ್ಣ, ಹೊಸ ಬಸ್‌ ನಿಲ್ದಾಣದ ಎದುರು, ಮಿಲ್ಲರ್‌ಪೇಟೆ, ರಾಘವ ಕಲಾಮಂದಿರ ಪಕ್ಕದ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ಆವರಿಸಿತ್ತು. ತಗ್ಗಿನ ಪ್ರದೇಶಗಳ ಕೆಲ ಮನೆಗಳಿಗೂ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು.

ಚರಂಡಿ ಬಂದ್‌: ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಚರಂಡಿ ಮೂಲಕ ನೀರು ಸರಾಗವಾಗಿ ಹರಿದುಹೋಗದೇ ಇದ್ದದೇ ಸಮಸ್ಯೆಗೆ ಕಾರಣವಾಗಿತ್ತು. ಚರಂಡಿ ನೀರು ರಸ್ತೆಗೆ ಬಂದ ಕಾರಣ ದುರ್ವಾಸನೆಯೂ ಹಬ್ಬಿತ್ತು.

ಪಾಲಿಕೆ ಸುತ್ತಮುತ್ತಲೂ ಅವ್ಯವಸ್ಥೆ!

ಮಳೆಯಿಂದಾಗಿ ನಗರದ ಪಾಲಿಕೆ ಕಚೇರಿ ಮುಂಭಾಗ, ಸಮೀಪದ ನಗರ ಬಸ್‌ ನಿಲ್ದಾಣ ರಸ್ತೆಯಲ್ಲೂ ನೀರು ನಿಂತು ಪ್ರಯಾಣಿಕರು, ವಾಹನ ಸವಾರರು ತೊಂದರೆ ಅನುಭವಿಸಿದರು.ಪಾಲಿಕೆ ಕಚೇರಿ ಮುಂಭಾಗದಲ್ಲೇ ನಿಂತ ನೀರು, ಕಾಸ್ಮೊಪಾಲಿಟನ್‌ ಕ್ಲಬ್‌ವರೆಗೂ ಹಬ್ಬಿತ್ತು. ಪ್ರತಿ ಮಳೆಗಾಲದಲ್ಲೂ ಇದೇ ಪರಿಸ್ಥಿತಿಯನ್ನು ಎದುರಿಸಿದರೂ ಪಾಲಿಕೆ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಅಂಗಡಿ ಮಾಲೀಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)