ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಹೆದ್ದಾರಿ ಪ್ರಾಧಿಕಾರದಿಂದ ನಿರ್ವಹಣೆ ಕೊರತೆ; ಜಿನುಗುತ್ತಿದೆ ಮಳೆ ನೀರು

ಸುರಂಗ ಮಾರ್ಗದಲ್ಲಿ ಮೂಡಿದ ಬಿರುಕು!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ನಗರದ ಹೊರವಲಯದ ಗುಂಡಾ ಸಸ್ಯ ಉದ್ಯಾನ ಬಳಿಯಿರುವ ಸುರಂಗ ಮಾರ್ಗ ಶಿಥಿಲಗೊಂಡಿದ್ದು, ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ರಾಷ್ಟ್ರೀಯ ಹೆದ್ದಾರಿ 50ರ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸುರಂಗದ ಒಳಭಾಗ ಸಿಮೆಂಟ್‌ ಬ್ಲಾಕ್‌ಗಳ ಸಂಚರನೆಯಿಂದ ಕೂಡಿದೆ. ಆದರೆ, ಈಗ ಅವುಗಳಲ್ಲಿ ಬಿರುಕು ಮೂಡಿದೆ. ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದ ಅದು ಮತ್ತಷ್ಟು ಹೆಚ್ಚಾಗಿದೆ.

ಸುರಂಗದ ಮೇಲ್ಭಾಗದಲ್ಲಿ ಬೀಳುವ ಮಳೆ ನೀರು ನೇರವಾಗಿ ಬಿರುಕು ಬಿಟ್ಟ ಬ್ಲಾಕ್‌ಗಳಿಂದ ಹೆದ್ದಾರಿ ಮೇಲೆ ಬಂದು ನಿಲ್ಲುತ್ತಿದೆ. ಇದರ ಪರಿಣಾಮ ಅಲ್ಲಲ್ಲಿ ಮಳೆ ನೀರು ನಿಂತು ಕೊಚ್ಚೆಯಾಗುತ್ತಿದೆ. ಬ್ಲಾಕ್‌ಗಳಲ್ಲಿ ಫಂಗಸ್‌ ಕಾಣಿಸಿಕೊಂಡಿದೆ. ಅಲ್ಲಲ್ಲಿ ಸಿಮೆಂಟ್‌ ಕಿತ್ತು ಹೋಗಿದೆ. ಈ ಬ್ಲಾಕ್‌ಗಳ ಮೂಲಕ ವಿದ್ಯುತ್‌ ತಂತಿ ಹಾದು ಹೋಗಿದ್ದು, ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಸೋರಿಕೆ ತಡೆಗಟ್ಟದಿದ್ದರೆ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗುವ ಅಪಾಯವೂ ಇದೆ.

ಅಂದಹಾಗೆ, ಈ ಹೆದ್ದಾರಿಯು ವಿಜಯಪುರ, ಬಾಗಲಕೋಟೆ, ಸೋಲಾಪುರ, ಚಿತ್ರದುರ್ಗ, ಬೆಂಗಳೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಉಕ್ಕಿನ ಕಾರ್ಖಾನೆಗಳು, ಅದಿರಿನ ಗಣಿಗಳಿಗೂ ಇದೇ ಮಾರ್ಗದ ಮೂಲಕ ನಿತ್ಯ ನೂರಾರು ಟ್ರಕ್‌ಗಳು ಚಲಿಸುತ್ತವೆ.

ಹಗಲು–ರಾತ್ರಿ ವಾಹನ ದಟ್ಟಣೆಯಿಂದ ಕೂಡಿರುವ ಈ ಮಾರ್ಗ ಹಿಂದೆ ಕಣಿವೆ ವೀರಭದ್ರೇಶ್ವರ ದೇವಸ್ಥಾನದ ಗುಡ್ಡಕ್ಕೆ ಹೊಂದಿಕೊಂಡಂತೆ ಹೋಗಿತ್ತು. ಮಧ್ಯದಲ್ಲಿ ರೈಲು ಹಳಿ ಹಾದು ಹೋಗಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ಅದನ್ನು ಮನಗಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗುಡ್ಡ ಕೊರೆದು ಸುರಂಗ ಮಾರ್ಗ ನಿರ್ಮಿಸಲಾಗಿದ್ದು, 2014ರ ಫೆಬ್ರುವರಿಯಲ್ಲಿ ಅದನ್ನು ಉದ್ಘಾಟಿಸಲಾಯಿತು. ಸುರಂಗದ ಒಳಗಿನಿಂದ ವಾಹನಗಳು ಹಾದು ಹೋದರೆ, ಮೇಲ್ಭಾಗದ ಹಳಿಯಿಂದ ರೈಲುಗಳು ಓಡಾಡುತ್ತವೆ.

ಯಾವುದೇ ಅಡೆತಡೆಯಿಲ್ಲದೆ ವಾಹನಗಳು, ರೈಲುಗಳು ಓಡಾಡುತ್ತವೆ. ಪ್ರಾಧಿಕಾರದ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಸುರಂಗದ ನಿರ್ವಹಣೆ ಕೊರತೆಯಿಂದ ಅದು ಶಿಥಿಲಗೊಳ್ಳುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

‘ವಿಶ್ವ ದರ್ಜೆಯ ಗುಣಮಟ್ಟದಿಂದ ಹೆದ್ದಾರಿ ಪ್ರಾಧಿಕಾರದವರು ಸುರಂಗ ಮಾರ್ಗ ನಿರ್ಮಿಸಿದ್ದರು. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿಯೇ ಆರು ವರ್ಷಗಳಲ್ಲಿ ಅದು ಶಿಥಿಲಗೊಂಡಿದೆ. ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ ಈ ಸುರಂಗ ಮಾರ್ಗ. ಇದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ. ಹಾಗಾಗಿ ಆದ್ಯತೆಯ ಮೇರೆಗೆ ಅದನ್ನು ದುರಸ್ತಿಗೊಳಿಸಬೇಕು’ ಎಂದು ಸ್ಥಳೀಯ ನಿವಾಸಿ ಬಸವರಾಜ ಆಗ್ರಹಿಸಿದರು.

ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು