ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಹಂಪಿ ಬೈ–ನೈಟ್‌ಗೆ ಮುಹೂರ್ತ

ದಶಕದಿಂದ ನನೆಗುದಿಗೆ ಬಿದ್ದಿದ್ದ ಯೋಜನೆ; ₹11 ಕೋಟಿ ವೆಚ್ಚದಲ್ಲಿ ಪೂರ್ಣ
Last Updated 26 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ದಶಕದಿಂದ ನನೆಗುದಿಗೆ ಬಿದ್ದಿದ್ದ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಮಹತ್ವಕಾಂಕ್ಷಿ ಹಂಪಿ ಬೈ–ನೈಟ್‌ ಯೋಜನೆ ಕೊನೆಗೊಂಡಿದ್ದು, ಅದರ ಆರಂಭಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.

ಬರುವ ಜ. 10,11ರಂದು ‘ಹಂಪಿ ಉತ್ಸವ’ ನಡೆಯಲಿದ್ದು, ಅದಕ್ಕೂ ಮುನ್ನವೇ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ತೀರ್ಮಾನಿಸಿದೆ. ಜ. 7ರಂದು ವಿಧ್ಯುಕ್ತವಾಗಿ ಯೋಜನೆಗೆ ಚಾಲನೆ ಕೊಡಲು ನಿರ್ಧರಿಸಲಾಗಿದೆ. ಆದರೆ, ಇನ್ನಷ್ಟೇ ಅಧಿಕೃತವಾಗಿ ದಿನಾಂಕ ನಿರ್ಧಾರವಾಗಬೇಕಿದೆ.

2008–09ರಲ್ಲಿ ರೂಪಿಸಿದ ಈ ಯೋಜನೆಗೆ ಅಂದಿನ ಸರ್ಕಾರ ₹11 ಕೋಟಿ ಅನುದಾನ ನೀಡಿತ್ತು. ಆರಂಭದಲ್ಲಿ ಉತ್ಸಾಹದಿಂದ ಪ್ರಾಧಿಕಾರ ಕೆಲಸ ಕೈಗೆತ್ತಿಕೊಂಡು ಪೂರ್ಣಗೊಳಿಸಿತು. ಹಂಪಿಯ ಆಯ್ದ ಸ್ಮಾರಕಗಳ ಬಳಿ ವಿದ್ಯುದ್ದೀಪಗಳನ್ನು ಅಳವಡಿಸಿ, ಪ್ರಾಯೋಗಿಕವಾಗಿ ಪರೀಕ್ಷೆ ಕೂಡ ನಡೆಸಿತ್ತು. ಅದರ ನಿರ್ವಹಣೆ, ಕಾರ್ಯಗತಗೊಳಿಸುವ ವಿಚಾರದಲ್ಲಿ ಗೊಂದಲ ಉಂಟಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು.

ಬಳಿಕ ಅದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದರಿಂದ ಮಳೆ, ಗಾಳಿಯಿಂದ ಹಲವೆಡೆ ವಿದ್ಯುದ್ದೀಪಗಳು, ತಂತಿಗಳು ಸಂಪೂರ್ಣವಾಗಿ ಹಾಳಾಗಿದ್ದವು. ಈ ಕುರಿತು ವಿಶ್ವ ಪ್ರವಾಸೋದ್ಯಮ ದಿನದಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿ ಬೆಳಕು ಚೆಲ್ಲಿತ್ತು. ಅದರಿಂದ ಎಚ್ಚೆತ್ತುಕೊಂಡ ಪ್ರಾಧಿಕಾರ ದುರಸ್ತಿ ಕೆಲಸ ಕೈಗೆತ್ತಿಕೊಂಡಿತ್ತು. ಈಗ ಆ ಕೆಲಸ ಪೂರ್ಣಗೊಂಡಿದ್ದು, ಯೋಜನೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

‘ಯೋಜನೆಗಾಗಿಯೇ ಪ್ರತ್ಯೇಕವಾಗಿ ಆರು ಟ್ರಾನ್ಸಫಾರ್ಮರ್‌ಗಳಿಗೆ ವ್ಯವಸ್ಥೆ ಮಾಡಿಕೊಡುವಂತೆ ಗುತ್ತಿಗೆದಾರರು ಬೇಡಿಕೆ ಇಟ್ಟಿದ್ದರು. ಟ್ರಾನ್ಸಫಾರ್ಮರ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಅವರಿಗೆ ಕಲ್ಪಿಸಲಾಗಿದೆ. ಈಗ ಕೆಲಸ ಪೂರ್ಣಗೊಂಡಿದೆ’ ಎಂದು ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಂಡದಂತಹ ಬಿಸಿಲಿನಲ್ಲಿ ಯಾರು ಹಂಪಿ ಸ್ಮಾರಕಗಳನ್ನು ನೋಡಲು ಇಷ್ಟಪಡುವುದಿಲ್ಲವೋ ಅಂತಹವರಿಗಾಗಿ ರಾತ್ರಿ ವೇಳೆ ವೀಕ್ಷಣೆಗಾಗಿ ಈ ಯೋಜನೆ ರೂಪಿಸಲಾಗಿದೆ. ದೇಶ– ವಿದೇಶಗಳಲ್ಲಿನ ಶ್ರೀಮಂತ ವರ್ಗದವರನ್ನು ಆಕರ್ಷಿಸುವ ಉದ್ದೇಶವೂ ಇದರ ಹಿಂದಿದೆ. ಇದು ಜಾರಿಗೆ ಬಂದರೆ ದೊಡ್ಡ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳೆವಣಿಗೆಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಹಿರಿಯ ರಂಗಕರ್ಮಿ ಪಿ. ಅಬ್ದುಲ್ಲಾ.

‘ತಡವಾಗಿಯಾದರೂ ಎಚ್ಚೆತ್ತುಕೊಂಡ ಕೆಲಸ ಮುಗಿಸಿರುವುದು ಸ್ವಾಗತಾರ್ಹ. ಅದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಹೊಣೆಗಾರಿಕೆ ಪ್ರಾಧಿಕಾರದ ಮೇಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT