ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ

67ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಚಿವ ಎಸ್‌.ಟಿ. ಸೋಮಶೇಖರ್‌
Last Updated 19 ನವೆಂಬರ್ 2020, 13:33 IST
ಅಕ್ಷರ ಗಾತ್ರ

ಹೊಸಪೇಟೆ: ‘ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ಕ್ಷೇತ್ರ ಬಹಳ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ ತಿಳಿಸಿದರು.

ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ 67ನೇ ರಾಜ್ಯಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

‘ಗೃಹ ನಿರ್ಮಾಣ, ಮಾರುಕಟ್ಟೆ ಫೆಡರೇಶನ್‌, ಡಿಸಿಸಿ ಬ್ಯಾಂಕ್‌, ರಸಗೊಬ್ಬರ, ಬೀಜ ಮಾರಾಟ, ಖಾದಿ ಗ್ರಾಮೋದ್ಯೋಗ, ಹಾಲು ಮಾರಾಟ, ಆಸ್ಪತ್ರೆ ಹೀಗೆ ಎಲ್ಲ ಕ್ಷೇತ್ರಗಳಿಗೂ ಸಹಕಾರ ಕ್ಷೇತ್ರ ವಿಸ್ತರಿಸಿಕೊಂಡಿದೆ. ರಾಜ್ಯದಲ್ಲಿ ಸದ್ಯ 40,000ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳಿವೆ. 2.30 ಕೊಟಿ ಅದರ ಸದಸ್ಯರಿದ್ದಾರೆ. ಕೋಟ್ಯಂತರ ರೂಪಾಯಿ ಠೇವಣಿ ಇದೆ. ಲಕ್ಷಾಂತರ ಜನಕ್ಕೆ ಉದ್ಯೋಗ ಸಿಕ್ಕಿದೆ. ರೈತರಿಗೆ ಕೋಟ್ಯಂತರ ರೂಪಾಯಿ ಸಾಲ ವಿತರಿಸಲಾಗಿದೆ’ ಎಂದು ವಿವರಿಸಿದರು.

‘ಬಳ್ಳಾರಿಯ ಬಿಡಿಸಿಸಿ ಬ್ಯಾಂಕ್ ₹300 ಕೋಟಿಗೂ ಹೆಚ್ಚು ಸಾಲ ರೈತರಿಗೆ ನೀಡಿ ಮಾದರಿಯಾಗಿದೆ. ನಬಾರ್ಡ್ ನಿಂದ ಬಂದ ₹80 ಕೋಟಿ ಅನುದಾನವನ್ನು ಈ ಬಿಡಿಸಿಸಿ ಬ್ಯಾಂಕಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಕೋವಿಡ್‌ನಿಂದ ಆರ್ಥಿಕ ಹೊಡೆತ ಬಿದ್ದಿದೆ. ಆರ್ಥಿಕ ಚೈತನ್ಯ ತುಂಬಲು ‘ಆರ್ಥಿಕ ಸ್ಪಂದನೆ’ ಯೋಜನೆ ಜಾರಿಗೆ ತಂದು 30 ಜಿಲ್ಲೆಗಳ ರೈತರಿಗೆ ಸಾಲ ಕೊಡಲಾಗುತ್ತಿದೆ. ಮುಖ್ಯಮಂತ್ರಿ ಕೋವಿಡ್‌ ಪರಿಹಾರ ನಿಧಿಗೆ ಸಹಕಾರ ಇಲಾಖೆಯಿಂದ ₹53 ಕೋಟಿ ನೀಡಲಾಗಿದೆ. ರಾಜ್ಯದ 52,460 ಆಶಾ ಕಾರ್ಯಕರ್ತೆಯರಿಗೆ ತಲಾ ₹3,000 ಪ್ರೋತ್ಸಾಹ ಧನ ವಿತರಿಸಲಾಗಿದೆ’ ಎಂದು ವಿವರಿಸಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ‘ಪ್ರತಿ ತಿಂಗಳು ಮೂರು ಗ್ರಾಮಗಳಲ್ಲಿ ರೈತರೊಂದಿಗೆ ಕಾಲ ಕಳೆದು, ಅವರಿಗೆ ಸಮಗ್ರ ಕೃಷಿ ಪದ್ಧತಿ ಕುರಿತು ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಡ್ಯದಿಂದ ಕಾರ್ಯಕ್ರಮ ಆರಂಭಗೊಂಡಿದೆ’ ಎಂದರು.

‘ರೈತರಿಗೆ ಅವರ ಹೆಸರು, ವಿವರ ಒಳಗೊಂಡ ‘ಸ್ವಾಭಿಮಾನಿ ರೈತ’ ಹೆಸರಿನಲ್ಲಿ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ಮುಂದಿನ ತಿಂಗಳು ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಅನುಷ್ಠಾನಕ್ಕೆ ಬರಲಿದೆ. ಬಳಿಕ ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

‘ರೈತರ ಹೊಲಗಳಿಗೆ ತೆರಳಿ ಅಗತ್ಯ ಸಲಹೆ ನೀಡುವುದಕ್ಕಾಗಿ ಬಳ್ಳಾರಿ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಪ್ರಯೋಗಾಲಯ ಮಾದರಿಯ ವಾಹನ ಒದಗಿಸಲಾಗುವುದು. ವಾಹನ ಖರೀದಿಗೆ ಜಿಲ್ಲಾ ಖನಿಜ ನಿಧಿ ಅನುದಾನ ಒದಗಿಸಲು ಅರಣ್ಯ ಸಚಿವ ಆನಂದ್‌ ಸಿಂಗ್‌ ಮುಂದೆ ಬಂದಿದ್ದಾರೆ’ ಎಂದು ಹೇಳಿದರು.

ಹೊಸಪೇಟೆ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯ, ‌ನಿರ್ದೇಶಕ ಜೆ.ಎಂ.ವೃಷಬೇಂದ್ರಯ್ಯ, ಸಿರುಗುಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿರ್ದೇಶಕ ವಿಶ್ವನಾಥ ಹಿರೇಮಠ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಳದ ನಿರ್ದೇಶಕ ಕಡ್ಲಿ ವೀರಣ್ಣ, ಸಹಕಾರ ಸಂಘಗಳ ಜಂಟಿ‌ ನಿಬಂಧಕ ಗೋಪಾಲ ಚವ್ಹಾಣ, ಉಪನಿಬಂಧಕಿ ಡಾ.ಸುನೀತಾ ಸಿದ್ರಾಮ್, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಜೆ.ಎಂ.ಶಿವಪ್ರಸಾದ್ ಇದ್ದರು.

‘ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ’

‘ತಾಲ್ಲೂಕಿನಲ್ಲಿ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎನ್ನುವ ಆಲೋಚನೆ ಇದೆ. ಖಂಡಿತವಾಗಿಯೂ ಇದರ ಬಗ್ಗೆ ಪ್ರಯತ್ನಿಸುತ್ತೇನೆ’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಭರವಸೆ ನೀಡಿದರು.

ಸಹಕಾರ ಸಪ್ತಾಹದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವಿಜಯನಗರ ಜಿಲ್ಲೆ ರಚನೆ ಸೇರಿದಂತೆ ಜನರಿಗೆ ಕೊಟ್ಟ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇನೆ. ಈಗ ಸಕ್ಕರೆ ಕಾರ್ಖಾನೆ ಆರಂಭಿಸಲು ಪ್ರಯತ್ನಿಸುವೆ. ನಮ್ಮದೇ ಸರ್ಕಾರ ಇದೆ. ಇನ್ನೂ ಸಾಕಷ್ಟು ಸಮಯವೂ ಇದೆ. ನಮ್ಮ ಭಾಗದಲ್ಲಿ ಶೇ 90ರಷ್ಟು ಕಬ್ಬು ಬೆಳೆಗಾರರು ಇದ್ದಾರೆ. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಸಹಕಾರದೊಂದಿಗೆ ಕಾರ್ಖಾನೆ ಆರಂಭಿಸಲು ಪ್ರಯತ್ನಿಸುತ್ತೇನೆ’ ಎಂದರು.

ಉದ್ಘಾಟನೆಗೂ ಮುನ್ನವೇ ಮೆರವಣಿಗೆ
ಉದ್ಘಾಟನೆಗೂ ಮುನ್ನವೇ ಗುರುವಾರ ಇಲ್ಲಿನ ಎತ್ತಿನ ಬಂಡಿ ಮೆರವಣಿಗೆ ಆರಂಭಗೊಂಡಿತು.
ಸಹಕಾರ ಸಪ್ತಾಹದ ಪ್ರಯುಕ್ತ ನಗರದ ವಡಕರಾಯ ದೇವಸ್ಥಾನದಿಂದ ಮುನ್ಸಿಪಲ್‌ ಮೈದಾನದ ವರೆಗೆ ಎತ್ತಿನ ಬಂಡಿಗಳ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇನ್ನಷ್ಟೇ ಸಚಿವರು ಬಂದು ಚಾಲನೆ ಕೊಡಬೇಕಿತ್ತು. ಆದರೆ, ಚಕ್ಕಡಿ ಓಡಿಸುವವರು ಪ್ರತಿಷ್ಠೆಗೆ ಬಿದ್ದವರಂತೆ ಅಲ್ಲಿಂದ ಹೊರಟು ಬಿಟ್ಟಿದ್ದರು. ಇದನ್ನು ಗಮನಿಸಿದ ಕಾರ್ಯಕ್ರಮದ ಆಯೋಜಕರು, ಅವರನ್ನು ನಿಲ್ಲಿಸಿದರು. ನಂತರ ಸಚಿವರಾದ ಬಿ.ಸಿ. ಪಾಟೀಲ್‌, ಎಸ್‌.ಟಿ. ಸೋಮಶೇಖರ್‌ ಹಾಗೂ ಆನಂದ್‌ ಸಿಂಗ್‌ ಉದ್ಘಾಟಿಸಿ, ಒಂದೇ ಚಕ್ಕಡಿಯಲ್ಲಿ ತೆರಳಿ ಗಮನ ಸೆಳೆದರು.

‘ಆನಂದ್ ಸಿಂಗ್‌ ಆನಂದ ಭಾಷ್ಪ’
‘ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯವರು ವಿಜಯನಗರ ಜಿಲ್ಲೆ ರಚನೆ ಕುರಿತ ವಿಷಯ ತಿಳಿಸುತ್ತಿದ್ದಂತೆ ಅದನ್ನು ಕೇಳಿದ ಆನಂದ್‌ ಸಿಂಗ್‌ ಆನಂದ ಭಾಷ್ಪ ಹಾಕಿದರು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು.

‘ವಿಜಯನಗರ ಸಾಮ್ರಾಜ್ಯದ ಹೆಸರಿನಲ್ಲಿ ಜಿಲ್ಲೆ ರಚಿಸಿರುವುದು ಉತ್ತಮ ನಿರ್ಧಾರ. ಇಂದಿನ ಕಾರ್ಯಕ್ರಮ ಸಹಕಾರ ಸಪ್ತಾಹವೋ ಅಥವಾ ವಿಜಯನಗರ ಜಿಲ್ಲೆ ರಚನೆಯ ಉತ್ಸವವೋ ಗೊತ್ತಾಗುತ್ತಿಲ್ಲ. ಒಂದರ್ಥದಲ್ಲಿ ವಿಜಯನಗರ ಜಿಲ್ಲೆ ರಚನೆಯ ಮೊದಲ ದಿನ ಇದು’ ಎಂದರು.
‘17 ಜನ ಶಾಸಕರಲ್ಲಿ ಮೊದಲು ರಾಜೀನಾಮೆ ನೀಡಿದವರು ಆನಂದ್‌ ಸಿಂಗ್‌. ಎಲ್ಲರೂ ಮೀನಮೇಷ ಎಣಿಸುತ್ತಿದ್ದರು. ರಾಹುಕಾಲ, ಯಮಗಂಡ ಕಾಲ ಎಂದು ಹಿಂಜರಿಯುತ್ತಿದ್ದರು. ಆದರೆ, ಆನಂದ್‌ ಸಿಂಗ್‌ ಅದನ್ನು ಲೆಕ್ಕಿಸದೆ ರಾಜೀನಾಮೆ ಕೊಟ್ಟು ಹೊಸಪೇಟೆಗೆ ಬಂದರು. ಅವರ ನಂತರ ನಾವು ರಾಜೀನಾಮೆ ಕೊಟ್ಟು ಮುಂಬೈ ಸೇರಿದೆವು. ‘ಜಿಲ್ಲೆ ರಚನೆಯೇ ನನ್ನ ಮೊದಲ ಗುರಿ’ ಎಂದು ಸಿಂಗ್‌ ಹೇಳಿದ್ದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಿ.ಎಂ. ಜಿಲ್ಲೆ ಮಾಡಿರುವುದು ಅಭಿನಂದನೀಯ’ ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

‘17 ಶಾಸಕರು ಬಿಜೆಪಿಯ ಸಂಪತ್ತು’
‘ಬಿಜೆಪಿಗೆ ಬಂದಿರುವ 17 ಶಾಸಕರು ಆ ಪಕ್ಷದ ಸಂಪತ್ತು. ಎಲ್ಲರೂ ಅನುಭವ ಹೊಂದಿದವರು. ಎಲ್ಲರೂ ಜನರಿಗೆ ಸಿಗುತ್ತಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ಮಂತ್ರಿಗಳಾದವರು ಸುಲಭವಾಗಿ ಜನರ ಕೈಗೆ ಸಿಗಬೇಕು ಎಂದು ಸಾರ್ವಜನಿಕರು ಬಯಸುತ್ತಾರೆ. ಅದೇ ರೀತಿಯಲ್ಲಿ ಸಚಿವರಾದ ಗೋಪಾಲಗೌಡ, ಸುಧಾಕರ್‌, ನಾರಾಯಣಗೌಡ ಸೇರಿದಂತೆ ಎಲ್ಲರೂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಡೀ ರಾಜ್ಯ ಸುತ್ತಾಡುತ್ತಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಅಷ್ಟರಲ್ಲಿ ನಾನೇ ಕೊನೆಯವನು. ನಾನು ಕೆಲ ಜಿಲ್ಲೆಗಳಿಗೆ ಭೇಟಿ ನೀಡಿರುವೆ. ಇಷ್ಟರಲ್ಲೇ ಇತರೆ ಜಿಲ್ಲೆಗಳಿಗೂ ಭೇಟಿ ಕೊಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT