ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹುಟ್ಟಿ ಬಂದ ಏಸು!

ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುವ ಚರ್ಚ್‌, ಕ್ರಿಸ್ಮಸ್‌ ಟ್ರೀ
Last Updated 24 ಡಿಸೆಂಬರ್ 2019, 16:19 IST
ಅಕ್ಷರ ಗಾತ್ರ

ಹೊಸಪೇಟೆ: ಅದೊಂದು ದನದ ಕೊಟ್ಟಿಗೆ. ಹುಲ್ಲುಹಾಸಿನ ಮೇಲೆ ಪಿಳಪಿಳ ಕಣ್ಣು ಬಿಡುತ್ತಿರುವ ಏಸು. ಅದೇನೂ ಏಸು ಕ್ರಿಸ್ತ ಬಾಲ ಏಸುವಾಗಿ ಮತ್ತೆ ಹುಟ್ಟಿ ಬಂದನೇ?

ಹೌದು, ಇಂತಹದ್ದೊಂದು ಪ್ರಶ್ನೆ ಮೂಡುವಂತೆ ಏಸುವಿನ ಜನನವನ್ನು ಮರುಸೃಷ್ಟಿ ಮಾಡಲಾಗಿದೆ ನಗರದ ಕೆಥೊಲಿಕ್‌ ಚರ್ಚ್‌ ಆವರಣದಲ್ಲಿ.

ಈಗ ಆ ಗೋದಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರಾರ್ಥನೆಗಾಗಿ ಚರ್ಚ್‌ಗೆ ಬಂದು ಹೋಗುತ್ತಿರುವವರು ಒಂದು ಕ್ಷಣ ಗೋದಲಿ ಕಣ್ತುಂಬಿಕೊಂಡು ಹೋಗುತ್ತಿದ್ದಾರೆ. ಅನ್ಯ ಧರ್ಮೀಯರು ಅದನ್ನು ನೋಡಲೆಂದೆ ಬಂದು ಹೋಗುತ್ತಿದ್ದಾರೆ. ಅಷ್ಟೇ ಅಲ್ಲ, ಅದನ್ನು ಅವರ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಹೀಗೆ ನಗರದ ಎಲ್ಲಾ ಚರ್ಚುಗಳಲ್ಲಿ ಅಂತಹದ್ದೊಂದು ಗೋದಲಿ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು ಕ್ರಿಸ್ಮಸ್‌ ಟ್ರೀ ಇಲ್ಲದೆ ಹಬ್ಬ ಅಪೂರ್ಣ. ಚರ್ಚುಗಳಿಗೆ ವಿದ್ಯುದ್ದೀಪಾಲಂಕಾರ ಮಾಡಿ, ಕ್ರಿಸ್ಮಸ್‌ ಟ್ರೀ ಪ್ರತಿಷ್ಠಾಪಿಸಲಾಗಿದ್ದು, ಹೊಸ ಕಳೆ ತಂದುಕೊಟ್ಟಿದೆ. ಇದೇ ದೃಶ್ಯ ಕ್ರೈಸ್ತರ ಮನೆಗಳಲ್ಲೂ ಕಂಡು ಬರುತ್ತಿದೆ.

ಈಗಾಗಲೇ ಪೂಜಾ ವಿಧಿ ವಿಧಾನಗಳು, ಪ್ರಾರ್ಥನೆ ಆರಂಭಗೊಂಡಿವೆ. ಬುಧವಾರ (ಡಿ.25) ಬೆಳಗಿನ ತನಕ ಮುಂದುವರೆಯಲಿದೆ. ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ತೆರೆ ಬೀಳಲಿದೆ. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವರು. ನಂತರ ಅವರವರ ಮನೆಯಲ್ಲಿ ಹಬ್ಬ ಆಚರಿಸುವರು.

ಬಗೆಬಗೆಯ ಕೇಕ್‌, ಬಿಸ್ಕತ್‌:

ಹಬ್ಬಕ್ಕೆಂದೇ ಕ್ರೈಸ್ತರ ಮನೆಗಳಲ್ಲಿ ಬಗೆಬಗೆಯ ಕೇಕ್‌, ಬಿಸ್ಕತ್‌, ಸಿಹಿ ತಿನಿಸುಗಳು ತಯಾರಾಗುತ್ತಿವೆ. ಮನೆ ಮಂದಿಯೆಲ್ಲ ಕೂಡಿಕೊಂಡು ಅವರಿಗೆ ಇಷ್ಟವಾದ ಕೇಕ್‌ಗಳನ್ನು ತಯಾರಿಸುತ್ತಿದ್ದಾರೆ. ಕೆಲವರು ಬೇಕರಿಗಳಲ್ಲಿ ಅವರಿಗಿಷ್ಟವಾದ ಕೇಕ್‌ ಮಾಡಿಸಿದ್ದಾರೆ. ಈಗಾಗಲೇ ಹೊಸ ಬಟ್ಟೆ ಖರೀದಿಸಿದ್ದು, ಬುಧವಾರ ಕುಟುಂಬ ಸದಸ್ಯರೆಲ್ಲರೂ ಒಟ್ಟುಗೂಡಿ ಕೇಕ್‌ ಕತ್ತರಿಸುವ ಮೂಲಕ ಕ್ರಿಸ್ಮಸ್‌ ಹಬ್ಬ ಆಚರಿಸುವರು.

ಪರಸ್ಪರ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆಗಳನ್ನು ವಿನಿಮಯ ಮಾಡಿಕೊಳ್ಳುವರು. ಬಳಿಕ ಸಿಹಿ ಖಾದ್ಯಗಳ ಜತೆಗೆ ಚಾಕ್‌ಲೇಟ್‌, ವೈನ್‌, ಮಾಂಸಾಹಾರ ಸವಿಯುವವರು. ಅನ್ಯ ಧರ್ಮೀಯರನ್ನು ಆಹ್ವಾನಿಸಿ, ಅವರಿಗೆ ಮನೆಯಲ್ಲಿ ತಯಾರಿಸಿದ ಸಿಹಿ ಪದಾರ್ಥಗಳನ್ನು ಉಣಬಡಿಸಿ ಸೌಹಾರ್ದತೆ ಮೆರೆಯಲು ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಹೊರದೇಶದಿಂದ ಬಂದರು:

ಕುಟುಂಬ ಸದಸ್ಯರ ಜತೆ ಹಬ್ಬ ಆಚರಿಸಲು ಹೊರದೇಶಗಳಲ್ಲಿ ನೆಲೆಸಿದ್ದ ಸ್ಥಳೀಯರು ಭಾನುವಾರವೇ ಊರಿಗೆ ಹಿಂತಿರುಗಿದ್ದಾರೆ. ಸೌದಿ ಅರೇಬಿಯಾ, ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಇತರೆ ದೇಶಗಳಿಂದ ತಾಯ್ನಾಡಿಗೆ ಮರಳಿದ್ದಾರೆ.

ಇಲ್ಲಿನ ಚಪ್ಪರದಹಳ್ಳಿ ನಿವಾಸಿ ರಾಜು ಎಂಬುವರ ಮಗ ರಾಹುಲ್‌, ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ. ಪ್ರತಿ ವರ್ಷ ತಪ್ಪದೇ ಕ್ರಿಸ್ಮಸ್‌ ಹಬ್ಬಕೆಂದೇ ಬರುವುದು ವಿಶೇಷ. ‘ನನ್ನ ಮಗ ಪ್ರತಿ ವರ್ಷ ಹಬ್ಬಕ್ಕೆ ಊರಿನಿಂದ ಬರುತ್ತಾನೆ. ಎಷ್ಟೇ ಕೆಲಸದ ಒತ್ತಡವಿರಲಿ ಹಬ್ಬಕ್ಕೆ ಬರುವುದು ಮರೆಯುವುದಿಲ್ಲ. ಆತ ಬಂದರೆ ನಮಗೂ ಬಹಳ ಖುಷಿ. ಕ್ರೈಸ್ತರಿಗೆ ಕ್ರಿಸ್ಮಸ್‌ ಬಹಳ ದೊಡ್ಡ ಹಬ್ಬ. ಮನೆ ಮಂದಿಯೆಲ್ಲ ಒಟ್ಟಿಗಿದ್ದರೆ ಅದರ ಸಂಭ್ರಮವೇ ಬೇರೆ’ ಎಂದು ರಾಜು ಹೇಳಿದರು.

‘ಕ್ರಿಸ್ಮಸ್‌ ಹಬ್ಬದ ಸಂಭ್ರಮ ಜನವರಿ ಒಂದನೇ ತಾರೀಖಿನ ಹೊಸ ವರ್ಷದ ವರೆಗೆ ಹಾಗೆಯೇ ಇರುತ್ತದೆ. ಅಷ್ಟೂ ದಿನ ಎಲ್ಲರೂ ಒಟ್ಟಿಗೆ ಇರುತ್ತೇವೆ. ಎಲ್ಲರೂ ಕೂಡಿಕೊಂಡು ನಮಗಿಷ್ಟವಾದ ಸಿಹಿ ಪದಾರ್ಥ, ಆಹಾರ ತಯಾರಿಸುತ್ತೇವೆ. ಸಂಬಂಧಿಕರು, ಗೆಳೆಯರನ್ನು ಮನೆಗೆ ಆಹ್ವಾನಿಸಿ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT