ಶನಿವಾರ, ಸೆಪ್ಟೆಂಬರ್ 18, 2021
27 °C

pending ಮೂರನೇ ಅಲೆಯ ಭೀತಿ ನಡುವೆ ಪ್ರವಾಸಿ ತಾಣಗಳತ್ತ ಜನರ ದಂಡು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೊರೊನಾ ಮೂರನೇ ಅಲೆಯ ಭೀತಿಯ ನಡುವೆ ಪ್ರವಾಸಿ ತಾಣಗಳನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಲಾಕ್‌ಡೌನ್‌ನಿಂದ ಅನೇಕ ದಿನಗಳ ಕಾಲ ಜನ ಮನೆಯಲ್ಲಿದ್ದರು. ಲಾಕ್‌ಡೌನ್‌ ತೆರವಾಗಿದ್ದರೂ ಜನರಿಗೆ ಪ್ರವಾಸಿ ತಾಣಗಳ ಭೇಟಿ ಮೇಲೆ ನಿರ್ಬಂಧ ಹೇರಲಾಗಿತ್ತು. ಎಲ್ಲಿಗೂ ಹೋಗಲಾಗದೆ ಮನೆಯಲ್ಲೇ ಕುಳಿತು ಬೇಸತ್ತಿದ್ದ ಜನ, ಪ್ರವಾಸಿ ತಾಣಗಳ ಪ್ರವೇಶದ ಮೇಲಿನ ನಿರ್ಬಂಧ ಹಿಂಪಡೆಯುತ್ತಿದ್ದಂತೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ.

ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರದ ಪ್ರಮುಖ ಪ್ರವಾಸಿ ತಾಣಗಳಾದ ಹಂಪಿ, ಬಳ್ಳಾರಿ ಕೋಟೆ, ಹಗರಿಬೊಮ್ಮನಯಳ್ಳಿಯ ಅಂಕಸಮುದ್ರ ಪಕ್ಷಿಧಾಮ, ಸಂಡೂರಿನ ಬೆಟ್ಟಗುಡ್ಡ, ನಾರಿಹಳ್ಳಿ ಜಲಾಶಯ, ಕುಮಾರಸ್ವಾಮಿ ದೇಗುಲ, ಹರಪನಹಳ್ಳಿ ತಾಲ್ಲೂಕಿನ ಉಚ್ಚೆಂಗಿದುರ್ಗ, ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ, ಮೈಲಾರ –ಕುರುವತ್ತಿ ಸುಕ್ಷೇತ್ರ, ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರವಾಸಿಗರ ಹಿಂಡು ಕಾಣಿಸಿಕೊಳ್ಳುತ್ತಿದೆ.

ಎಲ್ಲೆಲ್ಲೂ ಪ್ರವಾಸಿಗರ ದಂಡೇ ಕಂಡು ಬರುತ್ತಿದೆ. ಅದರಲ್ಲೂ ವಾರಾಂತ್ಯದಲ್ಲಿ ಹೆಚ್ಚಿನ ಜನದಟ್ಟಣೆ ಇರುತ್ತಿದೆ. ನೆರೆ ಜಿಲ್ಲೆ, ರಾಜ್ಯಗಳಿಂದಲೂ ಅಸಂಖ್ಯ ಜನ ಭೇಟಿ ಕೊಡುತ್ತಿದ್ದಾರೆ. ಆದರೆ, ಕೋವಿಡ್‌ ಪರೀಕ್ಷೆಗೆ ಒಳಪಟ್ಟ ವರದಿ ಪರಿಶೀಲನೆಯಾಗಲಿ, ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸುತ್ತಿಲ್ಲ. ಮಾಸ್ಕ್‌ ಧರಿಸದೇ ಓಡಾಡುತ್ತಿರುವವರಿಗೆ ದಂಡವಷ್ಟೇ ವಿಧಿಸಲಾಗುತ್ತಿದೆ.

ಹಂಪಿ ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ಗಳಲ್ಲೂ ಪ್ರವಾಸಿಗರ ಕೋವಿಡ್‌ ವರದಿ ಪರಿಶೀಲಿಸದೇ ಬಾಡಿಗೆಗೆ ಕೊಠಡಿ ಕೊಡುತ್ತಿದ್ದಾರೆ. ಇದು ಸಹಜವಾಗಿಯೇ ಕೊರೊನಾ ಹರಡುವ ಆತಂಕ ಸೃಷ್ಟಿಸಿದೆ. ಇನ್ನು, ಮುನ್ನೆಚ್ಚರಿಕೆ ಕ್ರಮವಾಗಿ ತುಂಗಭದ್ರಾ ಜಲಾಶಯಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

‘ರಾಜ್ಯದ ಎಲ್ಲ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನಿಂದ ಅನ್ಯ ರಾಜ್ಯದವರ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಇಲ್ಲಿ ಪುನಃ ನಡೆಸುತ್ತಿಲ್ಲ. ಆದರೆ, ಹೋಟೆಲ್‌ನವರು ಪ್ರವಾಸಿಗರ ಕೋವಿಡ್‌ ವರದಿ ಪರಿಶೀಲಿಸಿ ಕೊಠಡಿ ಕಾಯ್ದಿರಿಸಲು ಸೂಚಿಸಲಾಗಿದೆ’ ಎಂದು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ತಿಳಿಸಿದ್ದಾರೆ.

ಹೆಚ್ಚಿನ ಪ್ರವಾಸಿಗರು ಬರುತ್ತಿರುವುದರಿಂದ ಸ್ಥಳೀಯ ಗೈಡ್‌ಗಳಿಗೆ ಈಗ ಕೆಲಸ ಸಿಕ್ಕಿದೆ. ಸ್ಥಳೀಯ ಹೋಟೆಲ್‌, ಫಾಸ್ಟ್‌ಫುಡ್‌, ಎಳನೀರು, ತೆಂಗಿನ ಕಾಯಿ, ಬಾಳೆಹಣ್ಣು, ಆಟೊ, ಕ್ಯಾಬ್‌ದವರಿಗೆ ಬೇಡಿಕೆ ಸೃಷ್ಟಿಯಾಗಿದೆ.

ಹಂಪಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರುವುದರಿಂದ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಈಗಲೂ ಹಂಪಿಯಲ್ಲಿ ಪ್ರವಾಸಿಗರಿಗೆ ಬೇಕಾದ ಅಗತ್ಯ ಮೂಲಸೌಕರ್ಯಗಳು ಇಲ್ಲ. ಸ್ನಾನಘಟ್ಟದಲ್ಲಿ ಬಟ್ಟೆ ಬದಲಿಸಿಕೊಳ್ಳುವ ವ್ಯವಸ್ಥೆ, ಶೌಚಾಲಯ, ಕಡಿಮೆ ವೆಚ್ಚದ ಕೊಠಡಿಗಳು ಇಲ್ಲ. ಅವಳಿ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಲ್ಲೂ ಇದಕ್ಕಿಂತ ಪರಿಸ್ಥಿತಿ ಭಿನ್ನವಾಗಿಲ್ಲ.

– ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಕೆ. ಸೋಮಶೇಖರ್‌, ಎ.ಎಂ. ಸೋಮಶೇಖರ್‌, ಸಿ.ಶಿವಾನಂದ, ವಿ.ಎಂ. ನಾಗಭೂಷಣ್‌, ರಾಮಚಂದ್ರ ನಾಗತಿಕಟ್ಟೆ, ಜಿ. ಕರಿಬಸವರಾಜ

 

 /ಬಾಕ್ಸ್‌/

ಪಾಲನೆಯಾಗದ ಮಾರ್ಗಸೂಚಿ
ಹೂವಿನಹಡಗಲಿ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರಗಳಾದ ಮೈಲಾರ ಮತ್ತು ಕುರುವತ್ತಿ ಸುಕ್ಷೇತ್ರಗಳಿಗೆ ಲಾಕ್ ಡೌನ್ ನಿರ್ಬಂಧ ತೆರವು ಬಳಿಕ ರಾಜ್ಯ, ಹೊರ ರಾಜ್ಯಗಳ ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ. ಹೊರಗಿನಿಂದ ಬರುವವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದರಿಂದ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮೈಲಾರ ಸುಕ್ಷೇತ್ರಕ್ಕೆ ಪ್ರತಿ ಭಾನುವಾರ ಹಾಗೂ ಹುಣ್ಣಿಮೆಯಂದು ಅಪಾರ ಭಕ್ತರು ಆಗಮಿಸಿ ಮೈಲಾರಲಿಂಗೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ. ನೆರೆಯ ಮಹಾರಾಷ್ಟ್ರ, ಕೇರಳ, ಆಂಧ್ರ ರಾಜ್ಯಗಳಿಂದಲೂ ಭಕ್ತರೂ ಇಲ್ಲಿಗೆ ಬರುತ್ತಾರೆ. ಹಾಗೆಯೇ ಕುರುವತ್ತಿ ಸುಕ್ಷೇತ್ರಕ್ಕೆ ಸೋಮವಾರ, ಗುರುವಾರ ಹಾಗೂ ಅಮಾವಾಸ್ಯೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯುತ್ತಾರೆ. ಎರಡೂ ಸುಕ್ಷೇತ್ರಗಳಲ್ಲಿ ದೇವಸ್ಥಾನ ಸಮಿತಿಯವರು ಮಾರ್ಗಸೂಚಿ ಪಾಲಿಸುವಂತೆ ಸೂಚನಾ ಫಲಕಗಳನ್ನು ಎಲ್ಲೆಡೆ ಅಳವಡಿಸಿದ್ದರೂ ಭಕ್ತರು ಉಪೇಕ್ಷಿಸುತ್ತಿದ್ದಾರೆ. ಇಲ್ಲಿಗೆ ಬರುವ ಬಹುತೇಕ ಭಕ್ತರು ಮಾಸ್ಕ್ ಕೂಡ ಧರಿಸದಿರುವುದು ಸ್ಥಳೀಯರ ಆತಂಕಕ್ಕೆ ಕಾರಣ.

ಬಳ್ಳಾರಿಯ ಕಾಶ್ಮೀರಕ್ಕೂ ಜನ ಲಗ್ಗೆ
ಸಂಡೂರು: ಬಳ್ಳಾರಿ ಜಿಲ್ಲೆಯ ಕಾಶ್ಮೀರ ಎಂದೇ ಹೆಸರಾಗಿರುವ ಸಂಡೂರಿಗೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ.
ಸತತ ಮಳೆಗೆ ಸಂಡೂರು ಹಸಿರು ಹೊದ್ದು ನಿಂತಿದೆ. ಸದಾ ಮಂಜಿನಿಂದ ಆವರಿಸಿಕೊಂಡಿರುತ್ತದೆ. ನಾರಿಹಳ್ಳ ಜಲಾಶಯ ಮೈದುಂಬಿಕೊಂಡು ಹರಿಯುತ್ತಿರುವುದರಿಂದ ಕಣ್ಮನ ಸೆಳೆಯುತ್ತಿದೆ. ಕುಮಾರಸ್ವಾಮಿ ದೇವಸ್ಥಾನ ಬಿಟ್ಟರೆ ಬೇರೆಲ್ಲೂ ಜನ ಸೇರುವ ಸ್ಥಳಗಳಿಲ್ಲ. ಬೆಟ್ಟ, ಗುಡ್ಡ, ಜಲಾಶಯದ ತೀರದಲ್ಲಿ ನಿಂತು ನೋಡುವುದರಿಂದ ಜನ ಗುಂಪು ಗುಂಪಾಗಿ ಸೇರುವ ಸಾಧ್ಯತೆ ತೀರ ಕಡಿಮೆ. ಹೀಗಾಗಿ ಕೊರೊನಾ ಹರಡುವ ಸಾಧ್ಯತೆ ತೀರ ಕಡಿಮೆ.

ಉಚ್ಚೆಂಗೆಮ್ಮ ಭಕ್ತರ ಸಂಖ್ಯೆಯಲ್ಲಿ ಏರಿಕೆ
ಅರಸೀಕೆರೆ/ಉಚ್ಚಂಗಿದುರ್ಗ: ಇಲ್ಲಿನ ಉಚ್ಚಂಗೆಮ್ಮನ ದೇವಿ ಗುಡ್ಡಕ್ಕೆ ಲಾಕ್ ಡೌನ್ ಸಡಿಲಿಕೆ ಬಳಿಕ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.
ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
ಲಾಕ್ ಡೌನ್ ಗೂ ಮೊದಲು ದೇವಸ್ಥಾನಕ್ಕೆ ಮಂಗಳವಾರ ಹಾಗೂ ಶುಕ್ರವಾರ 3ರಿಂದ5 ಸಾವಿರ ಭಕ್ತರು ಭೇಟಿ ನೀಡುತ್ತಿದ್ದರು. ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಿಧಿಸಿದ ಪರಿಣಾಮ ಪ್ರವಾಸಿಗರ ಸಂಖ್ಯೆ ತೀರ ಕಡಿಮೆ ಆಗಿತ್ತು. ಈಗ ನಿಯಮಗಳ ಸಡಿಲಿಕೆ ಬಳಿಕ, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. 12 ದಿನಗಳಲ್ಲಿ ಅಂದಾಜು 15 ಸಾವಿರದಷ್ಟು ಭಕ್ತರ ದೇವಿ ದರ್ಶನ ಪಡೆದಿದ್ದಾರೆ.
ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗುವ ರಾಜ್ಯ ‘ಎ’ ಶ್ರೇಣಿಯ ದೇವಸ್ಥಾನಗಳಲ್ಲಿ ಉಚ್ಚಂಗೆಮ್ಮ ದೇವಿ ದೇವಸ್ಥಾನವು ಸಹ ಒಂದಾಗಿದೆ. ಆದರೆ, ಇಲ್ಲಿಗೆ ಬರುವ ಭಕ್ತರಿಗೆ ಸುಸಜ್ಜಿತ ಯಾತ್ರಿ ನಿವಾಸ, ಸ್ನಾನದ ಕೋಣೆಗಳ ಕೊರತೆ ಇದೆ. ಮುಜುರಾಯಿ ಇಲಾಖೆ ಬೊಕ್ಕಸ ತುಂಬಿಸುವ ದೇವಸ್ಥಾನಕ್ಕೆ ಗುಣಮಟ್ಟದ ರಸ್ತೆ ನಿರ್ಮಾಣ ಆಗದಿರುವುದಕ್ಕೆ ಲಕ್ಷಾಂತರ ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು