ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ, ತೆಲಂಗಾಣದಿಂದ ಮರಳಿದ ತಾಂಡಾ ನಿವಾಸಿಗಳು: ತಾಲ್ಲೂಕಿನಾದ್ಯಂತ ಆತಂಕ

Last Updated 29 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕಮಲಾಪುರ: ತುತ್ತಿನ ಚೀಲ ತುಂಬಿಸಿಕೊಳ್ಳಲು ಮುಂಬಯಿ, ಪೂನಾ, ಹೈದರಾಬಾದ್‌ ಮತ್ತಿತರ ಕಡೆ ಗುಳೆ ಹೋಗಿದ್ದ ತಾಂಡಾ ನಿವಾಸಿಗಳು ಎರಡು ಮೂರು ದಿನಗಳಿಂದ ವಾಪಾಸ್ಸಾಗುತ್ತಿದ್ದು, ತಾಲ್ಲೂಕಿನಾದ್ಯಂತ ಆತಂಕ ಮನೆ ಮಾಡಿದೆ.

ಕಮಲಾಪುರ ತಾಲ್ಲೂಕಿನಲ್ಲಿ 51 ತಾಂಡಾಗಳಿವೆ. ಬೇರೆ–ಬೇರೆ ಮಾರ್ಗಗಳಿಂದ ಇದುವರಗೆ ಸುಮಾರು 2000 ಜನ ಮರಳಿದ್ದಾರೆ. ವರನಾಳ ತಾಂಡಾ, ರಾಜನಾಳ ಚೋಕ್ಲಾ ನಾಯಕ ತಾಂಡಾ, ಮರಮಂಚಿ ತಾಂಡಾ, ದಿನಸಿ ತಾಂಡಾದ 150 ಜನ ಶನಿವಾರ ವಾಪಸ್ಸಾಗಿದ್ದಾರೆ. ಇವರನ್ನು ಕಿಣ್ಣಿ ಚೆಕ್‌ ಪೋಸ್ಟ್‌ ಬಳಿ ತಡೆದಿರುವ ತಾಲ್ಲೂಕು ಆಡಳಿತ ಹಳ್ಳಿಖೇಡ (ಕೆ) ಮೋರಾರ್ಜಿ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ.

‘ಮಹಾನರಗಳಿಂದ ಬರುವ ಇವರು ಯಾವುದೇ ತಪಾಸಣೆ ಮಾಡಿಸಿಕೊಂಡಿಲ್ಲ. ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದ ಗೃಹ ಬಂಧನದಲ್ಲಿ 14 ದಿನ ಇರಲು ಇವರು ತಯಾರಿಲ್ಲ. ಬಿಟ್ಟರೆ ತಾಂಡಾದಲ್ಲಿನ ಜನ ತಾಪಾಸಣೆ ಮಾಡಿಸಿ ಎಂದು ಕಿರಿಕಿರಿ ಮಾಡುತ್ತಾರೆ. ಇವರ ನಿರ್ವಹಣೆ ತಲೆನೋವಾಗಿದ್ದು, ಸದ್ಯ ತಕ್ಕಮಟ್ಟಿಗೆ ತಪಾಸಣೆ ಮಾಡಿ ಮುದ್ರೆ ಹಾಕಿ ಕಳುಹಿಸಿದ್ದೇವೆ’ ಎಂದು ತಾಲ್ಲೂಕು ಆಡಳಿತ ಸಿಬ್ಬಂದಿ ತಿಳಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಈ ತಾಂಡಾ ನಿವಾಸಿಗಳು ಒಂದೆಡೆ ಕೂರುವುದು ಸಾಧ್ಯದ ಮಾತಲ್ಲ. ಎಲ್ಲಡೆ ಸಂಚರಿಸುವ ಇವರಿಂದ ಕೊರೊನಾ ಹರಡುವ ಭೀತಿ ಕಾಡುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ಬರಸಿಡಿಲು: ‘ದೀಪಾವಳಿ ನಂತರ ಮಕ್ಕಳು, ವೃದ್ಧರು ಹೊರತುಪಡಿಸಿ ಬಹುತೇಕ ಜನ ಕೆಲಸ ಅರಸಿ ಮಹಾರಾಷ್ಟ್ರ, ತೆಲಂಗಾಣದ ಮಹಾನಗರಗಳಿಗೆ ತೆರಳುತ್ತೇವೆ. ನಾಲ್ಕೈದು ತಿಂಗಳು ದುಡಿದು ₹30–40 ಸಾವಿರ ಸಂಪಾದಿಸಿ ಜೂನ್‌–ಜುಲೈನಲ್ಲಿ ಕೃಷಿ ಚಟುವಟಿಗಳು ಆರಂಭವಾದಾಗ ತಾಂಡಾಕ್ಕೆ ಮರಳುತ್ತೇವೆ. ಈ ಹಣದಲ್ಲಿ ಒಂದಿಷ್ಟು ಬಿತ್ತನೆ ಬೀಜ,ಗೊಬ್ಬರ, ಮಕ್ಕಳ ವಿದ್ಯಾಭ್ಯಾಸ, ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ವ್ಯಯಿಸುತ್ತೇವೆ. ಆದರೆ ಈ ಬಾರಿ ಗುಳೆ ಹೊದ ನಮಗೆ ಬರ ಸಿಡಿಲು ಬಡಿದಿದೆ’ ಎಂದು ಹಿಂದಿರುಗಿದ ಗುಳೆ ಕಾರ್ಮಿಕರು ಕಷ್ಟ ಹೇಳಿಕೊಂಡರು.

‘ಕೆಲಸ ಆರಂಭಿಸಿ ತಿಂಗಳಾಗಿಲ್ಲ, ಕೊರೋನಾ ಭೀತಿ ಆವರಿಸಿದೆ. ಲಾಕ್‌ ಡೌನ್‌ ಗೋಷಣೆಗೆ ಮುನ್ನವೇ ನಮ್ಮನ್ನು ಕೆಲಸದಿಂದ ತೆಗೆದಿದ್ದಾರೆ. ತಿಂಗಳವರಗೆ ದುಡಿದ ದುಡ್ಡು ಈ 15 ದಿನ ಊಟ, ತಿಂಡಿಗೆ ಖರ್ಚಾಗಿದೆ. ಪ್ರತಿಯೊಬ್ಬರಿಗೆ ₹ 3 ಸಾವಿರ ಕೊಟ್ಟು ಗೂಡ್ಸ್‌ ವಾಹನದಲ್ಲಿ ಮರಳಿದ್ದೇವೆ. ಈಗ ನಮ್ಮ ಕೈಯಲ್ಲಿ ಬಿಡಿಗಾಸಿಲ್ಲ. ಇನ್ನು ಮುಂದೆ ಜೀವನ ನಿರ್ವಹಣೆ ದುಸ್ತರವಾಗಿದೆ’ ಎಂದು ಮುಂಬೈ, ಪುನಾ ಮತ್ತಿತರ ಕಡೆಯಿಂದ ಮರಳಿದ ತಾಂಡಾ ನಿವಾಸಿಗಳು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT