ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜೀನ್ಸ್ ಉದ್ಯಮಕ್ಕೂ ಕೊರೊನಾ ಪೆಟ್ಟು

ಗೋದಾಮುಗಳಲ್ಲಿ ದಾಸ್ತಾನು, ಉತ್ಪಾದನೆ ಸ್ಥಗಿತ; ಕಾರ್ಮಿಕರಿಗಿಲ್ಲ ಕೆಲಸ
Last Updated 12 ಜೂನ್ 2020, 9:31 IST
ಅಕ್ಷರ ಗಾತ್ರ

ಬಳ್ಳಾರಿ: ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಜೀನ್ಸ್ ಉದ್ಯಮ ಹಿಂದೆಂದಿಗಿಂತಲೂ ಬಹುದೊಡ್ಡ ನಷ್ಟ ಅನುಭವಿಸುತ್ತಿದೆ. ಕಾರ್ಮಿಕರ ಬದುಕಿನ ಮೇಲೂ ಇದರ ಕರಿ ನೆರಳು ಬಿದ್ದಿದೆ.

ಜಿಲ್ಲೆ ಸೇರಿದಂತೆ ನೆರೆಯ ಆಂಧ್ರದ ರಾಯದುರ್ಗ ತಾಲ್ಲೂಕಿನ ಡಿ.ಹಿರೇಹಾಳ್, ಓಬಳಾಪುರಂ ಸೇರಿದಂತೆ ವಿವಿಧೆಡೆಯ ಸುಮಾರು 40 ಸಾವಿರಕ್ಕಿಂತಲೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಂಡು ಜೀವನ ನಿರ್ವಹೆಣೆಗೆ ಒದ್ದಾಡುತ್ತಿದ್ದಾರೆ. ಹಳೆಯ ದಾಸ್ತಾನು ಹಾಗೆಯೇ ಉಳಿದಿದೆ. ಬೇಡಿಕೆ ಬರದ ಕಾರಣ ಉತ್ಪಾದನೆ ಸ್ಥಗಿತಗೊಂಡಿದೆ.

ಸದ್ಯ ಕಾರ್ಮಿಕರಿಗೆ ಕೆಲಸವೂ ಇಲ್ಲ. ಸಂಬಳವೂ ಇಲ್ಲ. ಈಗಿನ ಪರಿಸ್ಥಿತಿ ನೋಡಿದರೆ ಇನ್ನೂ ಐದಾರೂ ತಿಂಗಳು ಸಹಜ ಸ್ಥಿತಿಗೆ ಬರುವುದು ಅನುಮಾನ. ಜಿಲ್ಲೆಯಲ್ಲಿ ಒಟ್ಟು 360ಕ್ಕಿಂತಲೂ ಹೆಚ್ಚು ವಾಷಿಂಗ್ ಯುನಿಟ್‌, 500ಕ್ಕೂ ಹೆಚ್ಚು ಸ್ಟಿಚ್ಚಿಂಗ್ ಯುನಿಟ್‌ಗಳಿವೆ. ಕಾರ್ಮಿಕರು ಪ್ರತಿದಿನದ ಕೆಲಸದ ಆಧಾರದ ಮೇಲೆ ಮತ್ತು ಕೆಲವರಿಗೆ ತಿಂಗಳ ಸಂಬಳ ನೀಡಲಾಗುತ್ತಿತ್ತು. ಆದರೆ, ಈಗ ಕೆಲಸವಿಲ್ಲದ ಕಾರಣ ಬೇರೆ ಕೆಲಸ ಹುಡುಕುತ್ತಿದ್ದಾರೆ.

‘ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಗೆ ಜೀನ್ಸ್‌ ರಫ್ತು ಮಾಡಲಾಗುತ್ತದೆ. ಆದರೆ, ಕೊರೊನಾದಿಂದ ರಫ್ತು ನಿಂತಿದೆ. ಸದ್ಯ ಒಂದು ಲಕ್ಷ ಜೀನ್ಸ್‌ ಗೋದಾಮಿನಲ್ಲಿ ದಾಸ್ತಾನು ಇದೆ. ಬೇಡಿಕೆ ಸಲ್ಲಿಸಿದವರು ಈಗ ಬೇಡವೆಂದು ಹೇಳಿದ್ದಾರೆ. ಹಳೆ ಸ್ಟಾಕ್‌ ಖಾಲಿ ಆಗುವವರೆಗೆ ಹೊಸದು ಉತ್ಪಾದನೆ ಮಾಡುವುದಾದರೂ ಹೇಗೆ?’ ಎಂದು ಅತುಲ್‌ ಫ್ಯಾಶನ್ಸ್‌ ಮಾಲೀಕ ಟಿ.ಸಿ. ಜೈನ್‌ ಪ್ರಶ್ನಿಸುತ್ತಾರೆ.

‘ಉದ್ಯಮ ಆರಂಭಕ್ಕೆ ಗುಜರಾತ್ ಮತ್ತು ಅಹಮದಾಬಾದ್‌ನಿಂದ ಜೀನ್ಸ್ ಬಟ್ಟೆ ಬರಬೇಕಿದೆ. ಚೀನಾದಿಂದ ಕಲರ್ಸ್, ಬಟನ್, ಜಿಪ್ ಹಾಗೂ ಮತ್ತಿತರ ಮಟೀರಿಯಲ್ ಬರುತ್ತದೆ. ಆದರೆ, ಸದ್ಯ ಯಾವುದೂ ಬರುತ್ತಿಲ್ಲ. ಪರಿಸ್ಥಿತಿ ತಿಳಿ ಆಗುವವರೆಗೆ ಮಾರುಕಟ್ಟೆ ಸುಧಾರಿಸುವುದಿಲ್ಲ’ ಎಂದರು.

‘ಯುಗಾದಿ, ರಂಜಾನ್‌ ಹಬ್ಬಕ್ಕೂ ಮುನ್ನ ಬೇಡಿಕೆ ಸಲ್ಲಿಸಿದ್ದರು. ಆದರೆ, ಲಾಕ್‌ಡೌನ್‌ ನಂತರ ಆರ್ಡರ್‌ ರದ್ದುಪಡಿಸಿದ್ದಾರೆ. ಮಳಿಗೆಯ ಬಾಡಿಗೆ, ವಿದ್ಯುತ್‌ ಬಿಲ್‌ ಕಟ್ಟುವುದು ಕಷ್ಟವಾಗಿದೆ’ ಎಂದು ‘ವಾಕರ್’ ಜೀನ್ಸ್ ಮಾಲೀಕ ಭರತ್ ಜೈನ್ ತಿಳಿಸಿದರು.

ಆರು ತಿಂಗಳವರೆಗೆ ಸ್ಟಾಕ್ ಬೇಡ ಎನ್ನುತ್ತಿದ್ದಾರೆ
ಜೀನ್ಸ್ ಉದ್ಯಮ ಬಹಳ ಕೆಟ್ಟ ದಿನಗಳನ್ನು ಎದುರಿಸುತ್ತಿದೆ. ಮುಂದಿನ ಆರು ತಿಂಗಳವರೆಗೆ ಸ್ಟಾಕ್ ಕಳಿಸದಂತೆ ವಿತರಕರು ಹೇಳುತ್ತಿದ್ದಾರೆ ಎಂದು ವಾಕರ್ ಜೀನ್ಸ್ ಮಾಲೀಕ ಭರತ್ ಜೈನ್ ಹೇಳುತ್ತಾರೆ.

ಜೀವನ ನಿರ್ವಹಣೆ ಕಷ್ಟ: ಕಾರ್ಮಿಕ

ಸಾಮಾನ್ಯ ದಿನಗಳಲ್ಲಿ ಪ್ರತಿದಿನ ₹1 ಸಾವಿರದವರೆಗೆ ದುಡಿದಿದ್ದೇನೆ. ಆದರೆ, ಈಗ ₹120ಕ್ಕಿಂತಲೂ ಹೆಚ್ಚು ಸಿಗುತ್ತಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಕಾರ್ಮಿಕ ಪನ್ನಮೇಶುಲು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT