ಭಾನುವಾರ, ಆಗಸ್ಟ್ 14, 2022
28 °C

ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರ; ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಗೋಹತ್ಯೆ ನಿಷೇಧ ಕಾನೂನು ಅಂಗೀಕಾರಗೊಂಡಿರುವುದರಿಂದ ಬಿಜೆಪಿ ಕಾರ್ಯಕರ್ತರು ಗುರುವಾರ ಇಲ್ಲಿನ ರೋಟರಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಆಕಳಿಗೆ ಪೂಜೆ ಸಲ್ಲಿಸಿ, ಹಿಟ್ಟು, ಮೇವು ಕೊಟ್ಟರು. ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಬಳಿಕ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಪರ ಘೋಷಣೆ ಕೂಗಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ ಮಾತನಾಡಿ, ಗೋ ಹತ್ಯೆ ನಿ಼ಷೇಧಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು.‌ಅದಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಇದೊಂದು ಐತಿಹಾಸಿಕ ನಿರ್ಧಾರ' ಎಂದು ಬಣ್ಣಿಸಿದರು.

‘ಮುದಿ ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸಿದರೆ ತಪ್ಪೇನೂ ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ. ವಯಸ್ಸಾದ ಅವರ ತಂದೆ-ತಾಯಿಯನ್ನು ಕಾಡಿಗೆ ಅಟ್ಟುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಹಲವು ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ದೊಡ್ಡ ಬದಲಾವಣೆ ತರುತ್ತಿವೆ. ರಾಮಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿ ಅದನ್ನು ಅಖಂಡ ಭಾರತದ ಭಾಗ ಮಾಡಿರುವುದು ದೊಡ್ಡ ಕೆಲಸ. ಬರುವ ದಿನಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಕೂಡ ಕೇಂದ್ರ ಸರ್ಕಾರ ಜಾರಿಗೆ ತರುವ ವಿಶ್ವಾಸವಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಪ್ರಧಾನ ಕಾರ್ಯದರ್ಶಿ ಜೀವರತ್ನಂ, ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಕಾಸೆಟ್ಟಿ ಉಮಾಪತಿ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು