ಬುಧವಾರ, ಜುಲೈ 6, 2022
21 °C
ಪ್ರಶ್ನೆ ಹುಟ್ಟುಹಾಕಿದ ದಾಖಲೆಗಳು

ಮಗು ಮಾರಾಟ ಪ್ರಕರಣಕ್ಕೆ ತಿರುವು: ಹೆತ್ತವರೊಬ್ಬರು, ದಾಖಲೆಯಲ್ಲಿ ಇನ್ನೊಬ್ಬರ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಮಗು ಮಾರಾಟ ಶಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದವರು ಒಬ್ಬರಾದರೆ, ದಾಖಲೆಯಲ್ಲಿ ಇನ್ನೊಬ್ಬರ ಹೆಸರು ನಮೂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ದಾಮೋದಿ ಚದರಂಗಿ ಅವರ ಪತ್ನಿ ವಸಂತಾ ಎಂಬುವವರು ಗರ್ಭಿಣಿಯಾಗಿದ್ದರು. ಗುರುರಾಜ್‌-ಪ್ರಿಯಾಂಕ ದಂಪತಿ ಹಾಲ ಸ್ವಾಮೀಜಿ ಮೂಲಕ ವಸಂತಾ ಅವರನ್ನು ಕರೆಸಿಕೊಂಡು ಸ್ಥಳೀಯ ನರ್ಸಿಂಗ್‌ ಹೋಂನಲ್ಲಿ ಹೆರಿಗೆ ಮಾಡಿಸಿದ್ದರು. ಬಳಿಕ ಮಗು ಮೃತಪಟ್ಟಿದೆ ಎಂದು ಹೇಳಿ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿತ್ತು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಠಾಣೆಗೆ ಕೊಟ್ಟಿರುವ ದೂರಿನಲ್ಲಿ ಆರೋಪಿಸಿದೆ.

ಇದೀಗ ಮಗುವಿನ ಜನನ ವಿವರಗಳನ್ನು ಪರಿಶೀಲಿಸಿದಾಗ ಅಲ್ಲಿ ಮಗುವಿನ ತಾಯಿಯ ಹೆಸರು ವಸಂತಾ ಬದಲಾಗಿ ಪ್ರಿಯಾಂಕ ಎಂದು ನಮೂದಾಗಿರುವುದು ಗೊತ್ತಾಗಿದೆ. ಖಾಸಗಿ ಆಸ್ಪತ್ರೆಯವರು ಪಟ್ಟಣದ ಪುರಸಭೆಗೆ ಸಲ್ಲಿಸಿರುವ ಮಾಹಿತಿ ಪ್ರಕಾರ, 2022, ಜ.8ರಂದು ಗಂಡು ಮಗು ಜನಿಸಿದೆ ಎಂದು ತಿಳಿಸಿದ್ದಾರೆ. ವಾಸ್ತವವಾಗಿ ಮಗು ಜನಿಸಿದ್ದು 2021 ಡಿ.31ರಂದು. ಮಗು ಹುಟ್ಟಿದ ಮರುದಿನ ಪುರಸಭೆಗೆ ಮಾಹಿತಿ ಸಲ್ಲಿಸುವುದರ ಬದಲು ಎಂಟು ದಿನಗಳ ನಂತರ ನೀಡಿರುವುದು ಕೂಡ ಸಂಶಯಕ್ಕೆ ಎಡೆಮಾಡಿದೆ.

ಜ.31ರಂದು ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆಗೆಂದು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ಬಂದಾಗ ಅಲ್ಲಿನ ವೈದ್ಯರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಕೊಟ್ಟಿದ್ದಾರೆ. ಗುರುರಾಜ್ ಮತ್ತು ಪ್ರಿಯಾಂಕ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ಅಕ್ಕನ ಮಗಳು ಎಂದು ಸುಳ್ಳು ಹೇಳಿದ್ದರು. ನಂತರ ಹಾಲಸ್ವಾಮಿ, ವಸಂತಾ ಅವರನ್ನು ಕರೆಯಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಎದುರು ಪ್ರಸ್ತುತ ಪಡಿಸಿದ್ದರು. ಜನ್ಮ ದಾಖಲೆಗಳನ್ನು ಸಲ್ಲಿಸುವಂತೆ ಎರಡು ಕಡೆಯವರೆಗೂ ಗಡುವು ನೀಡಲಾಗಿತ್ತು. ಸೂಕ್ತ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾಗಿರುವುದರಿಂದ ತನಿಖೆ ಮಾಡುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮಗು ತನ್ನದೇ ಎನ್ನುವುದಕ್ಕೆ ಸಂಬಂಧಿಸಿ ವಸಂತಾ ಮತ್ತು ಪ್ರಿಯಾಂಕ ಇಬ್ಬರೂ ಪುರಾವೆಗಳನ್ನು ಒದಗಿಸಿಲ್ಲ. ಮಗು ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಜೈವಿಕ ಪೋಷಕರು ಯಾರು ಎನ್ನುವುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ. ಇದೇ ವೇಳೆ ಗುರುರಾಜ್‌, ವಸಂತಾ ಹಾಗೂ ಹಾಲಸ್ವಾಮಿ ತಲೆಮರೆಸಿಕೊಂಡಿದ್ದಾರೆ. ಈ ಕುರಿತು ಆಸ್ಪತ್ರೆ ವೈದ್ಯರು, ಹಾಲಸ್ವಾಮಿ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.

*
ಮಗು ಮಾರಾಟದ ಶಂಕೆಯ ಬಗ್ಗೆ ದೂರು ಬಂದಿದೆ. ತನಿಖೆ ಆರಂಭಿಸಲಾಗಿದೆ. ಮಗುವಿನ ಜನ್ಮ ದಾಖಲೆ ಪತ್ತೆ ಹಚ್ಚಿ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಲಾಗುವುದು.
-ಡಾ.ಅರುಣ್ ಕೆ. ಎಸ್ಪಿ ವಿಜಯನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು